
ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ಅವರು ಈ ಮೊದಲು ‘ಹೊಂಬಣ್ಣ’, ‘ಎಂಥಾ ಕಥೆ ಮಾರಾಯ’ ಹಾಗೂ ‘ತಿಮ್ಮನ ಮೊಟ್ಟೆಗಳು’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದರು. ಈಗ ಅವರ 4ನೇ ಸಿನಿಮಾ ‘ಮೋಡ ಮಳೆ ಮತ್ತು ಶೈಲ’ (Moda Male Mattu Shaila) ಸಿದ್ಧವಾಗುತ್ತಿದೆ. ಈ ಸಿನಿಮಾದ ಶೀರ್ಷಿಕೆ ಗಮನ ಸೆಳೆಯುತ್ತಿದೆ. ‘ಶ್ರೀಕೃಷ್ಣ ಪ್ರೊಡಕ್ಷನ್ ಬ್ಯಾನರ್’ ಮೂಲಕ ಆದರ್ಶ್ ಅಯ್ಯಂಗಾರ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ‘ತಿಮ್ಮನ ಮೊಟ್ಟೆಗಳು’ ಸಿನಿಮಾವನ್ನು ಜೊತೆಯಾಗಿ ಮಾಡಿದ್ದ ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ಮತ್ತು ನಿರ್ಮಾಪಕ ಆದರ್ಶ ಅಯ್ಯಂಗಾರ್ ಅವರು ‘ಮೋಡ, ಮಳೆ ಮತ್ತು ಶೈಲ’ ಸಿನಿಮಾಗಾಗಿ ಮತ್ತೆ ಕೈ ಜೋಡಿಸಿದ್ದಾರೆ. ಇದು ಮಹಿಳಾ ಪ್ರಧಾನ ಸಿನಿಮಾ ಆಗಿದ್ದು, ಅಕ್ಷತಾ ಪಾಂಡವಪುರ (Akshatha Pandavapura) ಪ್ರಮುಖ ಪಾತ್ರ ಮಾಡಿದ್ದಾರೆ.
‘ಮೋಡ, ಮಳೆ ಮತ್ತು ಶೈಲ’ ಸಿನಿಮಾದಲ್ಲಿ ಅಕ್ಷತಾ ಪಾಂಡವಪುರ ಅವರ ಜೊತೆ ಗೋಪಾಲಕೃಷ್ಣ ದೇಶಪಾಂಡೆ, ಉತ್ಪಲ್ ಗೌಡ, ಸಂಪತ್ ಮೈತ್ರೇಯ, ರಾಘು ರಾಮನಕೊಪ್ಪ, ಅಶ್ವಿನ್ ಹಾಸನ, ಬಲರಾಜ್ ವಾಡಿ ಕೂಡ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಈಗಾಗಲೇ ಶೂಟಿಂಗ್ ಮುಗಿದಿದೆ. ಇತ್ತೀಚೆಗೆ ಶೀರ್ಷಿಕೆ ಬಿಡುಗಡೆ ಮಾಡಲಾಯಿತು. ಹಿರಿಯ ಪಿ.ಆರ್.ಓ. ಸುಧೀಂದ್ರ ವೆಂಕಟೇಶ್ ಅವರು ಟೈಟಲ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಸುದ್ದಿಗೋಷ್ಠಿಯಲ್ಲಿ ‘ಮೋಡ, ಮಳೆ ಮತ್ತು ಶೈಲ’ ಸಿನಿಮಾದ ನಿರ್ದೇಶಕ ಹಾಗೂ ಬರಹಗಾರ ರಕ್ಷಿತ್ ತೀರ್ಥಹಳ್ಳಿ ಅವರು ಮಾತನಾಡಿದರು. ‘ಸದ್ಯ ನಮ್ಮ ಸಿನಿಮಾಗೆ ಪೋಸ್ಟ್ ಪ್ರೊಡಕ್ಷನ್ ಕೊನೆಯ ಹಂತದ ಕೆಲಸ ನಡೆಯುತ್ತಿದೆ. ಆದರ್ಶ ಅಯ್ಯಂಗಾರ್ ಅವರಿಗೆ ಕಥೆ ಹೇಳಿದಾಗ ಕಂಟೆಂಟ್ ಸ್ಟ್ರಾಂಗ್ ಆಗಿದೆ ಸಿನಿಮಾ ಮಾಡೋಣ ಅಂದರು. ಈ ಸಿನಿಮಾವನ್ನು ಸಂಪೂರ್ಣ ಮಳೆಯಲ್ಲಿಯೇ ಸಿಂಕ್ ಸೌಂಡ್ನಲ್ಲಿ ಚಿತ್ರೀಕರಣ ಮಾಡಿದ್ದೇವೆ’ ಎಂದು ಸಿನಿಮಾದ ವಿಶೇಷತೆ ಬಗ್ಗೆ ರಕ್ಷಿತ್ ಅವರು ತಿಳಿಸಿದರು.
