AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರವಿಚಂದ್ರನ್​ ‘ದೃಶ್ಯ 2’ ಶೂಟಿಂಗ್​ ಶುರು; ಚಿತ್ರತಂಡಕ್ಕೆ ಹೊಸ ಎಂಟ್ರಿ ಅನಂತ್​ ನಾಗ್​​

ಯಲಹಂಕ ಬಳಿಯ ವೈಟ್ ಹೌಸ್​ನಲ್ಲಿ ‘ದೃಶ್ಯ 2’ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು. ರವಿಚಂದ್ರನ್, ಅನಂತನಾಗ್, ಪಿ. ವಾಸು ಸೇರಿದಂತೆ ಇಡೀ ಚಿತ್ರತಂಡ ಭಾಗಿ ಆಗಿತ್ತು. ಜು.12ರಿಂದಲೇ ನಿರಂತರವಾಗಿ ಚಿತ್ರೀಕರಣ ನಡೆಯಲಿದೆ.

ರವಿಚಂದ್ರನ್​ ‘ದೃಶ್ಯ 2’ ಶೂಟಿಂಗ್​ ಶುರು; ಚಿತ್ರತಂಡಕ್ಕೆ ಹೊಸ ಎಂಟ್ರಿ ಅನಂತ್​ ನಾಗ್​​
ರವಿಚಂದ್ರನ್​ ‘ದೃಶ್ಯ 2’ ಶೂಟಿಂಗ್​ ಶುರು; ಚಿತ್ರತಂಡಕ್ಕೆ ಹೊಸ ಎಂಟ್ರಿ ಅನಂತ್​ ನಾಗ್​​
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Jul 12, 2021 | 6:09 PM

Share

ರವಿಚಂದ್ರನ್​, ನವ್ಯಾ ನಾಯರ್​ ನಟಿಸಿದ್ದ ‘ದೃಶ್ಯ’ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದವರಿಗೆ ಇಲ್ಲಿದೆ ಗುಡ್​ ನ್ಯೂಸ್​. ಆ ಚಿತ್ರದ ಸೀಕ್ವೆಲ್​ಗೆ ಈಗ ಶೂಟಿಂಗ್​ ಆರಂಭ ಆಗಿದೆ. ‘ದೃಶ್ಯ 2’ ಸಿನಿಮಾದಲ್ಲೂ ರವಿಚಂದ್ರನ್​ ಮತ್ತು ನವ್ಯಾ ನಾಯರ್​ ಮುಂದುವರಿಯುತ್ತಿದ್ದಾರೆ. ಪುತ್ರಿ ಪಾತ್ರದಲ್ಲಿ ನಟಿ ಆರೋಹಿ ನಾರಾಯಣ್​ ಅಭಿನಯಿಸುತ್ತಿದ್ದಾರೆ. ಈ ಬಾರಿ ಕೂಡ ಪಿ. ವಾಸು ಅವರೇ ನಿರ್ದೇಶನದ ಸಾರಥ್ಯ ವಹಿಸಿಕೊಂಡಿದ್ದಾರೆ. ವಿಶೇಷ ಏನೆಂದರೆ, ಈ ಬಾರಿ ಹಿರಿಯ ಕಲಾವಿದ ಅನಂತ್​ ನಾಗ್​ ಅವರು ಚಿತ್ರತಂಡ ಸೇರಿಕೊಂಡಿದ್ದಾರೆ.

‘ದೃಶ್ಯ 2’ ಚಿತ್ರಕ್ಕೆ ಮುಹೂರ್ತ ಸಮಾರಂಭ ನೆರವೇರಿದೆ. ಯಲಹಂಕ ಬಳಿಯ ವೈಟ್ ಹೌಸ್​ನಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ರವಿಚಂದ್ರನ್, ಅನಂತನಾಗ್, ಪಿ. ವಾಸು ಸೇರಿದಂತೆ ಇಡೀ ಚಿತ್ರತಂಡ ಭಾಗಿ ಆಗಿತ್ತು. ಜು.12ರಿಂದಲೇ ನಿರಂತರವಾಗಿ ಚಿತ್ರೀಕರಣ ನಡೆಯಲಿದೆ. ಈ ಸಿನಿಮಾದಲ್ಲಿ ಅಭಿನಯಿಸುತ್ತಿರುವುದಕ್ಕೆ ಅನಂತ್ ನಾಗ್​ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

