‘ಕಾಂತಾರ’ದ ಬಗ್ಗೆ ದೈವಾರಾಧಕರ ಅಸಮಾಧಾನ, ದೈವದ ಮೊರೆ ಹೋಗಲು ನಿರ್ಧಾರ
Kantara Chapter 1 movie: ಕಾಂತಾರ: ಚಾಪ್ಟರ್ 1 ಸಿನಿಮಾ ಬಿಡುಗಡೆ ಆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ದೈವದ ಅನುಕರಣೆ ಮಾಡುತ್ತಿರುವವರ ವಿಡಿಯೋ ಹರಿದಾಡುತ್ತಲೇ ಇದೆ. ಇದೀಗ ದೈವಾರಾಧಾಕರು ‘ಕಾಂತಾರ’ ಸಿನಿಮಾ ಮತ್ತು ದೈವದ ಅಪಹಾಸ್ಯ ಮಾಡುತ್ತಿರುವವರ ವಿರುದ್ಧ ದೈವದ ಬಳಿಯೇ ದೂರು ನೀಡಲು ನಿರ್ಧರಿಸಿದ್ದಾರೆ.

ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆಗಿ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸಿನಿಮಾ ನೋಡಿದವರು ರಿಷಬ್ ಶೆಟ್ಟಿಯ ನಿರ್ದೇಶನ ಹಾಗೂ ನಟನೆಗೆ ಉಘೆ ಎನ್ನುತ್ತಿದ್ದಾರೆ. ಆದರೆ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕೆಲ ದೈವಾರಾಧಕರ ಅಸಮಾಧಾನಕ್ಕೆ ಕಾರಣವಾಗಿದೆ. ಸಿನಿಮಾ ಬಿಡುಗಡೆ ಬಳಿಕ ಮನೊರಂಜನೆಗಾಗಿ, ಸಾಮಾಜಿಕ ಜಾಲತಾಣದಲ್ಲಿ ಲೈಕುಗಳನ್ನು ಪಡೆಯಲು ದೈವದ ಅನುಕರಣೆ ಹೆಚ್ಚಾಗಿರುವುದು ದೈವಾರಾಧಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಇದೀಗ ದೈವದ ಮೊರೆ ಹೋಗಲು ಆರಾಧಕರು ನಿರ್ಣಯಿಸಿದ್ದಾರೆ.
‘ಕಾಂತಾರ’ ಸಿನಿಮಾನಲ್ಲಿ ದೈವಾರಾಧನೆಯನ್ನು ಬಳಕೆ ಮಾಡಿರುವುದಕ್ಕೆ ಹಾಗೂ ಸಿನಿಮಾನಲ್ಲಿ ಪಂಜುರ್ಲಿ, ಗುಳಿಗ ಮತ್ತುಪಿಲಿ ದೈವಗಳ ಬಳಕೆ ಮಾಡಿರುವುದಕ್ಕೆ, ದೈವದ ಆವೇಶ ಮತ್ತು ದೈವ ನರ್ತನದ ಬಳಕೆಯ ಬಗ್ಗೆ ದೈವಾರಾಧಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೈವಾರಾಧಕರು ಸಿನಿಮಾದ ವಿರುದ್ಧ ದೈವಕ್ಷೇತ್ರದಲ್ಲಿ ದೂರು ನೀಡಲಿದ್ದಾರೆ. ದೈವದ ಅಪಹಾಸ್ಯ, ಅನುಕರಣೆ ಮಾಡುವವರ ವಿರುದ್ಧ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲಿದ್ದಾರೆ.
ಮಂಗಳೂರಿನ ಹೊರವಲಯದ ಬಜಪೆ, ಪೆರಾರ, ಬ್ರಹ್ಮ ಬಲವಂಡಿ, ಪಿಲ್ಚಂಡಿ ದೈವಸ್ಥಾನಗಳಲ್ಲಿ ದೈವ ನರ್ತಕರು, ದೈವಾರಾಧಕರಿಂದ ಇಂದು (ಅಕ್ಟೋಬರ್ 09) ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ದೈವದ ಎದುರು ಸಿನಿಮಾ ಬಗ್ಗೆ ದೂರು ಸಲ್ಲಿಸಲಾಗುತ್ತಿದೆ. ಹಾಗೂ ದೈವದ ಅನುಕರಣೆ, ಅಪಹಾಸ್ಯ, ವ್ಯಂಗ್ಯ ಮಾಡುವವರ ವಿರುದ್ಧವೂ ದೂರು ಸಲ್ಲಿಕೆ ಆಗಲಿದೆ. ದೈವದ ಬಳಿ ದೂರು ನೀಡುವುದು ಕರಾವಳಿ, ಮಲೆನಾಡು ಭಾಗದಲ್ಲಿ ನಡೆದುಕೊಂಡು ಬಂದಿರುವ ನಂಬಿಕೆಯಾಗಿದೆ.