‘ಮೋಡ, ಮಳೆ ಮತ್ತು ಶೈಲ’ ಸಿನಿಮಾಗೆ ತೀರ್ಥಹಳ್ಳಿ, ಕುಂದಾಪುರ ಗಡಿಭಾಗಗಳ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ನಿರ್ದೇಶಕರು 2012-13ರ ಕಾಲಘಟ್ಟದಲ್ಲಿ ನೋಡಿದ ಮತ್ತು ಕೇಳಿದ ಒಂದಿಷ್ಟು ಕಥೆ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಂಪತ್ ಮೈತ್ರೇಯ, ಉತ್ಪಲ್ ಗೌಡ, ಶ್ರೀಹರ್ಷ ಗೋಭಟ್, ಕಣಿವೆ ವಿನಯ್, ಅಶ್ವಿನ್ ಹಾಸನ್, ಅಕ್ಷಯ್ ಪಿ. ರಾವ್, ಸಾಗರ ಹೆಚ್.ಜಿ. ಮುಂತಾದವರು ಹಾಜರಿದ್ದರು.
ಇದನ್ನೂ ಓದಿ: ರೋಹಿಣಿ ಸಿಂಧೂರಿ ಬಯೋಪಿಕ್ ಬಗ್ಗೆ ಚರ್ಚೆ; ಅಕ್ಷತಾ ಪಾಂಡವಪುರ ಹೆಸರನ್ನು ಸೂಚಿಸಿದ ಹಿರಿಯ ಬರಹಗಾರ್ತಿ
ತಮ್ಮ ಪಾತ್ರದ ಬಗ್ಗೆ ನಟಿ ಅಕ್ಷತಾ ಪಾಂಡವಪುರ ಅವರು ಮಾತನಾಡಿದರು. ಈ ಚಿತ್ರದಲ್ಲಿ ಅವರು ಶೈಲ ಎಂಬ ಪಾತ್ರ ಮಾಡಿದ್ದಾರೆ. ‘ನಾನು ಮೂಲತಃ ರಂಗಭೂಮಿ ಕಲಾವಿದೆ. ಈ ರೀತಿಯ ಸಿನಿಮಾ ನನಗೆ ಭವಿಷ್ಯದಲ್ಲಿ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಹಾಗಾಗಿ ಇದು ನನಗೆ ವಿಶೇಷ ಸಿನಿಮಾ. ಇದರಲ್ಲಿ ಮಲೆನಾಡಿನ ಒಂಟಿ ಹೆಣ್ಣಿನ ಕಥೆ ಹೇಳಲಾಗುತ್ತಿದೆ. ಸಿನಿಮಾಗಾಗಿ ನಿರ್ದೇಶಕರು ಬಹಳ ಶ್ರಮಪಟ್ಟಿದ್ದಾರೆ. ಇದರಲ್ಲಿ ಮಳೆ ಕೂಡ ಒಂದು ಪ್ರಮುಖ ಪಾತ್ರವಾಗಿ ಇರಲಿದೆ’ ಎಂದು ಅವರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.