‘ಕೆಜಿಎಫ್ 2’ ಶೈಲಿಯಲ್ಲಿ ಅಮುಲ್ ಜಾಹೀರಾತು; ವೈರಲ್ ಆಯ್ತು ರಾಕಿ ಭಾಯ್ ಫೋಟೋ

| Updated By: ರಾಜೇಶ್ ದುಗ್ಗುಮನೆ

Updated on: Apr 19, 2022 | 10:11 PM

ಅಮುಲ್ ತನ್ನ ಉತ್ಪನ್ನಗಳ ಮಾರ್ಕೆಟಿಂಗ್​ಗೆ ನಾನಾ ತಂತ್ರಗಳನ್ನು ಬಳಕೆ ಮಾಡಿಕೊಳ್ಳುತ್ತದೆ. ಈಗ ‘ಕೆಜಿಎಫ್ 2’ ಹೆಸರು ಟ್ರೆಂಡ್​ನಲ್ಲಿದೆ. ಇದೇ ವಿಚಾರ ಇಟ್ಟುಕೊಂಡು ಅಡ್ವಟೈಸ್​ಮೆಂಟ್ ಮಾಡಲಾಗಿದೆ.

‘ಕೆಜಿಎಫ್ 2’ ಶೈಲಿಯಲ್ಲಿ ಅಮುಲ್ ಜಾಹೀರಾತು; ವೈರಲ್ ಆಯ್ತು ರಾಕಿ ಭಾಯ್ ಫೋಟೋ
ರಾಕಿ
Follow us on

‘ಕೆಜಿಎಫ್ ಚಾಪ್ಟರ್​ 2’ ಸಿನಿಮಾ (KGF Chapter 2) ದಾಖಲೆಯ ಮೇಲೆ ದಾಖಲೆ ಬರೆಯುತ್ತಲೇ ಇದೆ. ನಾಲ್ಕು ದಿನಕ್ಕೆ ಬರೋಬ್ಬರಿ 29 ದಾಖಲೆ ಬರೆದಿರೋದು ಈ ಸಿನಿಮಾದ ಹೆಚ್ಚುಗಾರಿಕೆ. ಈ ಚಿತ್ರದಿಂದ ಯಶ್​ಗೆ (Yash) ಬೇಡಿಕೆ ಹೆಚ್ಚಿದೆ. ಯಶ್ ಮಾರುಕಟ್ಟೆ ದೊಡ್ಡದಾಗಿದೆ. ಸಾಕಷ್ಟು ಜಾಹೀರಾತುಗಳಲ್ಲಿ ನಟಿಸೋಕೆ ಯಶ್​ಗೆ ಆಫರ್​ಗಳು ಬರುತ್ತಿವೆ. ಈ ಮಧ್ಯೆ ಹಾಲಿನ ಉತ್ಪನ್ನ, ಐಸ್​ಕ್ರೀಮ್​ಗಳನ್ನು ಮಾರಾಟ ಮಾಡುವ ‘ಅಮುಲ್’ ಕಂಪನಿ (Amul Company) ಕನ್ನಡದ ‘ಕೆಜಿಎಫ್ ಚಾಪ್ಟರ್​ 2’ ಸಿನಿಮಾ ಶೈಲಿಯಲ್ಲಿ ಜಾಹೀರಾತಿಗೆ ಇಳಿದಿದೆ. ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

ಅಮುಲ್ ತನ್ನ ಉತ್ಪನ್ನಗಳ ಮಾರ್ಕೆಟಿಂಗ್​ಗೆ ನಾನಾ ತಂತ್ರಗಳನ್ನು ಬಳಕೆ ಮಾಡಿಕೊಳ್ಳುತ್ತದೆ. ಸದ್ಯದ ಟ್ರೆಂಡ್​ಗೆ ತಕ್ಕಂತೆ ಜಾಹೀರಾತುಗಳನ್ನು ಸಿದ್ಧಪಡಿಸಿ ಪೋಸ್ಟ್ ಮಾಡುತ್ತದೆ. ಕ್ರೀಡೆ, ರಾಜಕೀಯ ಯಾವುದೇ ವಲಯದಲ್ಲಿ ಪ್ರಮುಖ ಬೆಳವಣಿಗೆ ಆದರೆ ಆ ಟ್ರೆಂಡ್ ಕ್ಯಾಚ್ ಮಾಡಿಕೊಳ್ಳುತ್ತದೆ ಅಮುಲ್​ ಸಂಸ್ಥೆ. ಈಗ ‘ಕೆಜಿಎಫ್ 2’ ಹೆಸರು ಟ್ರೆಂಡ್​ನಲ್ಲಿದೆ. ಇದೇ ವಿಚಾರ ಇಟ್ಟುಕೊಂಡು ಅಡ್ವಟೈಸ್​ಮೆಂಟ್ ಮಾಡಲಾಗಿದೆ.

