‘ಶ್ರೀಮತಿ ಸಿಂಧೂರ’ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ: ನೆರವೇರಿತು ಮುಹೂರ್ತ
‘ಶ್ರೀಮತಿ ಸಿಂಧೂರ’ ಚಿತ್ರದಲ್ಲಿ ವಿಜಯ್ ರಾಘವೇಂದ್ರ, ಪ್ರಿಯಾ ಹೆಗಡೆ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇತ್ತೀಚೆಗೆ ವಿಜಯದಶಮಿ ಪ್ರಯುಕ್ತ ಮಾರಮ್ಮ ದೇವಿ ದೇವಸ್ಥಾನದಲ್ಲಿ ಈ ಸಿನಿಮಾಗೆ ಮುಹೂರ್ತ ಮಾಡಲಾಯಿತು. ಅಕ್ಟೋಬರ್ 23ರಿಂದ ಚಿತ್ರೀಕರಣ ಶುರು ಆಗಲಿದೆ. ‘ಶ್ರೀಮತಿ ಸಿಂಧೂರ’ ಬಗ್ಗೆ ಇಲ್ಲಿದೆ ಮಾಹಿತಿ.

ರಿಯಲ್ ಎಸ್ಟೇಟ್ ಉದ್ಯಮಿ ಡಿ.ಎನ್. ನಾಗೀರೆಡ್ಡಿ ಅವರು ನಿರ್ಮಾಣ ಮಾಡುತ್ತಿರುವ ‘ಶ್ರೀಮತಿ ಸಿಂಧೂರ’ (Shreemati Sindoora) ಸಿನಿಮಾಗೆ ಮುಹೂರ್ತ ಮಾಡಲಾಗಿದೆ. ‘ಆರ್ ಆ್ಯಂಡ್ ಆರ್ ಎಂಟರ್‌ಪ್ರೈಸಸ್’ ಮೂಲಕ ಈ ಸಿನಿಮಾ ಸಿದ್ಧ ಆಗುತ್ತಿದೆ. ಆರ್. ಅನಂತರಾಜು ಅವರು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ‘ಶ್ರೀಮತಿ ಸಿಂಧೂರ’ ಚಿತ್ರಕ್ಕೆ ವಿಜಯದಶಮಿ ಶುಭದಿನದಂದು ಶ್ರೀಮಾರಮ್ಮ ದೇವಿ ಸನ್ನಿಧಿಯಲ್ಲಿ ಮುಹೂರ್ತ ಮಾಡಲಾಯಿತು. ಸಿನಿಮಾದ ಪ್ರಥಮ ದೃಶ್ಯಕ್ಕೆ ನಿರ್ಮಾಪಕರ ಪತ್ನಿ ಕ್ಲ್ಯಾಪ್ ಮಾಡಿದರು. ವಿಜಯ್ ರಾಘವೇಂದ್ರ (Vijay Raghavendra) ಅವರು ಈ ಸಿನಿಮಾಗೆ ಹೀರೋ.
‘ಶ್ರೀಮತಿ ಸಿಂಧೂರ’ ಚಿತ್ರದಲ್ಲಿ ನಾಯಕ ವಿಜಯ್ ರಾಘವೇಂದ್ರ ಅವರಿಗೆ ಜೋಡಿಯಾಗಿ ಪ್ರಿಯಾ ಹೆಗಡೆ ನಟಿಸುತ್ತಿದ್ದಾರೆ. ಅವರು ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ರೇಷ್ಮಾ ವಿ. ಗೌಡ ಅವರು ಉಪನಾಯಕಿ ಆಗಿದ್ದಾರೆ. ಪ್ರಸನ್ನ ಬಾಗೀನ, ಗಣೇಶ್ ರಾವ್ ಕೇಸರ್‌ಕರ್ ಅವರು ವಿಲನ್‌ಗಳಾಗಿ ನಟಿಸುತ್ತಿದ್ದಾರೆ. ‘ಕಾಂತಾರ’ ಸಿನಿಮಾ ಮೂಲಕ ಗಮನ ಸೆಳೆದ ಮಾನಸಿ ಸುಧೀರ್ ಅವರು ಕೂಡ ‘ಶ್ರೀಮತಿ ಸಿಂಧೂರ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಮನೋಜ್, ರಿತೇಶ್, ಸ್ನೇಹ ಜಾದವ್ ಮುಂತಾದವರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ.
ವಿಶ್ವ ದೇಹದಾರ್ಡ್ಯ ಪಟು, ಬೀದರ್ ಮೂಲದ ಮಾರುತಿ ಅವರು ಆಂಜನೇಯ ಸ್ವಾಮಿಯಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೂಡಿಗೆರೆ, ಸಕಲೇಶಪುರ, ಚಿಕ್ಕಮಗಳೂರು ಮುಂತಾದ ಸುಂದರ ಸ್ಥಳಗಳಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಆ ಬಗ್ಗೆ ನಿರ್ದೇಶಕ ಆರ್. ಅನಂತರಾಜು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಈ ಸಿನಿಮಾಗೆ ರಾಜೇಶ್ ರಾಮನಾಥ್ ಅವರು ಸಂಗೀತ ನೀಡುತ್ತಿದ್ದಾರೆ. ಕವಿರಾಜ್, ಕೆ. ಕಲ್ಯಾಣ್ ಮತ್ತು ಆರ್. ಅನಂತರಾಜು ಅವರು ಸಾಹಿತ್ಯ ಬರೆಯುತ್ತಿದ್ದಾರೆ. ಪಿ.ಕೆ.ಹೆಚ್. ದಾಸ್ ಅವರು ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಆರ್. ಗಂಗಾಧರ್ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಫೈವ್‌ಸ್ಟಾರ್ ಗಣೇಶ್ ಅವರು ನೃತ್ಯ ನಿರ್ದೇಶನ ಮಾಡಲಿದ್ದಾರೆ.
ಇದನ್ನೂ ಓದಿ: ‘ಮಹಾನ್’ ನಾಯಕನಾಗಿ ವಿಜಯ್ ರಾಘವೇಂದ್ರ, ಶುಭ ಕೋರಿದ ಶಿವಣ್ಣ
‘ಹುಡುಗಿಯೊಬ್ಬಳು ಮದುವೆ ನಂತರ ಶ್ರೀಮತಿ ಆಗುತ್ತಾಳೆ. ಸಿಂಧೂರ ಎನ್ನುವುದು ಆಕೆಗೆ ಸಿಗುವ ಗೌರವ. ಅದೇ ರೀತಿ ಜವಾಬ್ದಾರಿಯುತ ಹುಡುಗನೊಬ್ಬ ಇಷ್ಟಪಟ್ಟ ಹುಡುಗಿಯನ್ನು ಮದುವೆ ಆಗುತ್ತಾನೆ. ಸಂಸಾರದಲ್ಲಿ ದೈವಭಕ್ತಿ ಇರಬೇಕು. ನಾವು ನಂಬಿದ ದೇವರು ಎಂದಿಗೂ ಕೈ ಬಿಡುವುದಿಲ್ಲ ಎಂಬ ಕಥೆಯ ಎಳೆ ಈ ಸಿನಿಮಾದಲ್ಲಿ ಇದೆ’ ಎಂದು ನಿರ್ದೇಶಕರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:04 pm, Wed, 8 October 25




