ಭಾರತೀಯ ಚಿತ್ರರಂಗಕ್ಕೆ ಅನಂತ್ ನಾಗ್ (Anant Nag) ಅವರು ನೀಡಿದ ಕೊಡುಗೆ ಅಪಾರ. ಇಂದಿನ ತಲೆಮಾರಿನವರಿಗೆ ಈ ಲೆಜೆಂಡರಿ ನಟನ ಬಗ್ಗೆ ಹೆಚ್ಚು ತಿಳಿದಿಲ್ಲದೇ ಇರಬಹುದು. ಹಾಗಾಗಿ ಮತ್ತೊಮ್ಮೆ ಅನಂತ್ ನಾಗ್ ಅವರ ಜೀವನ ಮತ್ತು ಸಾಧನೆಯನ್ನು ಚುಟುಕಾಗಿ ನೆನಪಿಸುವಂತಹ ಕಾರ್ಯವನ್ನು ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಮತ್ತು ಅವರ ತಂಡ ಮಾಡಿದೆ. ಅನಂತ್ ನಾಗ್ ಕುರಿತು ಒಂದು ವಿಶೇಷವಾದ ಸಾಕ್ಷ್ಯಚಿತ್ರವನ್ನು (Anant Nag Documentary) ಈ ತಂಡ ತಯಾರಿಸಿದೆ. ಅದನ್ನು ರಿಷಬ್ ಶೆಟ್ಟಿ ಫಿಲ್ಮ್ಸ್ ಮೂಲಕ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಅಭಿಮಾನಿಗಳಿಂದ ಮತ್ತು ಸೆಲೆಬ್ರಿಟಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಆನಂತ್ ನಾಗ್ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಆಕಸ್ಮಿಕವಾಗಿ. ಹಾಗಾದರೆ ಅವರ ಕುಟುಂಬದ ಹಿನ್ನೆಲೆ ಯಾವ ರೀತಿ ಇತ್ತು? 1967ರಲ್ಲಿ ಬಾಂಬೆಯಲ್ಲಿ ಅವರು ನಟಿಸಿದ ಮೊದಲ ನಾಟಕ ಯಾವುದು? ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದು ಹೇಗೆ? ಆರಂಭದ ದಿನಗಳಲ್ಲಿ ಹಿಂದಿ, ಕನ್ನಡ, ಮರಾಠಿ ಚಿತ್ರಗಳಲ್ಲಿ ಅವರು ನಿಭಾಯಿಸಿದ ಪಾತ್ರಗಳು ಹೇಗಿದ್ದವು ಎಂಬಿತ್ಯಾದಿ ಮಾಹಿತಿಗಳನ್ನು ಈ ಡಾಕ್ಯುಮೆಂಟರಿ ನೀಡುತ್ತಿದೆ.
ಸಹೋದರ ಶಂಕರ್ ನಾಗ್ ಜೊತೆ ಸೇರಿ ಅನಂತ್ ನಾಗ್ ಮಾಡಿದ ಸಿನಿಮಾಗಳು, ನಂತರ ರಾಜಕೀಯ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆ ಇಳಿದಿದ್ದು ಸೇರಿದಂತೆ ಅನೇಕ ವಿಚಾರಗಳನ್ನು ಒಳಗೊಂಡಿರುವ ಈ ಸಾಕ್ಷ್ಯಚಿತ್ರದ ಅವಧಿ ಕೇವಲ ನಾಲ್ಕು ನಿಮಿಷ. ಇದನ್ನು ಕಣ್ತುಂಬಿಕೊಂಡ ಎಲ್ಲರೂ ಮೆಚ್ಚುಗೆ ಮಾತುಗಳನ್ನು ಕಮೆಂಟ್ಗಳ ಮೂಲಕ ತಿಳಿಸುತ್ತಿದ್ದಾರೆ.
ನಿರ್ದೇಶಕ ಹೇಮಂತ್ ರಾವ್, ನಿರ್ಮಾಪಕ ಕಾರ್ತಿಕ್ ಗೌಡ, ನಟ ರಕ್ಷಿತ್ ಶೆಟ್ಟಿ ಸೇರಿದಂತೆ ಅನೇಕರು ರಿಷಬ್ ಶೆಟ್ಟಿ ಮತ್ತು ಅವರ ತಂಡದ ಈ ಕೆಲಸಕ್ಕೆ ಭೇಷ್ ಎಂದಿದ್ದಾರೆ.
Anant sir is just ❤️. Superbly done @shetty_rishab.
Glimpses of so many memorable characters. What a body of work!! #AnanthnagforPadmahttps://t.co/SHZCjakjQk— Hemanth M Rao (@hemanthrao11) August 2, 2021
ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ಸಿಗಬೇಕು ಎಂದು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಯಾನ ಶುರುವಾಗಿತ್ತು. ಅದರಲ್ಲಿ ರಿಷಬ್ ಶೆಟ್ಟಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಈಗ ಈ ಸಾಕ್ಷ್ಯಚಿತ್ರ ಕೂಡ ಆ ಅಭಿಯಾನದ ಮುಂದುವರಿದ ಭಾಗದಂತಿದೆ. ಇಂಗ್ಲಿಷ್ನಲ್ಲಿ ನಿರೂಪಣೆ ಮಾಡಲಾಗಿದ್ದು ಕನ್ನಡ ಮಾತ್ರವಲ್ಲದೇ ಇತರೆ ಭಾಷೆಯ ಸಿನಿಪ್ರಿಯರು ಕೂಡ ಅನಂತ್ ನಾಗ್ ಬಗ್ಗೆ ತಿಳಿದುಕೊಳ್ಳಲು ಇದು ಸಹಾಯಕವಾಗುತ್ತಿದೆ. ಸದ್ಯ ಈ ಡಾಕ್ಯುಮೆಂಟರಿ ವೈರಲ್ ಆಗುತ್ತಿದೆ.
ಇದನ್ನೂ ಓದಿ:
ರವಿಚಂದ್ರನ್ ‘ದೃಶ್ಯ 2’ ಶೂಟಿಂಗ್ ಶುರು; ಚಿತ್ರತಂಡಕ್ಕೆ ಹೊಸ ಎಂಟ್ರಿ ಅನಂತ್ ನಾಗ್
‘ಪ್ರಶಸ್ತಿಗಿಂತ ಜನರ ಪ್ರೀತಿ ದೊಡ್ಡದು’; AnanthnagForPadma ಆಂದೋಲನದ ಬಗ್ಗೆ ಅನಂತ್ನಾಗ್ ಪ್ರತಿಕ್ರಿಯೆ