ಕರ್ನಾಟಕ ವಿಧಾನಸಭಾ ಚುನಾವಣೆ 2023ಕ್ಕೆ (Karnataka Assembly Election 2023) ಇಂದು ಮತದಾನ ನಡೆದಿದೆ. ರಾಜ್ಯದ ಎಲ್ಲ 224 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನವನ್ನು ಚುನಾವಣಾ ಆಯೋಗ (Election Commission) ನಡೆಸಿದ್ದು, ರಾಜ್ಯದ ಜನ ಸಕ್ರಿಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಹಲವು ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ಸಹ ತಮ್ಮ ತಮ್ಮ ಕ್ಷೇತ್ರದಲ್ಲಿ ಇಂದು ಮತಚಲಾವಣೆ ಮಾಡಿದ್ದಾರೆ. ಹಿರಿಯ ನಟ ಅನಂತ್ನಾಗ್ (Ananth Nag) ಸಹ ಇಂದು ಮತಚಲಾವಣೆ ಮಾಡಿದ್ದು ಮತದಾನ ಮಾಡಿದ ಬಳಿಕ ಮಾಧ್ಯಮಗಳೊಟ್ಟಿಗೆ ಅಭಿವೃದ್ಧಿಯ ಬಗ್ಗೆ ಹಾಗೂ ಯಾವ ಕಾರಣಕ್ಕೆ ಮತ ಚಲಾಯಿಸಬೇಕು ಎಂಬ ಬಗ್ಗೆ ಮಾತನಾಡಿದ್ದಾರೆ.
ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ, ಮೂಲಭೂತ ಸೌಕರ್ಯಗಳು ಇಂದು ಎಲ್ಲರಿಗೂ ದೊರೆಯುತ್ತಿವೆ. ನರೇಂದ್ರ ಮೋದಿಯವರು ಬಂದ ನಂತರವಂತೂ ಒಳ್ಳೆಯ ಅಭಿವೃದ್ಧಿ ಆಗುತ್ತಿವೆ. ಫ್ಲೈ ಓವರ್, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳು ಎಲ್ಲ ಬಹಳ ಚೆನ್ನಾಗಿ ಆಗುತ್ತಿವೆ. ಮೂಲಭೂತ ಸೌಕರ್ಯದಿಂದ ಮೇಲೆ ಹೋಗುವ ಪ್ರಯತ್ನ ನಾವು ಮಾಡಬೇಕು. ಪ್ರತಿಸಲವೂ ನಾವು ಸಾಲಮನ್ನಾ, ಉಚಿತ ರೇಷನ್ ಇವುಗಳನ್ನು ದಾಟಿ ಮುಂದೆ ಹೋಗಬೇಕು ಎಂದಿದ್ದಾರೆ. ಆ ಮೂಲಕ ಪರೋಕ್ಷವಾಗಿ ಸಾಲಮನ್ನಾ ಮಾಡುವ ಭರವಸೆ, ಉಚಿತ ಅಕ್ಕಿ ನೀಡುವ ಭರವಸೆ ನೀಡುವವರಿಗೆ ಮತನೀಡಬೇಡಿ ಎಂದಿದ್ದಾರೆ.
ಮುಂದುವರೆದು, ”ಯೂರೋಪ್, 27 ದೇಶಗಳ ಒಕ್ಕೂಟ, ಅವರು ಬಹಳ ಅಭಿವೃದ್ಧಿ ಸಾಧಿಸಿದ್ದಾರೆ. ಅವರು ಕೆಳಸ್ತರದಲ್ಲಿ ಇಲ್ಲ. ಬಿಪಿಎಲ್ (ಬಡತನ ರೇಖೆಗಿಂತ ಕೆಳಗೆ) ಎಂದು ಏನನ್ನು ಕರೀತೀವಿ ಅದು ಯೂರೋಪ್ನಲ್ಲಿಲ್ಲ. ಅದೇ ರೀತಿಯ ಸ್ವರ್ಗ ನಮ್ಮಲ್ಲೂ ನಿರ್ಮಾಣ ಆಗಬೇಕು. ಬಡತನ ಸಂಪೂರ್ಣವಾಗಿ ನಿರ್ನಾಮವಾಗಬೇಕು, ಅಂತಹಾ ಸಮಯ ಬೇಗ ಬರಲಿ ಎಂದು ನಾನು ಆಶಿಸುತ್ತೇನೆ, ಯೂರೋಪ್ ಮಾದರಿಯಲ್ಲಿ ನಾವು ಬೆಳೆಯಬೇಕು, ಬಿಲೋ ಪವರ್ಟಿ ಲೈನ್ ಎನ್ನುವ ಪದವೇ ಇರಬಾರದು” ಎಂದರು ಅನಂತ್ನಾಗ್.
”ನಿನ್ನೆಯಿಂದ ನಾವು ನೋಡುತ್ತಿದ್ದೇವೆ ನಮ್ಮ ಪಕ್ಕದ ದೇಶದಲ್ಲಿ ಏನಾಗುತ್ತಿದೆ ಎಂದು. ಎಷ್ಟು ಗಲಾಟೆಗಳು ಆಗುತ್ತಿವೆ ಎಂದು. ಅದಕ್ಕೆ ಹೋಲಿಸಿಕೊಂಡರೆ ನಾವು ಬಹಳ ಚೆನ್ನಾಗಿದ್ದೇವೆ, ಗಟ್ಟಿಯಾದ ಪ್ರಜಾಪ್ರಭುತ್ವದ ವ್ಯವಸ್ಥೆ ಮಾಡಿಕೊಂಡಿದ್ದೇವೆ” ಎಂದು ಪಾಕಿಸ್ತಾನದಲ್ಲಿ ನಡೆಯುತ್ತಿರುವ ಘಟನೆಯನ್ನು ಉದಾಹರಣೆಯಾಗಿ ನೀಡಿ ಅನಂತ್ನಾಗ್ ಹೇಳಿದರು.
ಇದನ್ನೂ ಓದಿ:ಯಾವ ಪಕ್ಷಕ್ಕೂ ಸೇರಲ್ಲ ಹಿರಿಯ ನಟ ಅನಂತ್ ನಾಗ್; ವದಂತಿ ಹಬ್ಬಿಸಿದವರ ಬಗ್ಗೆ ಅಸಮಾಧಾನ
ಅನಂತ್ನಾಗ್ ಅವರು ಬಿಜೆಪಿ ಬೆಂಬಲಿಗರಾಗಿದ್ದು, ತಾವು ಮೋದಿಯವರ ಅಭಿಮಾನಿ ಎಂದು ಈ ಹಿಂದೆಯೂ ಹಲವು ಬಾರಿ ಹೇಳಿಕೊಂಡಿದ್ದಾರೆ. ಚುನಾವಣೆ ಘೋಷಣೆಗೆ ಮುನ್ನ, ಅನಂತ್ನಾಗ್ ಬಿಜೆಪಿ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗಿತ್ತು ಆದರೆ ಕೊನೆಯ ಕ್ಷಣದಲ್ಲಿ ಅದು ರದ್ದಾಯಿತು. ಅನಂತ್ನಾಗ್ ಸ್ವತಃ ರಾಜಕಾರಣಿಯಾಗಿದ್ದು ಮಾಜಿ ಸಚಿವರೂ ಆಗಿದ್ದಾರೆ. ಆದರೆ ಬಹಳ ವರ್ಷಗಳಿಂದ ಅವರು ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