ಪದ್ಮ ಪ್ರಶಸ್ತಿ: ಮೇರು ನಟ ಅನಂತ್ ನಾಗ್ ಮತ್ತೆ ನಿರ್ಲಕ್ಷ್ಯ
Anant Nag: 2024ರ ಪದ್ಮ ಪ್ರಶಸ್ತಿ ಘೋಷಣೆಯಾಗಿದ್ದು ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರನ್ನು ಈ ಬಾರಿಯೂ ನಿರ್ಲಕ್ಷಿಸಲಾಗಿದೆ.
ನಿನ್ನೆಯಷ್ಟೆ (ಜನವರಿ 25) ಕೇಂದ್ರ ಸರ್ಕಾರ ಕೊಡಮಾಡುವ ಅತ್ಯುತ್ತಮ ನಾಗರೀಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿ (Padma Awards) ವಿಜೇತರನ್ನು ಘೋಷಣೆ ಮಾಡಿದೆ. ವಿವಿಧ ಕ್ಷೇತ್ರದಲ್ಲಿ ಸೇವೆ ಮಾಡಿದ ಕೆಲವು ಕನ್ನಡಿಗರು ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಆದರೆ ಎಲ್ಲ ಕೋನಗಳಿಂದಲೂ ಪದ್ಮ ಪ್ರಶಸ್ತಿಗೆ ಅರ್ಹರಾಗಿರುವ ಕನ್ನಡ ಚಿತ್ರರಂಗದ ಮೇರು ಪ್ರತಿಭೆ ಅನಂತ್ ನಾಗ್ ಅವರನ್ನು ಈ ಬಾರಿಯೂ ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆ.
ಮೆಗಾಸ್ಟಾರ್ ಚಿರಂಜೀವಿ, ಮಿಥುನ್ ಚಕ್ರವರ್ತಿ, ವೈಜಯಂತಿ, ಉಷಾ ಉತ್ತಪ್ ಇನ್ನೂ ಕೆಲವರಿಗೆ ಕಲಾ ವಿಭಾಗದಲ್ಲಿ ಪದ್ಮ ಪ್ರಶಸ್ತಿಗಳು ದೊರಕಿವೆ. ಚಿರಂಜೀವಿ ಅವರಿಗೆ ಎರಡನೇ ಅತ್ಯುತ್ತಮ ನಾಗರೀಕ ಪ್ರಶಸ್ತಿಯಾದ ಪದ್ಮ ವಿಭೂಷಣ ದೊರಕಿದೆ. ಆದರೆ ಕನ್ನಡ ಮಾತ್ರವೇ ಅಲ್ಲದೆ ಹಲವು ಭಾಷೆಗಳಲ್ಲಿ ನಟಿಸಿರುವ, ದಶಕಗಳಿಂದಲೂ ತಮ್ಮ ನಟನೆಯ ಮೂಲಕ ಮನರಂಜನೆ ಹಾಗೂ ಸಿನಿಮಾಗಳ ಮೂಲಕ ಸಾಮಾಜಿಕ ಬದಲಾವಣೆಗಾಗಿ ದುಡಿಯುತ್ತಿರುವ ಅನಂತ್ ನಾಗ್ ಅವರನ್ನು ನಿರ್ಲಕ್ಷಿಸಲಾಗಿದೆ.
ಇದನ್ನೂ ಓದಿ:Padma awards: ನಾಳೆ ಪದ್ಮ ಪ್ರಶಸ್ತಿ ಪ್ರಕಟ; ಈ ಪ್ರಶಸ್ತಿ ನೀಡಲು ಇರುವ ಮಾನದಂಡಗಳೇನು?
ಕಳೆದ ಕೆಲ ವರ್ಷಗಳಿಂದ ಪ್ರತಿ ಬಾರಿ ಪದ್ಮ ಪ್ರಶಸ್ತಿಗಳು ಘೋಷಣೆಯಾದಾಗಲೂ ಅನಂತ್ ನಾಗ್ ಹೆಸರು ಚರ್ಚೆಗೆ ಬರುತ್ತಲೇ ಇದೆ. ಆದರೆ ಪ್ರತಿ ಬಾರಿಯೂ ಕನ್ನಡ ಸಿನಿಮಾ ಅಭಿಮಾನಿಗಳಿಗೆ ನಿರಾಸೆಯಾಗುತ್ತಿದೆ. ಕನ್ನಡ ಚಿತ್ರರಂಗದ ಮೇರು ಪ್ರತಿಭೆಗಳಿಗೆ ಹೀಗೆ ಅನ್ಯಾಯವಾಗುತ್ತಿರುವುದು ಇದು ಮೊದಲೇನಲ್ಲ. ರಾಜ್ಕುಮಾರ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಧಕ್ಕಿದ್ದು ಹೊರತುಪಡಿಸಿದೆ ಬಿಟ್ಟರೆ, ವಿಷ್ಣುವರ್ಧನ್, ಅಂಬರೀಶ್ ಅವರಿಗೆ ಪದ್ಮ ಪ್ರಶಸ್ತಿ ಲಭಿಸಿಲ್ಲ. ಇನ್ನೂ ಹಲವು ಅರ್ಹ ನಟ-ನಟಿಯರು, ತಂತ್ರಜ್ಞರು ಕನ್ನಡ ಚಿತ್ರರಂಗದಲ್ಲಿದ್ದಾರೆ ಆದರೆ ಹಲವರಿಗೆ ನಾಗರೀಕ ಪ್ರಶಸ್ತಿಗೆ ಪರಿಗಣಿಸಲಾಗಿಲ್ಲ.
ಇದೀಗ ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ಸಿಗದೇ ಇರುವ ಬಗ್ಗೆ ಟ್ವೀಟ್ ಮಾಡಿರು ನಿರ್ದೇಶಕ ಹೇಮಂತ್ ರಾವ್, ‘ಅನಂತ್ ನಾಗ್ ಅವರಿಗೆ ಮತ್ತೊಂದು ವರ್ಷ ಪದ್ಮ ಪ್ರಶಸ್ತಿ ಸಿಗಲಿಲ್ಲ, ಇದೆಂಥಹಾ ಅವಮಾನ’ ಎಂದಿದ್ದಾರೆ. ಮತ್ತೊಂದು ಟ್ವೀಟ್ನಲ್ಲಿ, ‘ಇತರ ರಾಜ್ಯಗಳ ಚಿತ್ರರಂಗದ ಉದ್ಯಮಗಳ ಶ್ರೇಷ್ಠರನ್ನು ನಡೆಸಿಕೊಳ್ಳುವ ರೀತಿಯನ್ನು ನೋಡಿ ಅಸೂಯೆ ಪಡುವುದನ್ನು ತಡೆಯಲು ನನಗೆ ಸಾಧ್ಯವಾಗುತ್ತಿಲ್ಲ. ನಾಲ್ಕು ದಶಕಗಳಿಂದ ಉತ್ಕೃಷ್ಟ ಕಾರ್ಯವನ್ನು ಮಾಡುತ್ತಾ ಬರುತ್ತಿರುವ ವ್ಯಕ್ತಿಯ ಬಗ್ಗೆ ಇಂಥಹಾ ದಿವ್ಯ ನಿರ್ಲಕ್ಷ್ಯ ತಳೆದಿರುವುದು ಅತ್ಯಂತ ಖೇದಕರ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