‘ಕೆಜಿಎಫ್ 2’ ಸಿನಿಮಾದಲ್ಲಿ ರಾಕಿ (ಯಶ್) ಚಿನ್ನಕ್ಕಾಗಿ ಏನೂ ಮಾಡೋಕೂ ರೆಡಿ ಇರುತ್ತಾನೆ. ಒಂದು ಚಿನ್ನದ ಗಟ್ಟಿಗಾಗಿ ದೂರದ ಕೋಲಾರದಿಂದ ಬೆಂಗಳೂರಿಗೆ ಬರುತ್ತಾನೆ. ಚಿನ್ನದ ಗಟ್ಟಿಯನ್ನು ತೆಗೆದುಕೊಂಡು ಹೋಗುತ್ತಾನೆ. ಇದೇ ಮಾದರಿಯಲ್ಲಿ ಪೋಸ್ಟ್ ಒಂದನ್ನು ಮಾಡಿದೆ ಅಮುಲ್​. ಬೈಕ್ ಮೇಲೆ ರಾಕಿ ಕೂತಿದ್ದಾನೆ. ಆತನ ಕೈಯಲ್ಲಿ ಬ್ರೆಡ್ ಇದೆ. ‘ಕೂಲರ್​ನಲ್ಲಿ ಗೋಲ್ಡ್​ ಇಡಿ’ ಎಂದು ಬರೆಯಲಾಗಿದೆ. ಸದ್ಯ, ಈ 900 ಅಧಿಕ ಮಂದಿ ಇದನ್ನು ರೀ- ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್​ನಲ್ಲಿ ಒಂದು ವಿಶೇಷತೆ ಇದೆ. ಕನ್ನಡದಲ್ಲಿ ಈಗಾಗಲೇ ಅದೆಷ್ಟೋ ಸಿನಿಮಾಗಳು ತೆರೆಗೆ ಬಂದು ಹೋಗಿವೆ. ಆದರೆ, ಯಾವ ಸಿನಿಮಾಗಳ ಪಾತ್ರವನ್ನೂ ಅಮುಲ್ ಈ ರೀತಿ ಜಾಹೀರಾತಿನಲ್ಲಿ ಬಳಕೆ ಮಾಡಿಕೊಂಡಿಲ್ಲ. ಆದರೆ, ರಾಕಿ ಭಾಯ್ ಪಾತ್ರವನ್ನು ಅಮುಲ್ ಬಳಕೆ ಮಾಡಿಕೊಂಡಿದೆ ಅನ್ನೋದು ವಿಶೇಷ. ಈ ಮೂಲಕ ಕನ್ನಡದ ಖ್ಯಾತಿ ಮತ್ತಷ್ಟು ಹೆಚ್ಚಿದೆ.

‘ಕೆಜಿಎಫ್ 2’ ಸಿನಿಮಾ ದೇಶಾದ್ಯಂತ ಧೂಳೆಬ್ಬಿಸಿದೆ. ಈ ಸಿನಿಮಾ ವಿಶ್ವಮಟ್ಟದಲ್ಲಿ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಬಾಲಿವುಡ್ ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾ 200 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಹೊಸ ದಾಖಲೆ ಬರೆದಿದೆ. ಚಿತ್ರದ ಅಬ್ಬರ ಇನ್ನೂ ಕೆಲ ವಾರಗಳ ಕಾಲ ಮುಂದುವರಿಯಲಿದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ‘ಕೆಜಿಎಫ್ 2’ ಎದುರು ಮಕಾಡೆ ಮಲಗಿದ ‘ಬೀಸ್ಟ್​’; ಕಲೆಕ್ಷನ್ ಅಂತರ ಎಷ್ಟು?

Fact Check: ‘ಕೆಜಿಎಫ್ 2’ ಬಗ್ಗೆ ಸುದೀಪ್​ ರಿಯಾಕ್ಷನ್ ನೀಡಿದ್ದಾರೆ ಎಂಬ ವಿಡಿಯೋದ ಅಸಲಿಯತ್ತೇನು?