ಇಂದು ಅಂಬರೀಷ್​ ಪುಣ್ಯತಿಥಿ; ಅಂಬಿ ಇಲ್ಲದೆ ಕಳೆಯಿತು ಮೂರು ವರ್ಷ

Ambareesh Death Anniversary: ನವೆಂಬರ್​ 24ರಂದು ಅಂಬರೀಷ್​ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು. ಅವರನ್ನು ಕಳೆದುಕೊಂಡಿದ್ದ ದಿನ ಇಡೀ ಕನ್ನಡ ಚಿತ್ರರಂಗ ದುಃಖದಲ್ಲಿ ಮುಳುಗಿತ್ತು.

ಇಂದು ಅಂಬರೀಷ್​ ಪುಣ್ಯತಿಥಿ; ಅಂಬಿ ಇಲ್ಲದೆ ಕಳೆಯಿತು ಮೂರು ವರ್ಷ
ಅಂಬರೀಷ್​

ಕನ್ನಡದ ಹಿರಿಯ ನಟ ಅಂಬರೀಷ್​ ಅವರು 2018ರ ನವೆಂಬರ್​ 24ರಂದು ನಿಧನರಾದರು. ಅವರನ್ನು ಕಳೆದುಕೊಂಡು ಮೂರು ವರ್ಷ ಕಳೆದಿದೆ. ಇಂದು ಅಂಬಿ ಅವರ ಪುಣ್ಯಸ್ಮರಣೆ. ಅಂಬಿ ಇಲ್ಲದೆ ಮೂರು ವರ್ಷ ಕಳೆದು ಹೋಗಿದೆ. ಅವರನ್ನು ಕಳೆದುಕೊಂಡ ನೋವು ಇನ್ನೂ ಕಡಿಮೆ ಆಗಿಲ್ಲ. ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಅಂಬರೀಷ್​ ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಅಂಬರೀಷ್​ ಸಮಾಧಿಗೆ ಇಂದು ಕುಟುಂಬದವರು, ಆಪ್ತರು, ಅಭಿಮಾನಿಗಳು ಭೇಟಿ ನೀಡಲಿದ್ದಾರೆ. 

‘ನಾಗರಹಾವು’ (1972) ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು ಅಂಬರೀಷ್​. ಹೀರೋ ಆಗಿ, ಖಳ ನಟನಾಗಿ ಮತ್ತು ಪೋಷಕ ಪಾತ್ರದ ಮೂಲಕ ಗುರುತಿಸಿಕೊಂಡರು. ರೆಬೆಲ್ ಸ್ಟಾರ್, ಮಂಡ್ಯದ ಗಂಡು ಎಂಬಿತ್ಯಾದಿ ಹೆಸರುಗಳ ಮೂಲಕ ಗುರುತಿಸಿಕೊಂಡರು ಅವರು​. ಅಂಬರೀಷ್​ ಅವರು ನಂತರ ರಾಜಕೀಯದಲ್ಲೂ ತೊಡಗಿಕೊಂಡರು. ಮೇ 2013ರಿಂದ ಜೂನ್ 2016ರವರೆಗೆ ಸಿದ್ದರಾಮಯ್ಯ ಸಂಪುಟದಲ್ಲಿ ವಸತಿ ಸಚಿವರಾಗಿ ಅಂಬರೀಷ್​ ಕಾರ್ಯನಿರ್ವಹಿಸಿದ್ದರು. ಅಂಬರೀಷ್​ಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು 63ನೇ ವಾರ್ಷಿಕ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ್ದು ವಿಶೇಷ.

ನವೆಂಬರ್​ 24ರಂದು ಅಂಬರೀಷ್​ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು. ಅವರನ್ನು ಕಳೆದುಕೊಂಡಿದ್ದ ದಿನ ಇಡೀ ಕನ್ನಡ ಚಿತ್ರರಂಗ ದುಃಖದಲ್ಲಿ ಮುಳುಗಿತ್ತು. ಕಂಠೀರವ ಸ್ಟುಡಿಯೋದಲ್ಲಿ ಅವರ ಅಂತ್ಯಸಂಸ್ಕಾರ ಮಾಡಲಾಯಿತು. ಈ ವೇಳೆ ಸುದೀಪ್​ ಸೇರಿ ಸಾಕಷ್ಟು ಸೆಲೆಬ್ರಿಟಿಗಳು ಆಗಮಿಸಿದ್ದರು. ಅಂಬರೀಷ್​ ಅವರನ್ನು ಇಂದು ನೆನಪು ಮಾಡಿಕೊಳ್ಳುವ ಕಾರ್ಯ ನಡೆಯುತ್ತಿದೆ.

