‘ಲವ್ ಯೂ ರಚ್ಚು’ ಶೂಟಿಂಗ್ ವೇಳೆ ಫೈಟರ್ ವಿವೇಕ್ ಮೃತಪಟ್ಟ ಘಟನೆಗೆ ಸಂಬಂಧಿಸಿ ನಟ ಅಜಯ್ ರಾವ್ ಅವರು ಇಂದು (ಆಗಸ್ಟ್ 26) ಬಿಡದಿ ಪೊಲೀಸ್ ಠಾಣೆಗೆ ಬಂದು ವಿಚಾರಣೆ ಎದುರಿಸಿದ್ದಾರೆ. ನಂತರ ಮಾಧ್ಯಮದ ಜತೆ ಮಾತನಾಡಿದ ಅವರು, ‘ದುರಂತ ನಡೆದ ಬಳಿಕ ನಾನು ಎಲ್ಲೂ ಓಡಿಹೋಗಿಲ್ಲ’ ಎಂದಿದ್ದಾರೆ.
ಪ್ರತ್ಯಕ್ಷದರ್ಶಿ ಫೈಟರ್ ರಂಜಿತ್ ಅವರು ನೀಡಿದ್ದ ಹೇಳಿಕೆ ಸಾಕಷ್ಟು ಸೆನ್ಸೇಶನ್ ಸೃಷ್ಟಿ ಮಾಡಿತ್ತು. ‘ಘಟನೆ ನಡೆದ ಸ್ಥಳದಿಂದ ಅಜಯ್ ರಾವ್ ಅವರು ಕೇವಲ 10-20 ಮೀಟರ್ ಅಂತರದಲ್ಲೇ ಇದ್ದರು’ ಎಂದಿದ್ದರು ರಂಜಿತ್. ವಿಚಾರಣೆ ಮುಗಿಸಿ ಮಾಧ್ಯಮದ ಜತೆ ಮಾತನಾಡಿದ ಅಜಯ್ ರಾವ್ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
‘ಆಸ್ಪತ್ರೆಯಲ್ಲಿರುವವನಿಗೆ ಸುಳ್ಳು ಮಾಹಿತಿ ನೀಡಿ ಹೇಳಿಕೆ ಕೊಡಿಸಲಾಗಿದೆ. ಸೆಟ್ನಲ್ಲಿ ನಾನೊಬ್ಬನೇ ಇದ್ದೆನಾ? ಅಲ್ಲಿ ಎಲ್ಲರೂ ಇದ್ದರು. ಸಹಾಯ ಮಾಡಬೇಕು ಅಂದ್ರೆ ಏನು ಮಾಡಬೇಕು? ಯಾವ ರೀತಿ ಸಹಾಯ ಮಾಡಬೇಕು ಹೇಳಿ’ ಎಂದು ಪ್ರಶ್ನೆ ಮಾಡಿದ್ದಾರೆ ಅವರು.
‘ಪೊಲೀಸರು ಕೇಳಿದ ಪ್ರಶ್ನೆಗಳಿಗೆ ನಾನು ಉತ್ತರ ನೀಡಿದ್ದೇನೆ. ನಾನು ಹೆದರಿಕೊಂಡು ಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಿಲ್ಲ. ನನ್ನ ನಂಬಿ ನಿರ್ಮಾಪಕರು ನನ್ನ ಮೇಲೆ ಹಣ ಹೂಡಿರುತ್ತಾರೆ. ನಾನು ಹೆದರಿಕೊಂಡು ಎಲ್ಲೂ ಓಡಿ ಹೋಗಿಲ್ಲ’ ಎಂದಿದ್ದಾರೆ ಅಜಯ್ ರಾವ್.
ಮಂಗಳವಾರ (ಆಗಸ್ಟ್ 24) ಬಿಡದಿ ಪೊಲೀಸ್ ಠಾಣೆಗೆ ಹಾಜರಾಗಿ ರಚಿತಾ ರಾಮ್ ವಿಚಾರಣೆ ಎದುರಿಸಿದ್ದರು. ಡಿವೈಎಸ್ಪಿ ಮೋಹನ್ ಕುಮಾರ್ ಅವರೇ ರಚಿತಾ ಅವರನ್ನು 45 ನಿಮಿಷಗಳ ಕಾಲ ಪ್ರಶ್ನೆ ಮಾಡಿದ್ದರು. ಪೊಲೀಸರ ವಿಚಾರಣೆ ಬಳಿಕ ರಚಿತಾ ರಾಮ್ ಪ್ರತಿಕ್ರಿಯೆ ನೀಡಿದ್ದರು. ‘ನನಗೆ ವಿಷಯ ಗೊತ್ತಾಗಿರಲಿಲ್ಲ. ಮಾಧ್ಯಮಗಳಿಂದ ಈ ವಿವರ ಗೊತ್ತಾಯ್ತು. ಫೈಟರ್ ಮೃತಪಟ್ಟಿರುವುದು ಅಷ್ಟೇ ನನಗೆ ಗೊತ್ತು. ಘಟನೆ ನಡೆದಾಗ ನಾನು ಅಲ್ಲಿ ಇರಲಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ, ಏನಾಗುತ್ತದೆ ನೋಡೋಣ. ಇದು ಉದ್ದೇಶಪೂರ್ವಕವಾಗಿ ನಡೆದ ಘಟನೆ ಅಲ್ಲ. ಇಂತಹ ದುರಂತ ನಡೆದಿರುವುದಕ್ಕೆ ನನಗೂ ನೋವು ಇದೆ’ ಎಂದಿದ್ದರು ರಚಿತಾ.
ಇದನ್ನೂ ಓದಿ: ಫೈಟರ್ ಸಾವು ಕೇಸ್: ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನಿಗೆ ಅಜಯ್ ರಾವ್ ಅರ್ಜಿ