ಚಿರಂಜೀವಿ ಸರ್ಜಾ ಇಲ್ಲದೇ ಉರುಳಿತು ಒಂದು ವರ್ಷ; ಅಣ್ಣನಿಗೆ ಧ್ರುವ ಭಾವುಕ ಪತ್ರ ವೈರಲ್
Chiranjeevi Sarja Death Anniversary: ಚಿರಂಜೀವಿ ಸರ್ಜಾ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಸಲುವಾಗಿ ಸಹೋದರ ಧ್ರುವ ಸರ್ಜಾ ಒಂದು ಪತ್ರವನ್ನು ಶೇರ್ ಮಾಡಿಕೊಂಡಿದ್ದಾರೆ. ಇಡೀ ಸರ್ಜಾ ಕುಟುಂಬದ ಪರವಾಗಿ ಈ ಪತ್ರವನ್ನು ಬರೆಯಲಾಗಿದೆ.
ಸರ್ಜಾ ಕುಟುಂಬದ ಪಾಲಿಗೆ ಜೂ.7 ಕರಾಳ ದಿನ. ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದ ನಟ ಚಿರಂಜೀವಿ ಸರ್ಜಾ ಅವರು ಅಂದು ಹೃದಯಾಘಾತದಿಂದ ಕೊನೆಯುಸಿರೆಳೆದರು. ಅಂಥ ಒಂದು ದುರ್ಘಟನೆ ಸಂಭವಿಸುತ್ತಿದೆ ಎಂದು ಕನಸಿನಲ್ಲಿಯೂ ಸಹ ಯಾರೂ ಊಹಿರಲಿಲ್ಲ. ಚಿರು ನಿಧನರಾಗಿದ್ದಾರೆ ಎಂಬ ಸುದ್ದಿಯನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರ ಕುಟುಂಬದವರಿಗೆ ಆದ ನೋವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅರ್ಧ ದಾರಿಯಲ್ಲೇ ಪಯಣ ಅಂತ್ಯಗೊಳಿಸಿದ ಚಿರುಗೆ ಸರ್ಜಾ ಕುಟುಂಬದವರು ಪತ್ರ ಬರೆದಿದ್ದಾರೆ.
ಚಿರಂಜೀವಿ ಸರ್ಜಾ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಸಲುವಾಗಿ ಸಹೋದರ ಧ್ರುವ ಸರ್ಜಾ ಒಂದು ಪತ್ರವನ್ನು ಶೇರ್ ಮಾಡಿಕೊಂಡಿದ್ದಾರೆ. ಇಡೀ ಸರ್ಜಾ ಕುಟುಂಬದ ಪರವಾಗಿ ಈ ಪತ್ರವನ್ನು ಬರೆಯಲಾಗಿದೆ. ಚಿರು ಮತ್ತು ಧ್ರುವ ಅಣ್ಣ-ತಮ್ಮಂದಿರಾದರೂ ಅವರು ಸ್ನೇಹಿತರ ರೀತಿ ಇದ್ದರು. ಅವರಿಬ್ಬರ ಆತ್ಮೀಯತೆಗೆ ಸಾಕ್ಷಿ ಒದಗಿಸುವಂತಹ ಹಲವಾರು ವಿಡಿಯೋ ಮತ್ತು ಫೋಟೋಗಳು ಚಿರು ನಿಧನದ ಬಳಿಕ ವೈರಲ್ ಆಗಿದ್ದವು. ಈಗ ಈ ಪತ್ರ ವೈರಲ್ ಆಗುತ್ತಿದೆ.
‘ನಮ್ಮ ಹೃದಯದ ಚಿರಂಜೀವಿ, ನೀನು ದೇವರ ಮನೆಗೆ ಹೋಗಿ ಒಂದು ವರ್ಷ ಆಯಿತು. ಎಷ್ಟು ಬೇಗ ಒಂದು ವರ್ಷ. ಈ 365 ದಿನಗಳಲ್ಲಿ ನಿನ್ನ ನೆನೆಯದ ದಿನಗಳೇ ಇಲ್ಲ. ಕನಸಿನಲ್ಲಿ ನಿನ್ನ ಕಾಣದ ರಾತ್ರಿಗಳೇ ಇಲ್ಲ. ಮರೆಯಲಾಗದ ಚಿರ ನೆನಪುಗಳು. ಕುಟುಂಬದ ಮೇಲೆ ನಿನಗಿದ್ದ ಅಪಾರವಾದ ಗೌರವ, ಜನಗಳಿಗೆ ನೀನು ತೋರಿಸುತ್ತಿದ್ದ ಪ್ರೀತಿ, ಪ್ರೇಮ, ಉದಾರ ಗುಣ ಮತ್ತು ಅಜಾತಶತ್ರುವಾಗಿದ್ದ ನಿನ್ನ ನೆನಪುಗಳೇ ಈಗ ನಮ್ಮ ಕರಗಲಾರದ ಆಸ್ತಿ. ನೀನೆಲ್ಲಿದ್ದರೂ ಅಲ್ಲಿ ನಗು ತುಂಬಿರಬೇಕು. ನಿನ್ನ ಆತ್ಮ ಸದಾ ಶಾಂತಿಯಿಂದಿರಬೇಕು. ಆ ಪ್ರಾರ್ಥನೆಯಲ್ಲೇ, ಎಂದೆಂದೂ ನಿನ್ನ ನೆನಪಲ್ಲೇ.. ನಿನ್ನ ಪ್ರೀತಿಯ ನಿನ್ನ ಕುಟುಂಬ’ ಎಂದು ಪತ್ರದಲ್ಲಿ ಬರೆಯಲಾಗಿದೆ.
ಧ್ರುವ ಸರ್ಜಾ ಮಾತ್ರವಲ್ಲದೇ, ಮೇಘನಾ ರಾಜ್ ಕೂಡ ಈ ಪತ್ರವನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮೊದಲ ವರ್ಷದ ಪುಣ್ಯತಿಥಿಗೂ ಮೊದಲು ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೋವನ್ನು ಹಂಚಿಕೊಂಡಿದ್ದು, ‘ನನ್ನವನು’ ಎಂದು ಬರೆದುಕೊಂಡಿದ್ದಾರೆ. ಕೊರೊನಾ ವೈರಸ್ ಎರಡನೇ ಅಲೆ ಕಾರಣದಿಂದ ಚಿರು ಪುಣ್ಯತಿಥಿಯನ್ನು ಕುಟುಂಬದವರು ಸರಳವಾಗಿ ಆಚರಿಸುತ್ತಿದ್ದಾರೆ. ಅಭಿಮಾನಿಗಳು ಕೂಡ ಚಿರುಗೆ ನೆನಪಿನ ನಮನ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ:
ಮೇಘನಾ ರಾಜ್ - ಚಿರಂಜೀವಿ ಸರ್ಜಾ ಪುತ್ರ ಜ್ಯೂ. ಚಿರುಗೆ ಹೆಜ್ಜೆ ಹೆಜ್ಜೆಗೂ ಪ್ರೀತಿ ತೋರಿಸುತ್ತಿರುವ ಫ್ಯಾನ್ಸ್
(Chiranjeevi Sarja Death Anniversary: Dhruva Sarja remembers his brother Chiru with emotional letter)
Published On - 8:21 am, Mon, 7 June 21