‘ಲವ್ ಯೂ ರಚ್ಚು’ ಶೂಟಿಂಗ್ ವೇಳೆ ಫೈಟರ್ ವಿವೇಕ್ ಮೃತಪಟ್ಟಿದ್ದರು. ರಾಮನಗರ ತಾಲೂಕಿನ ಜೋಗನದೊಡ್ಡಿ ಬಳಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದ ವೇಳೆ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ವಿವೇಕ್ ಪ್ರಾಣ ಹೋಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಅನೇಕರ ಬಂಧನ ನಡೆದಿದೆ. ಈಗ ಚಿತ್ರದ ನಟ ಅಜಯ್ ರಾವ್ ಅವರು ಬಿಡದಿ ಪೊಲೀಸ್ ಠಾಣೆಗೆ ಬಂದು ತಮ್ಮ ಹೇಳಿಕೆ ನೀಡಿದ್ದಾರೆ.
ವಿವೇಕ್ ಮೃತಪಟ್ಟ ನಂತರದಲ್ಲಿ ಮಾಧ್ಯಮದ ಜತೆ ಮಾತನಾಡಿದ್ದ ಅಜಯ್ ರಾವ್, ಶೂಟಿಂಗ್ ಸ್ಥಳದಲ್ಲಿ ತಾವು ಇದ್ದಿದ್ದನ್ನು ಖಚಿತಪಡಿಸಿದ್ದರು. ‘ನಾನು ಘಟನೆ ನಡೆದ ಜಾಗದಿಂದ 200 ಮೀಟರ್ ದೂರದಲ್ಲಿದ್ದೆ. ಹುಡುಗರು ಬಂದು ಹೇಳಿದಾಗ ವಿಷಯ ತಿಳಿಯಿತು. ಮುಂಜಾಗ್ರತ ಕ್ರಮ ತೆಗೆದುಕೊಳ್ಳದ್ದಕ್ಕೆ ದುರಂತ ನಡೆದಿದೆ. ಈ ದೃಶ್ಯದ ಚಿತ್ರೀಕರಣದಲ್ಲಿ ನಾನಿದ್ದರೆ ಮಾಡುತ್ತಿರಲಿಲ್ಲ’ ಎಂದು ಅವರು ಹೇಳಿದ್ದರು. ಆದರೆ ಮತ್ತೋರ್ವ ಫೈಟರ್ ರಂಜಿತ್ ಬೇರೆ ರೀತಿಯಲ್ಲಿ ಹೇಳಿಕೆ ನೀಡಿದ್ದರು. ‘ಅಜಯ್ ರಾವ್ ಅವರು ಕೇವಲ 10-20 ಮೀಟರ್ ಅಂತರದಲ್ಲೇ ಇದ್ದರು’ ಎಂದಿದ್ದರು. ಹೀಗಾಗಿ, ಈ ವಿಷಯ ವಿಚಾರಣೆ ದೃಷ್ಟಿಯಲ್ಲಿ ಮಹತ್ವ ಪಡೆದುಕೊಂಡಿದೆ. ಈ ಬಗ್ಗೆಯೂ ಪೊಲೀಸರು ಅಜಯ್ಗೆ ಪ್ರಶ್ನೆ ಮಾಡಿರುವ ಸಾಧ್ಯತೆ ಇದೆ. ರಾಮನಗರ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್ ನೇತೃತ್ವದಲ್ಲಿ ವಿಚಾರಣೆ ನಡೆದಿದೆ.
ಮಂಗಳವಾರ (ಆಗಸ್ಟ್ 24) ಬಿಡದಿ ಪೊಲೀಸ್ ಠಾಣೆಗೆ ಹಾಜರಾಗಿ ರಚಿತಾ ರಾಮ್ ವಿಚಾರಣೆ ಎದುರಿಸಿದ್ದರು. ಡಿವೈಎಸ್ಪಿ ಮೋಹನ್ ಕುಮಾರ್ ಅವರೇ ರಚಿತಾ ಅವರನ್ನು 45 ನಿಮಿಷಗಳ ಕಾಲ ಪ್ರಶ್ನೆ ಮಾಡಿದ್ದರು. ಪೊಲೀಸರ ವಿಚಾರಣೆ ಬಳಿಕ ರಚಿತಾ ರಾಮ್ ಪ್ರತಿಕ್ರಿಯೆ ನೀಡಿದ್ದರು. ‘ನನಗೆ ವಿಷಯ ಗೊತ್ತಾಗಿರಲಿಲ್ಲ. ಮಾಧ್ಯಮಗಳಿಂದ ಈ ವಿವರ ಗೊತ್ತಾಯ್ತು. ಫೈಟರ್ ಮೃತಪಟ್ಟಿರುವುದು ಅಷ್ಟೇ ನನಗೆ ಗೊತ್ತು. ಘಟನೆ ನಡೆದಾಗ ನಾನು ಅಲ್ಲಿ ಇರಲಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ, ಏನಾಗುತ್ತದೆ ನೋಡೋಣ. ಇದು ಉದ್ದೇಶಪೂರ್ವಕವಾಗಿ ನಡೆದ ಘಟನೆ ಅಲ್ಲ. ಇಂತಹ ದುರಂತ ನಡೆದಿರುವುದಕ್ಕೆ ನನಗೂ ನೋವು ಇದೆ’ ಎಂದಿದ್ದರು ರಚಿತಾ.
ಇದನ್ನೂ ಓದಿ: ಬಿಡದಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸಿದ ನಟಿ ರಚಿತಾ ರಾಮ್