‘ನಾನು ಕಳೆದ ಒಂದೂವರೆ ವರ್ಷದಿಂದ ಮನೆ ಬಿಟ್ಟು ಆಚೆ ಬಂದಿಲ್ಲ. ಬಹಳ ದಿನಗಳ ನಂತರ ಆಚೆ ಬಂದಿರುವುದು ನನಗೆ ಖುಷಿಯಾಗಿದೆ. ಎಲ್ಲರೂ ಲಾಕ್ ಡೌನ್ ಸಮಯದಲ್ಲಿ ದಪ್ಪ ಆಗುತ್ತಾರೆ. ನಾನು ನಾಲ್ಕು ಕೆಜಿ ಕಡಿಮೆಯಾಗಿದ್ದೇನೆ. ನನಗೆ ಕಥೆ ಇಷ್ಟವಾಗಿ, ಕೇವಲ ನಾಲ್ಕೈದು ದಿನಗಳಲ್ಲಿ ಈ ಚಿತ್ರದಲ್ಲಿ ನಾನು ಅಭಿನಯಿಸುವುದು ಖಚಿತವಾಯಿತು. ಸ್ವಲ್ಪ ಸಮಯದಲ್ಲಿ ಚಿತ್ರತಂಡ ಎಲ್ಲಾ ಸಿದ್ಧತೆ ಮಾಡಿಕೊಂಡಿರುವುದು ಸಂತಸದ ವಿಷಯ’ ಎಂದಿದ್ದಾರೆ ಅನಂತ್​ ನಾಗ್​. ಈ ಹಿಂದೆ ಅವರು ‘ಆಯುಷ್ಮಾನ್ ​ಭವ’ ಸಿನಿಮಾದಲ್ಲಿ ಕೂಡ ಪಿ. ವಾಸು ಜೊತೆ ಕೆಲಸ ಮಾಡಿದ್ದರು.

2014ರಲ್ಲಿ ತೆರೆಕಂಡ ಮಲಯಾಳಂನ ‘ದೃಶ್ಯಂ’ ಚಿತ್ರ ಯಶಸ್ವಿ ಆಗಿತ್ತು. ಮೋಹನ್​ ಲಾಲ್​, ಮೀನಾ ನಟಿಸಿದ್ದ ಆ ಸಿನಿಮಾವನ್ನು ವಿ. ವಾಸು ಅವರು ಕನ್ನಡಕ್ಕೆ ‘ದೃಶ್ಯ’ ಹೆಸರಿನಲ್ಲಿ ರಿಮೇಕ್​ ಮಾಡಿದ್ದರು. ಈ ವರ್ಷ ಮಲಯಾಳಂನಲ್ಲಿ ‘ದೃಶ್ಯಂ 2’ ಸಿದ್ಧಗೊಂಡು ಓಟಿಟಿ ಮೂಲಕ ಬಿಡುಗಡೆ ಆಗಿತ್ತು. ಅದಕ್ಕೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆ ಸಿನಿಮಾದ ಗೆಲುವಿನ ಬಳಿಕ ಕನ್ನಡಕ್ಕೂ ರಿಮೇಕ್​ ಆಗುತ್ತಿದೆ. ಮೊದಲ ಭಾಗದ ಕಥೆಯೇ ಎರಡನೇ ಭಾಗದಲ್ಲೂ ಮುಂದುವರಿಯುತ್ತಿದ್ದು, ಪಾತ್ರವರ್ಗದಲ್ಲೂ ಬಹುತೇಕ ಅದೇ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.

E4 Entertainment ಬ್ಯಾನರ್​ನಲ್ಲಿ ‘ದೃಶ್ಯ 2’ ಸಿನಿಮಾ ಮೂಡಿಬರುತ್ತಿದೆ. ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಸಿ.ವಿ. ಸಾರಥಿ ಕೆಲಸ ಮಾಡುತ್ತಿದ್ದಾರೆ. ಜಿ.ಎಸ್.ವಿ. ಸೀತಾರಾಂ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ, ರವಿ ಸಂತೆಹುಕ್ಲು ಕಲಾ ನಿರ್ದೇಶನ ಹಾಗೂ ಲೋಕೇಶ್ ಬಿಕೆ ಗೌಡ, ಭರತ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ‌. ಪ್ರಭು ಶಿವಾಜಿ, ಸಾಧುಕೋಕಿಲ, ನೀತು ರೈ, ಪ್ರಮೋದ್ ಶೆಟ್ಟಿ, ಅಶೋಕ್, ಶಿವರಾಂ, ಉನ್ನತಿ, ಕೃಷ್ಣ ಯಟರ್ನ್, ನಾರಾಯಣ್ ಸ್ವಾಮಿ, ಲಾಸ್ಯ ನಾಗರಾಜ್ ಮುಂತಾದವರು ನಟಿಸುತ್ತಿದ್ದಾರೆ.

ಇದನ್ನೂ ಓದಿ:

ಬಿಗ್​ ಬಾಸ್​ ಹೊಸ ಸೀಸನ್​ನಲ್ಲಿ ರವಿಚಂದ್ರನ್​ ಸಿನಿಮಾ ನಾಯಕಿ? ಕೇಳಿಬರ್ತಿದೆ ಸ್ಟಾರ್ ನಟಿ ಹೆಸರು

ದೃಶ್ಯಂ ಸಿನಿಮಾ ನೋಡಿ ದರೋಡೆಗೆ ಪ್ಲ್ಯಾನ್.. ಇದು ನಿಮ್ಮ ಊಹೆಗೂ ನಿಲುಕದಂಥ ‘ಶೂ’ ಮ್ಯಾನ್ ಥ್ರಿಲ್ಲರ್!