ಫೈಟರ್ ಸಾವು: ರಚಿತಾ ರಾಮ್, ಅಜಯ್ ರಾವ್ ಬಂಧನಕ್ಕೆ ಎಐಸಿಸಿ ಹ್ಯುಮನ್ ರೈಟ್ಸ್ ಸಂಘಟನೆ ಒತ್ತಾಯ
Fighter Vivek Death: ಫೈಟರ್ ವಿವೇಕ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಎಐಸಿಸಿ ಹ್ಯುಮನ್ ರೈಟ್ಸ್ ಸಂಘಟನೆ ದೂರು ನೀಡಿದೆ. ‘ದುರ್ಘಟನೆ ನಡೆದಾಗ ಆ ಸ್ಥಳದಲ್ಲಿ ಅಜಯ್ ರಾವ್ ಇದ್ದರು. ರಚಿತಾ ರಾಮ್ ಜೊತೆ ಕ್ಯಾಮೆರಾಮ್ಯಾನ್ ಕೂಡ ಬಂಧನವಾಗಬೇಕು’ ಎಂದು ಮನವಿ ಮಾಡಿಕೊಳ್ಳಲಾಗಿದೆ.
‘ಲವ್ ಯೂ ರಚ್ಚು’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಸೋಮವಾರ (ಆ.9) ವಿದ್ಯುತ್ ತಗುಲಿ ಫೈಟರ್ ವಿವೇಕ್ ನಿಧನರಾದ ಘಟನೆಗೆ ಹಲವರಿಂದ ಆಕ್ರೋಶ ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದ ನಾಯಕ ಅಜಯ್ ರಾವ್, ನಾಯಕಿ ರಚಿತಾ ರಾಮ್ ಅವರನ್ನೂ ಬಂಧಿಸುವಂತೆ ಎಐಸಿಸಿ ಹ್ಯುಮನ್ ರೈಟ್ಸ್ ಸಂಘಟನೆ (AICC Human Rights) ದೂರು ನೀಡಿದೆ. ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ. ‘ದುರ್ಘಟನೆ ನಡೆದಾಗ ಆ ಸ್ಥಳದಲ್ಲಿ ಅಜಯ್ ರಾವ್ ( Ajay Rao) ಇದ್ದರು. ರಚಿತಾ ರಾಮ್ (Rachita Ram) ಜೊತೆ ಕ್ಯಾಮೆರಾಮ್ಯಾನ್ ಕೂಡ ಬಂಧನವಾಗಬೇಕು. ಇವರನ್ನೆಲ್ಲ ಬಿಟ್ಟು ಉಳಿದವರನ್ನು ಬಂಧಿಸಲಾಗಿದೆ’ ಎಂದು ಎಐಸಿಸಿ ಹ್ಯುಮನ್ ರೈಟ್ಸ್ ಸಂಘಟನೆ ಹೇಳಿದೆ. ಇದಕ್ಕೂ ಮುನ್ನ ಬಿಡದಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಿರ್ದೇಶಕ ಶಂಕರ್ ರಾಜ್ ಎ1, ನಿರ್ಮಾಪಕ ಗುರು ದೇಶಪಾಂಡೆ (Guru Deshpande) ಎ2, ಚಿತ್ರದ ಸಾಹಸ ನಿರ್ದೇಶಕ ವಿನೋದ್ ಕುಮಾರ್ ಎ3, ಸಿನಿಮಾ ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡಿಸ್ ಎ4 ಹಾಗೂ ಕ್ರೇನ್ ಆಪರೇಟರ್ ಮಹದೇವ್ ಎ5 ಎಂದು ಬಿಡದಿ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಗುರು ದೇಶಪಾಂಡೆ ಮತ್ತು ಫರ್ನಾಂಡಿಸ್ ಇನ್ನೂ ಪೊಲೀಸರಿಗೆ ಸಿಕ್ಕಿಲ್ಲ. ಇನ್ನುಳಿದವರನ್ನು ಇಂದು (ಆ.10) ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು.
ಮೂವರು ಆರೋಪಿಗಳಿಗೆ ಆಗಸ್ಟ್ 24ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನಿರ್ದೇಶಕ ಶಂಕರಯ್ಯ, ಕ್ರೇನ್ ಚಾಲಕ ಮಹದೇವ್, ಫೈಟ್ ಮಾಸ್ಟರ್ ವಿನೋದ್‌ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಜಡ್ಜ್ ಆದೇಶ ನೀಡಿದ್ದಾರೆ. ರಾಮನಗರ ಹೆಚ್ಚುವರಿ ಸಿವಿಲ್ ಕೋರ್ಟ್ನ ನ್ಯಾಯಾಧೀಶೆ ಅನುಪಮಾ ಲಕ್ಷ್ಮೀ ಈ ಆದೇಶವನ್ನು ನೀಡಿದ್ದಾರೆ. ನ್ಯಾಯಾಂಗ ಬಂಧನದ ಹಿನ್ನೆಲೆಯಲ್ಲಿ ಮೂವರನ್ನು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಪೊಲೀಸರು ರವಾನಿಸಿದ್ದಾರೆ.
ಮೃತ ವಿವೇಕ್ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡುವುದಾಗಿ ನಿರ್ಮಾಪಕ ಗುರು ದೇಶಪಾಂಡೆ ಅವರು ಭರವಸೆ ನೀಡಿದ್ದಾರೆ. ಕಾನ್ಫರೆನ್ಸ್ ಕಾಲ್ ಮೂಲಕ ಮೃತರ ಸಂಬಂಧಿಕರ ಜೊತೆ ಅವರು ಮಾತನಾಡಿದ್ದಾರೆ. ಇನ್ನೋರ್ವ ಗಾಯಾಳು ರಂಜಿತ್ ಅವರು ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:
ಮುಂಜಾಗ್ರತ ಕ್ರಮ ಕೈಗೊಂಡಿರಲಿಲ್ಲ, ವಿವೇಕ್ಗೆ ನ್ಯಾಯ ಸಿಗುವವರೆಗೆ ಶೂಟಿಂಗ್ಗೆ ಬರಲ್ಲ’; ಅಜಯ್ ರಾವ್
ಪೊಲೀಸರ ಕೈಗೆ ಸಿಗದ ಗುರು ದೇಶಪಾಂಡೆ; ಮೃತನ ಕುಟುಂಬಕ್ಕೆ 10 ಲಕ್ಷ ಪರಿಹಾರದ ಭರವಸೆ