Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಹಿಣಿ ಸಿಂಧೂರಿ ಬಯೋಪಿಕ್​ ಬಗ್ಗೆ ಚರ್ಚೆ; ಅಕ್ಷತಾ ಪಾಂಡವಪುರ ಹೆಸರನ್ನು ಸೂಚಿಸಿದ ಹಿರಿಯ ಬರಹಗಾರ್ತಿ

ಕನ್ನಡ ಬಿಗ್ ಬಾಸ್ ಮಾಜಿ​ ಸ್ಪರ್ಧಿ ಹಾಗೂ ನಟಿ ಅಕ್ಷತಾ ಪಾಂಡವಪುರ ಅವರು ಫೇಸ್​ಬುಕ್​ನಲ್ಲಿ ರೋಹಿಣಿ ಅವರ ಫೋಟೋವನ್ನು ಪ್ರೊಫೈಲ್​ ಪಿಕ್ ಆಗಿ ಹಾಕಿಕೊಂಡಿದ್ದರು. ಈ ಮೂಲಕ ರೋಹಿಣಿ ಅವರನ್ನು ಬೆಂಬಲಿಸಿದ್ದರು.

ರೋಹಿಣಿ ಸಿಂಧೂರಿ ಬಯೋಪಿಕ್​ ಬಗ್ಗೆ ಚರ್ಚೆ; ಅಕ್ಷತಾ ಪಾಂಡವಪುರ ಹೆಸರನ್ನು ಸೂಚಿಸಿದ ಹಿರಿಯ ಬರಹಗಾರ್ತಿ
ಅಕ್ಷತಾ-ರೋಹಿಣಿ
Follow us
ರಾಜೇಶ್ ದುಗ್ಗುಮನೆ
|

Updated on:Jun 06, 2021 | 9:19 PM

 ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿರುವ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ವಿಚಾರದ ಬಗ್ಗೆ ರಾಜಕೀಯ ಕೆಸರೆರೆಚಾಟ ಕೂಡ ನಡೆದಿದೆ. ಇನ್ನು, ರೋಹಿಣಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಬೆಂಬಲಿಸಿ ಪೋಸ್ಟ್​​ಗಳನ್ನು ಹಾಕಲಾಗುತ್ತಿದೆ. ಈಗ ಅವರ ಬಯೋಪಿಕ್​ ವಿಚಾರದ ಬಗ್ಗೆಯೂ ಚರ್ಚೆ ನಡೆದಿದೆ.

ಕನ್ನಡ ಬಿಗ್ ಬಾಸ್ ಮಾಜಿ​ ಸ್ಪರ್ಧಿ ಹಾಗೂ ನಟಿ ಅಕ್ಷತಾ ಪಾಂಡವಪುರ ಅವರು ಫೇಸ್​ಬುಕ್​ನಲ್ಲಿ ರೋಹಿಣಿ ಅವರ ಫೋಟೋವನ್ನು ಪ್ರೊಫೈಲ್​ ಪಿಕ್ ಆಗಿ ಹಾಕಿಕೊಂಡಿದ್ದರು. ಈ ಮೂಲಕ ರೋಹಿಣಿ ಅವರನ್ನು ಬೆಂಬಲಿಸಿದ್ದರು. ಈ ಫೋಟೋಗೆ ಬರಹಗಾರ್ತಿ ಸಂಧ್ಯಾ ರಾಣಿ ಕಮೆಂಟ್​ ಮಾಡಿದ್ದು, ‘ರೋಹಿಣಿ ಸಿಂಧೂರಿ ಅವರ ಬಯೋಪಿಕ್​ ಮಾಡಿದರೆ ನೀವು ಅದಕ್ಕೆ ಸೂಕ್ತ ಆಯ್ಕೆ’ ಎಂದಿದ್ದಾರೆ. ಈ ಕಮೆಂಟ್ ನೋಡಿ ಅಕ್ಷತಾ ಖುಷಿಪಟ್ಟಿದ್ದಾರೆ.

