ಈ ಒಂದು ದಿನಕ್ಕಾಗಿ ಪುನೀತ್ ರಾಜ್ಕುಮಾರ್ (Puneeth Rajkumar) ಅಭಿಮಾನಿಗಳು ಒಂದು ವರ್ಷದಿಂದ ಕಾದಿದ್ದರು. ಅಪ್ಪು ಕಂಡಿದ್ದು ದೊಡ್ಡ ಕನಸು ಈ ‘ಗಂಧದ ಗುಡಿ’. ಬಹಳ ಪ್ರೀತಿಯಿಂದ ಇದನ್ನು ಜನರಿಗೆ ತೋರಿಸಬೇಕು ಎಂದು ಪುನೀತ್ ಆಸೆ ಇಟ್ಟುಕೊಂಡಿದ್ದರು. ಆ ಆಸೆಯನ್ನು ಈಡೇರಿಸುವ ಸಲುವಾಗಿ ಡಾ. ರಾಜ್ಕುಮಾರ್ ಕುಟುಂಬ ಹಗಲಿರುಳು ಶ್ರಮಿಸಿದೆ. ಇಂದು (ಅಕ್ಟೋಬರ್ 28) ರಾಜ್ಯಾದ್ಯಂತ ಅದ್ದೂರಿಯಾಗಿ ‘ಗಂಧದ ಗುಡಿ’ (Gandhada Gudi) ರಿಲೀಸ್ ಆಗಿದೆ. ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಮುಗಿಬಿದ್ದು ಇದನ್ನು ನೋಡುತ್ತಿದ್ದಾರೆ. ಬೆಂಗಳೂರು ಮಾತ್ರವಲ್ಲದೇ ಎಲ್ಲ ಜಿಲ್ಲೆಯಲ್ಲೂ ಅಪ್ಪು ಗುಣಗಾನ ಮಾಡಲಾಗುತ್ತಿದೆ. ಮುಂಜಾನೆಯ ಎಲ್ಲ ಶೋಗಳು ಹೌಸ್ಫುಲ್ ಆಗಿವೆ.
ದೊಡ್ಡ ಪರದೆ ಮೇಲೆ ಪುನೀತ್ ರಾಜ್ಕುಮಾರ್ ಅವರನ್ನು ನೋಡಲು ಸಿಕ್ಕಿರುವ ಕೊನೆಯ ಅವಕಾಶ ಇದು. ಕರ್ನಾಟಕದ 225ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಾಕ್ಷ್ಯಚಿತ್ರ ಬಿಡುಗಡೆ ಆಗಿದೆ. ಗುರುವಾರವೇ (ಅ.27) ಹಲವು ಕಡೆಗಳಲ್ಲಿ ಪ್ರೀಮಿಯರ್ ಶೋ ಆಯೋಜನೆಗೊಂಡಿತ್ತು. ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಕೂಡ ಈ ಡಾಕ್ಯುಮೆಂಟರಿ ನೋಡಿ ಎಮೋಷನಲ್ ಆಗುತ್ತಿದ್ದಾರೆ. ಇಂದು ಮುಂಜಾನೆಯೇ ಚಿತ್ರಮಂದಿರದ ಎದುರು ಸಾಲಾಗಿ ನಿಂತು, ಟಿಕೆಟ್ ಪಡೆದು ಅಪ್ಪು ದರ್ಶನಕ್ಕೆ ಬಂದಿದ್ದಾರೆ ಅಪಾರ ಸಂಖ್ಯೆಯ ಅಭಿಮಾನಿಗಳು.
‘ಗಂಧದ ಗುಡಿ’ ಪ್ರದರ್ಶನ ಆಗುತ್ತಿರುವ ಎಲ್ಲ ಚಿತ್ರಮಂದಿರಗಳ ಎದುರಲ್ಲಿ ಅಪ್ಪು ಕಟೌಟ್ಗಳು ರಾರಾಜಿಸುತ್ತಿವೆ. ತುಂಬ ಅದ್ದೂರಿಯಾಗಿ ಅಭಿಮಾನಿಗಳು ಈ ಸಾಕ್ಷ್ಯಚಿತ್ರಕ್ಕೆ ಸ್ವಾಗತ ಕೋರಿದ್ದಾರೆ. ಬಳ್ಳಾರಿಯಲ್ಲಿ ಇದನ್ನು ನೋಡಲು ಮುಗಿಬಿದ್ದ ಪ್ರೇಕ್ಷಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ವೃದ್ಧರು, ಮಕ್ಕಳು ಎನ್ನದೇ ಎಲ್ಲ ವಯೋಮಾನದವರು ಬಂದು ಈ ಡಾಕ್ಯುಮೆಂಟರಿ ಕಣ್ತುಂಬಿಕೊಳ್ಳುತ್ತಿದ್ದಾರೆ.
‘ಗಂಧದ ಗುಡಿ’ ಡಾಕ್ಯುಮೆಂಟರಿಗೆ ಅಮೋಘವರ್ಷ ಅವರು ನಿರ್ದೇಶನ ಮಾಡಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ಪಿಆರ್ಕೆ ಪ್ರೊಡಕ್ಷನ್ಸ್ ಮೂಲಕ ಇದು ನಿರ್ಮಾಣ ಆಗಿದೆ. ದಾಖಲೆ ಪ್ರಮಾಣದಲ್ಲಿ ಈ ಚಿತ್ರ ಪ್ರದರ್ಶನ ಕಾಣುತ್ತಿದೆ. ಕರ್ನಾಟಕದ ಪ್ರಕೃತಿ ಸೌಂದರ್ಯ, ವನ್ಯ ಜೀವಿಗಳ ಜಗತ್ತು, ಕಾಡಿನ ಜನರ ಬದುಕು ಸೇರಿದಂತೆ ಹಲವಾರು ವಿಷಯಗಳನ್ನು ಇದರಲ್ಲಿ ಹೇಳಲಾಗಿದೆ. ಅಪ್ಪು ಅವರ ಈ ಅಪರೂಪದ ಪ್ರಯತ್ನ ಎಲ್ಲರಿಗೂ ಇಷ್ಟ ಆಗುತ್ತಿದೆ.
ಗುರುವಾರ ಆಯೋಜಿಸಿದ್ದ ಪ್ರೀಮಿಯರ್ ಶೋನಲ್ಲಿ ರಮ್ಯಾ, ಸುಧಾ ಮೂರ್ತಿ, ಅನುಶ್ರೀ, ಅಜಯ್ ರಾವ್, ದೇವರಾಜ್, ನೆನಪಿರಲಿ ಪ್ರೇಮ್, ಗುರು ಕಿರಣ್, ಸಂಗೀತಾ ಶೃಂಗೇರಿ, ಅಮೃತಾ ಅಯ್ಯಂಗಾರ್, ರೋಹಿತ್ ಪದಕಿ, ಕುನಾಲ್ ಗಾಂಜಾವಾಲಾ, ಅಭಿಷೇಕ್ ಅಂಬರೀಷ್, ಚೇತನ್ ಕುಮಾರ್, ಸಂತೋಷ್ ಆನಂದ್ ರಾಮ್ ಮುಂತಾದವರು ‘ಗಂಧದ ಗುಡಿ’ ವೀಕ್ಷಿಸಿ ಭಾವುಕರಾಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.