ತುಂಬ ಅದ್ದೂರಿಯಾಗಿ ‘ಗಂಧದ ಗುಡಿ’ (Gandhada Gudi) ಸಾಕ್ಷ್ಯಚಿತ್ರ ರಿಲೀಸ್ ಆಗಿದೆ. ಈ ಡಾಕ್ಯುಮೆಂಟರಿ ಎಲ್ಲರಿಗೂ ಭಾವುಕವಾಗಿ ಕನೆಕ್ಟ್ ಆಗುತ್ತಿದೆ. ನಿರೂಪಕಿ ಅನುಶ್ರೀ (Anchor Anushree) ಅವರು ಗುರುವಾರ ರಾತ್ರಿಯೇ ಇದನ್ನು ಕಣ್ತುಂಬಿಕೊಂಡಿದ್ದಾರೆ. ನೋಡಿ ಹೊರಬಂದ ಬಳಿಕ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಈ ವೇಳೆ ಅವರು ಸಖತ್ ಎಮೋಷನಲ್ ಆಗಿ ಕಣ್ಣೀರು ಹಾಕಿದ್ದಾರೆ. ಇದು ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಕನಸಿನ ಪ್ರಾಜೆಕ್ಟ್. ಇಡೀ ಕರ್ನಾಟಕದ ಪ್ರಕೃತಿ ಸೌಂದರ್ಯವನ್ನು ಅವರು ತೋರಿಸಿದ್ದಾರೆ. ಅದನ್ನು ನೋಡಲು ಎರಡು ಕಣ್ಣುಗಳು ಸಾಲದು ಅಂತ ಫ್ಯಾನ್ಸ್ ಹೊಗಳುತ್ತಿದ್ದಾರೆ. ಅನುಶ್ರೀ ಅವರಿಗೂ ಇದು ಸಖತ್ ಇಷ್ಟವಾಗಿದೆ.
‘ಈ ಸಿನಿಮಾದಲ್ಲಿ ಅವರು ಹೇಳಿರುವ ಒಂದೊಂದು ಮಾತು ಕೂಡ ಕಾಡುತ್ತದೆ. ಅವರಿಗೆ ಎಲ್ಲವೂ ಮೊದಲೇ ಗೊತ್ತಿತ್ತಾ ಎಂಬ ಪ್ರಶ್ನೆ ಮೂಡುತ್ತದೆ. ನಾವು ಈ ಭೂಮಿಗೆ ಬಂದಾಗ ಮಗುವಾಗಿ ಬರುತ್ತೇವೆ. ಹೋಗುವಾಗಲೂ ಮಗುವಿನ ಮನಸ್ಥಿತಿಯಲ್ಲೇ ಎಲ್ಲವನ್ನೂ ಅನುಭವಿಸಿ ಅಪ್ಪು ಹೋಗಿದ್ದಾರೆ. ಅಪ್ಪು ರೀತಿ ಬಾಳುವ ಅವಕಾಶ ಎಷ್ಟು ಜನಕ್ಕೆ ಸಿಗುತ್ತೆ? ಇದನ್ನು ನೋಡಲು ಖುಷಿ ಮತ್ತು ಸಂಕಟ ಎರಡೂ ಆಗುತ್ತದೆ. ಪರಮಾತ್ಮನು ಪ್ರಾಣಿ, ಪಕ್ಷಿ, ಮನುಷ್ಯ, ನಿಸರ್ಗ ಹೀಗೆ ಎಲ್ಲವನ್ನೂ ಸೃಷ್ಟಿ ಮಾಡುತ್ತಾನೆ. ಆತ ಸೃಷ್ಟಿ ಮಾಡಿದ ಎಲ್ಲವನ್ನೂ ಸ್ಪರ್ಶಿಸಿ ಹೋಗೋಕೆ ಅಪ್ಪು ಅವರು ಜನ್ಮ ತಾಳಿದ್ದರು ಅಂತ ನನಗೆ ‘ಗಂಧದ ಗುಡಿ’ ನೋಡಿದ ಬಳಿಕ ಅನಿಸಿದು’ ಎಂದು ಅನುಶ್ರೀ ಹೇಳಿದ್ದಾರೆ.
ಸರಳವಾಗಿ ಸಂದೇಶ ನೀಡಿದ ಪುನೀತ್:
‘ಪುನೀತ್ ರಾಜ್ಕುಮಾರ್ ಅವರು ‘ಪವರ್ ಸ್ಟಾರ್’. ಆದರೆ ಕಾಡಿಗೆ ಹೋಗಿ ಅಲ್ಲಿನ ಜನರ ಜೊತೆ ಬೆರೆತಿದ್ದರು. ಅಲ್ಲಿನ ಮಕ್ಕಳಿಗೆ ಪುನೀತ್ ಯಾರೆಂಬುದೇ ಗೊತ್ತಿಲ್ಲ. ಅದಕ್ಕೆ ಅವರು ಬೇಸರ ಮಾಡಿಕೊಳ್ಳದೇ, ‘ಓಹ್.. ಇಲ್ಲಿ ಕರೆಂಟ್ ಇಲ್ಲ, ಇಲ್ಲೆಲ್ಲ ಪ್ಲಾಸ್ಟಿಕ್ ಹಾಕಬಾರದು’ ಎಂಬಂತಹ ವಿಷಯಗಳನ್ನು ತುಂಬ ಸರಳವಾಗಿ ಹೇಳಿದ್ದಾರೆ. ಎಲ್ಲಾದರೂ ಇರು ಎಂಥಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು ಅಂತ ಅವರು ಹಾಡಿದ್ದು ಮನಸ್ಸಿಗೆ ಬಹಳ ಹತ್ತಿರ ಆಯ್ತು’ ಎಂದು ಅನುಶ್ರೀ ಹೇಳಿದ್ದಾರೆ.
ಎಲ್ಲರೂ ಇದನ್ನು ನೋಡಬೇಕು:
‘ಎಲ್ಲರೂ ಸಿನಿಮಾವನ್ನು ನೋಡಬೇಕು. ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಯಾಗಿ ಈ ಮಾತನ್ನು ಹೇಳುತ್ತಿದ್ದೇನೆ ಅಂತಲ್ಲ. ಒಬ್ಬ ಮಾನವನಾಗಿ ಇನ್ನೊಬ್ಬ ವಿಶ್ವ ಮಾನವ ಅಲ್ಲಿ ಬದುಕಿರುವ ಬದುಕನ್ನು ನೋಡಿ ಕಲಿಯುವ ಸಲುವಾಗಿಯಾದರೂ ನೀವೆಲ್ಲರೂ ಇದನ್ನು ನೋಡಬೇಕು’ ಎಂದಿದ್ದಾರೆ ಅನುಶ್ರೀ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:35 am, Fri, 28 October 22