ಈ ಬಗ್ಗೆ ಟಿವಿ9 ಕನ್ನಡ ಡಿಜಿಟಿಲ್​ ಜತೆ ಮಾತನಾಡಿರುವ ಅಕ್ಷತಾ, ‘ ರೋಹಿಣಿ ಅವರನ್ನು ಇಷ್ಟಪಡದೆ ಇರೋಕೆ ಕಾರಣವೇ ಇಲ್ಲ. ಅವರು ಎಲ್ಲಿ ಹೋದರೂ ತಮ್ಮ ಕೆಲಸ ಮಾಡಿಕೊಂಡಿರುತ್ತಾರೆ. ಐ ಡೋಂಟ್​ ಕೇರ್​ ಎನ್ನುವ ವ್ಯಕ್ತಿತ್ವ ಅವರದ್ದು. ಯಾವುದು ಸರಿ ಎನಿಸುತ್ತೋ ಅದನ್ನು ಮಾತ್ರ ಮಾಡುತ್ತಾರೆ. ಅಂಥ ಪಾತ್ರ ಸಿಕ್ಕರೆ ಮಾಡೋಕೆ ನಿಜಕ್ಕೂ ಖುಷಿ ಆಗುತ್ತದೆ. ಅದರಲ್ಲೂ ನಾನು ರೋಹಿಣಿ ಪಾತ್ರದಲ್ಲಿ ನಟಿಸಬೇಕು ಎನ್ನುವ ಮಾತು ಸಂಧ್ಯಾ ರಾಣಿ ಅವರ ಮನಸ್ಸಿನಿಂದ ಬಂತು ಎನ್ನುವುದೇ ಸಂತಸದ ವಿಚಾರ. ಅವರ ಕಮೆಂಟ್​ ನೋಡಿ ನಿಜಕ್ಕೂ ನಾನು ಈ ಸಿನಿಮಾ ಶೂಟಿಂಗ್​ ಮುಗಿಸಿ ಮನೆಗೆ ಬಂದೆ ಎನ್ನುವಷ್ಟು ಖುಷಿ ಆಯ್ತು’ ಎನ್ನುತ್ತಾರೆ.

‘ರಂಗಭೂಮಿ ಹಿನ್ನೆಲೆಯಿಂದ ಬಂದವಳಾಗಿ, ಓರ್ವ ಕಲಾವಿದೆಯಾಗಿ ತುಂಬಾನೇ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುತ್ತೇನೆ. ನಾನು ಮಾಡಿರೋದು ಕೆಲವೇ ಸಿನಿಮಾಗಳು. ಸಿಕ್ಕ ಪಾತ್ರಕ್ಕೆ ತುಂಬಾ ಹೋಂ ವರ್ಕ್​ ಮಾಡಬೇಕು. ಪ್ರತಿ ಬಾರಿ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುವಾಗ ಒಂದಕ್ಕಿಂತ ಒಂದು ಭಿನ್ನವಾಗಿರಬೇಕು ಎಂಬುದು ನನ್ನ ಥಿಯರಿ. ಹೀಗಿರುವಾಗ ರೋಹಿಣಿ ಅವರ ಪಾತ್ರಕ್ಕೆ ನನ್ನ ಹೆಸರನ್ನು ಒಬ್ಬರು ಸೂಚಿಸುತ್ತಾರೆ ಎಂದರೆ ನಿಜಕ್ಕೂ ಖುಷಿ ಆಗುತ್ತದೆ ಎಂಬುದು ಅಕ್ಷತಾ ಅಭಿಪ್ರಾಯ.

ಅಂದಹಾಗೆ, ಈ ಪೋಸ್ಟ್​ ಹಾಗೂ ಕಮೆಂಟ್​ಗಳನ್ನು ನೋಡಿದ ಯಾರಾದರೂ ರೋಹಿಣಿ ಸಿಂಧೂರಿ ಅವರ ಬಯೋಪಿಕ್​ ಮಾಡೋಕೆ ಮುಂದೆ ಬರುತ್ತಾರಾ? ಬಂದರೆ, ಅಕ್ಷತಾ ಅವರನ್ನೇ ಆಯ್ಕೆ ಮಾಡಿಕೊಳ್ಳುತ್ತಾರಾ ಎಂಬುದು ಸದ್ಯದ ಕುತೂಹಲ. ಪಲ್ಲಟ ಸಿನಿಮಾದ ಅಭಿನಯಕ್ಕಾಗಿ ಅಕ್ಷತಾ ಅವರಿಗೆ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿ ಸಿಕ್ಕಿತ್ತು.

ಇದನ್ನೂ ಓದಿ: ವರ್ಗಾವಣೆ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ನಿವಾಸಕ್ಕೆ ರೋಹಿಣಿ ಸಿಂಧೂರಿ ಭೇಟಿ

Published On - 9:08 pm, Sun, 6 June 21