ಇದನ್ನೂ ಓದಿ:ಹೆಚ್ಚಾಯ್ತು ‘ಕಾಂತಾರ: ಚಾಪ್ಟರ್ 1’ ಕಲೆಕ್ಷನ್, ಮಂಗಳವಾರ ಗಳಿಸಿದ್ದೆಷ್ಟು?
ಸಾಮಾಜಿಕ ಜಾಲತಾಣಗಳಲ್ಲಿ ಸಹ ಈ ಬಗ್ಗೆ ಚರ್ಚೆ ಚಾಲ್ತಿಯಲ್ಲಿದ್ದು, ‘ಕಾಂತಾರ’ ಸಿನಿಮಾ ನೋಡಿ ದೈವದ ದೈವದ ಅನುಕರಣೆ ಮಾಡುತ್ತಿದ್ದಾರೆ ಅದು ತಪ್ಪು ಎಂದು ಹೇಳುತ್ತಿರುವವರು, ಸಿನಿಮಾನಲ್ಲಿ ರಿಷಬ್ ಶೆಟ್ಟಿ ದೈವದ ಅನುಕರಣೆ ಮಾಡಿದ್ದು ತಪ್ಪು ಎನಿಸಲಿಲ್ಲವೇ’ ಎಂದು ಪ್ರಶ್ನೆ ಮಾಡಿದ್ದಾರೆ. ‘ಸಿನಿಮಾಗಳು ಹುಟ್ಟಿದ್ದು ಈಗ ಆದರೆ ಸೂರ್ಯ-ಚಂದ್ರರ ಹುಟ್ಟಿನಿಂದಲೂ ನಮ್ಮ ಹಿರಿಯರು ದೈವದ ಆರಾಧನೆ ಮಾಡುತ್ತಲೇ ಬರುತ್ತಿದ್ದಾರೆ. ಸಿನಿಮಾಗಳಿಂದ ದೈವದ ಆರಾಧನೆಗೆ ಮಹತ್ವ ಸಿಕ್ಕಿತೆಂಬುದು ಸುಳ್ಳು’ ಎಂದು ಕೆಲವರು ದೈವಾರಾಧನೆಯ ಮಹತ್ವವವನ್ನು ಹೇಳಿದ್ದಾರೆ. ‘ಕಾಂತಾರ’ ಸಿನಿಮಾ ಏನೋ ಕೋಟಿ-ಕೋಟಿ ಹಣ ಗಳಿಸಿತು, ಆದರೆ ಕೋಟ್ಯಂತರ ಭಕ್ತರ ಭಕ್ತಿ ಮಾರಾಟವಾಯ್ತು’ ಎಂದು ವ್ಯಂಗ್ಯವಾಡಿದ್ದಾರೆ.
ರಿಷಬ್ ಶೆಟ್ಟಿ, ಹೊಂಬಾಳೆ ಫಿಲಮ್ಸ್, ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆದಾಗಿನಿಂದಲೂ, ದೈವದ ಅನುಕರಣೆ ಮಾಡಬೇಡಿ ಎಂದು ಮನವಿ ಮಾಡುತ್ತಲೇ ಇದೆ. ಆದರೆ ಸಿನಿಮಾ ನೋಡಲು ಹೋದವರು ದೈವ ಮೈಮೇಲೆ ಬಂದವರಂತೆ ಆಡುವುದು, ತಮಾಷೆಗಾಗಿ, ಸೋಷಿಯಲ್ ಮೀಡಿಯಾಕ್ಕಾಗಿ ದೈವದ ಅನುಕರಣೆ ಮಾಡುವುದು, ದೈವದ ರೀತಿ ವೇಷ ತೊಡುವುದು ಮಾಡುತ್ತಲೇ ಇದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:12 am, Thu, 9 October 25




