ಫೈಟರ್ ಸಾವು ಕೇಸ್: ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನಿಗೆ ಅಜಯ್ ರಾವ್ ಅರ್ಜಿ
ಫೈಟರ್ ವಿವೇಕ್ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗುವಂತೆ ಅಜಯ್ ರಾವ್ ಅವರಿಗೆ ಸೂಚನೆ ನೀಡಲಾಗಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗದೇ ಜಾಮೀನಿನ ಮೊರೆ ಹೋಗಿದ್ದಾರೆ.
‘ಲವ್ ಯೂ ರಚ್ಚು’ ಸಿನಿಮಾ ಶೂಟಿಂಗ್ ವೇಳೆ ವಿದ್ಯುತ್ ತಗುಲಿ ಫೈಟರ್ ವಿವೇಕ್ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ. ಈ ಪ್ರಕರಣದಲ್ಲಿ ಚಿತ್ರದ ಹೀರೋ ಅಜಯ್ ರಾವ್ ಅವರಿಗೆ ಬಂಧನ ಭೀತಿ ಎದುರಾಗಿದೆ. ಹಾಗಾಗಿ ಅವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ರಾಮನಗರದ 3ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ಗೆ ಅವರು ಅರ್ಜಿ ಸಲ್ಲಿಸಿದ್ದಾರೆ. ಆ.26ರಂದು ಅಜಯ್ ರಾವ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.
ಆ.9ರಂದು ಶೂಟಿಂಗ್ ವೇಳೆ ಫೈಟರ್ ವಿವೇಕ್ ಮೃತಪಟ್ಟಿದ್ದರು. ರಾಮನಗರ ತಾಲೂಕಿನ ಜೋಗನಪಾಳ್ಯ ಬಳಿ ಈ ದುರ್ಘಟನೆ ನಡೆದಾಗ ನಟ ಅಜಯ್ ರಾವ್ ಕೂಡ ಸ್ಥಳದಲ್ಲೇ ಇದ್ದರು. ಈಗಾಗಲೇ ಐವರ ವಿರುದ್ಧ ಬಿಡದಿ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ವಿಚಾರಣೆ ನಡೆಯಿತ್ತಿದೆ. ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಮಧ್ಯೆ ವಿಚಾರಣೆಗೆ ಹಾಜರಾಗುವಂತೆ ಅಜಯ್ ರಾವ್ ಅವರಿಗೆ ಸೂಚನೆ ನೀಡಲಾಗಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗದೇ ಜಾಮೀನು ಮೊರೆ ಹೋಗಿದ್ದಾರೆ.
ವಿಚಾರಣೆಗೆ ಹಾಜರಾದ ರಚಿತಾ ರಾಮ್:
ಘಟನೆಗೆ ಸಂಬಂಧಿಸಿದಂತೆ ಚಿತ್ರದ ನಾಯಕಿ ರಚಿತಾ ರಾಮ್ ಅವರು ಪೊಲೀಸರಿಂದ ವಿಚಾರಣೆ ಎದುರಿಸಿದ್ದಾರೆ. ಮಂಗಳವಾರ (ಆ.24) ಬಿಡದಿ ಪೊಲೀಸ್ ಠಾಣೆಗೆ ರಚಿತಾ ರಾಮ್ ಹಾಜರಾದರು. ಡಿವೈಎಸ್ಪಿ ಮೋಹನ್ ಕುಮಾರ್ ಅವರು ರಚಿತಾ ಅವರನ್ನು 45 ನಿಮಿಷಗಳ ಕಾಲ ವಿಚಾರಣೆ ನಡೆಸಿದರು. ಪೊಲೀಸರು ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ಪೊಲೀಸರ ವಿಚಾರಣೆ ಬಳಿಕ ಮಾತನಾಡಿದ ರಚಿತಾ, ‘ನನಗೆ ವಿಷಯ ಗೊತ್ತಾಗಿರಲಿಲ್ಲ. ಮಾಧ್ಯಮಗಳಿಂದ ಈ ವಿಚಾರ ಗೊತ್ತಾಯ್ತು. ಫೈಟರ್ ಮೃತಪಟ್ಟಿರುವುದು ಅಷ್ಟೇ ನನಗೆ ಗೊತ್ತು. ಘಟನೆ ನಡೆದಾಗ ನಾನು ಅಲ್ಲಿ ಇರಲಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ. ಏನಾಗುತ್ತದೆ ನೋಡೋಣ. ಇದು ಉದ್ದೇಶಪೂರ್ವಕವಾಗಿ ನಡೆದ ಘಟನೆ ಅಲ್ಲ. ಇಂತಹ ದುರಂತ ನಡೆದಿರುವುದಕ್ಕೆ ನನಗೂ ನೋವು ಇದೆ’ ಎಂದಿದ್ದರು.
ನ್ಯಾಯಾಂಗ ಬಂಧನ ವಿಸ್ತರಣೆ:
ದುರ್ಘಟನೆಗೆ ಚಿತ್ರತಂಡದ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ನಿರ್ದೇಶಕ ಶಂಕರಯ್ಯ, ಸಾಹಸ ನಿರ್ದೇಶಕ ವಿನೋದ್ ಕುಮಾರ್, ಕ್ರೇನ್ ಚಾಲಕ ಮಹದೇವ್ ಅವರನ್ನು ಬಂಧಿಸಲಾಗಿತ್ತು. ಆಗಸ್ಟ್ 10ರಂದು ಇವರನ್ನು ರಾಮನಗರ ಹೆಚ್ಚುವರಿ ಸಿವಿಲ್ ಕೋರ್ಟ್ ಮುಂದೆ ಹಾಜರು ಪಡಿಸಲಾಗಿತ್ತು. ಈ ವೇಳೆ ನ್ಯಾಯಾಧೀಶೆ ಅನುಪಮಾ ಲಕ್ಷ್ಮೀ ಅವರು 14 ದಿನ ನ್ಯಾಯಾಂಗ ಬಂಧನ ವಿಧಿಸಿದ್ದರು. ಮಂಗಳವಾರ (ಆ.24) ಮತ್ತೆ ಈ ಮೂವರನ್ನು ರಾಮನಗರ ಹೆಚ್ಚುವರಿ ಸಿವಿಲ್ ಕೋರ್ಟ್ ಮುಂದೆ ವಿಡಿಯೋ ಕಾಲ್ ಮೂಲಕ ಹಾಜರು ಪಡಿಸಲಾಯಿತು. ಈ ವೇಳೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ.
ಇದನ್ನೂ ಓದಿ:
‘ವಿವೇಕ್ ಮೂಗಲ್ಲಿ ರಕ್ತ ಬಂದಾಗ ನಮಗೆ ಗಾಬರಿ ಆಯ್ತು; ಅಜಯ್ ರಾವ್ ಅಲ್ಲೇ ಇದ್ದರು’: ರಂಜಿತ್ ನೇರ ಮಾತು
ಫೈಟರ್ ಸಾವು: ರಚಿತಾ ರಾಮ್, ಅಜಯ್ ರಾವ್ ಬಂಧನಕ್ಕೆ ಎಐಸಿಸಿ ಹ್ಯುಮನ್ ರೈಟ್ಸ್ ಸಂಘಟನೆ ಒತ್ತಾಯ