ಸುಮಲತಾ ಅಂಬರೀಷ್​ ಹಾಗೂ ಅಭಿಷೇಕ್​ ಅಂಬರೀಷ್​ ಅವರು ಇಂದು ಅಂಬರೀಷ್​ ಸಮಾಧಿಗೆ ಭೇಟಿ ನೀಡಿ ಪೂಜೆ ಮಾಡುವ ಸಾಧ್ಯತೆ ಇದೆ. ಅಭಿಮಾನಿಗಳು ಕೂಡ ಕಂಠೀರವ ಸ್ಟುಡಿಯೋಗೆ ಆಗಮಿಸುತ್ತಿದ್ದಾರೆ. ಇನ್ನು, ಅಭಿಮಾನಿಗಳು ಅಂಬಿ ಹೆಸರಲ್ಲಿ ಸಾಕಷ್ಟು ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಮೂಲಕ ಅಂಬರೀಷ್​ ಅವರನ್ನು ಭಿನ್ನವಾಗಿ ನೆನಪಿಸಿಕೊಳ್ಳಲಾಗುತ್ತಿದೆ.

ನಟ ಪುನೀತ್​ ರಾಜ್​ಕುಮಾರ್​ ನಿಧನದ ಬಳಿಕ ಅವರ ಹೆಸರನ್ನು ಅಮರವಾಗಿಸಲು ಅನೇಕ ಕೆಲಸಗಳು ನಡೆಯುತ್ತಿವೆ. ಕೆಲವು ರಸ್ತೆ, ವೃತ್ತಕ್ಕೆ ಪುನೀತ್​ ಹೆಸರನ್ನು ಇಡಲಾಗಿದೆ. ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಸಹ ಘೋಷಣೆ ಆಗಿದೆ. ಇದು ಅವರ ಅಭಿಮಾನಿಗಳಿಗೆ ಹೆಮ್ಮೆ ತಂದಿರುವ ವಿಚಾರ. ಅದೇ ರೀತಿ ‘ರೆಬೆಲ್​ ಸ್ಟಾರ್​’ ಅಂಬರೀಷ್ ಅವರಿಗೂ ಇಂಥ ಗೌರವಗಳು ಸಲ್ಲಬೇಕು ಎಂದು ಅಂಬಿ ಪ್ಯಾನ್ಸ್​ ಬೇಡಿಕೆ ಇಡುತ್ತಿದ್ದಾರೆ. ಅದಕ್ಕಾಗಿ ಅವರು ಹೋರಾಟ ಮಾಡುವುದಾಗಿ ಹೇಳಿದ್ದು, ಅದು ಸುಮಲತಾ ಅಂಬರೀಷ್​ ಗಮನಕ್ಕೆ ಬಂದಿತ್ತು. ಆ ಬಗ್ಗೆ ಅವರು ಬಹಿರಂಗವಾಗಿ ಪತ್ರ ಬರೆದಿದ್ದು, ಅಭಿಮಾನಿಗಳ ಕೆಲವು ನಿರ್ಧಾರಗಳಿಗೆ ಬೇಸರ ವ್ಯಕ್ತಪಡಿಸಿದ್ದರು. ಅಂಬಿ ಅಭಿಮಾನಿಗಳಿಗೆ ಕೆಲವು ಕಿವಿಮಾತುಗಳನ್ನು ಅವರು ಹೇಳಿದ್ದರು.

ಇದನ್ನೂ ಓದಿ: ಅಂಬರೀಷ್​ ಫ್ಯಾನ್ಸ್​ ನಿರ್ಧಾರಕ್ಕೆ ಸುಮಲತಾ ಬೇಸರ; ಪುನೀತ್​ ಮತ್ತು ಪ್ರಶಸ್ತಿ ಬಗ್ಗೆ ಹೇಳಿದ್ದೇನು?

Click on your DTH Provider to Add TV9 Kannada