Puneeth Rajkumar Twitter: ವರ್ಷದ ಬಳಿಕ ಪುನೀತ್ ಟ್ವಿಟರ್ ಖಾತೆ ಆಕ್ಟೀವ್; ‘ಒಂದು ಕ್ಷಣ ಅವರೇ ವಾಪಸ್ ಬಂದಂಗಾಯ್ತು’ ಎಂದ ಫ್ಯಾನ್ಸ್
Gandhada Gudi | Puneeth Rajkumar: ‘ನಿಮ್ಮನ್ನೆಲ್ಲ ನೋಡುವ ಕಾತುರದಲ್ಲಿ..’ ಎಂದು ಪುನೀತ್ ರಾಜ್ಕುಮಾರ್ ಟ್ವಿಟರ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ‘ಗಂಧದ ಗುಡಿ’ಯ ಒಂದು ಸಣ್ಣ ತುಣುಕು ಕೂಡ ಹಂಚಿಕೊಳ್ಳಲಾಗಿದೆ.
ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡು ಭಾರತೀಯ ಚಿತ್ರರಂಗ ಬಡವಾಗಿದೆ. ಅವರ ಅಗಲಿಕೆಯಿಂದ ಅಭಿಮಾನಿಗಳಿಗೆ ಕಾರ್ಮೋಡ ಕವಿದಂತೆ ಆಗಿದೆ. ಅಪ್ಪು ಕೊನೆಯದಾಗಿ ಟ್ವೀಟ್ ಮಾಡಿದ್ದು 2021ರ ಅಕ್ಟೋಬರ್ 29ರಂದು. ನಿಧನರಾಗುವುದಕ್ಕೂ ಕೆಲವೇ ಕ್ಷಣಗಳ ಮುನ್ನ ಅವರು ‘ಭಜರಂಗಿ 2’ ಚಿತ್ರಕ್ಕೆ ಶುಭ ಕೋರಿ ಟ್ವೀಟ್ ಮಾಡಿದ್ದರು. ಆ ಬಳಿಕ ಅವರ ಟ್ವಿಟರ್ (Puneeth Rajkumar Twitter) ಖಾತೆಯಿಂದ ಯಾವುದೇ ಪೋಸ್ಟ್ ಮಾಡಲಾಗಿರಲಿಲ್ಲ. ಈಗ ಬರೋಬ್ಬರಿ ಒಂದು ವರ್ಷದ ಬಳಿಕ ಪುನೀತ್ ರಾಜ್ಕುಮಾರ್ ಅವರ ಟ್ವೀಟರ್ ಅಕೌಂಟ್ ಮತ್ತೆ ಸಕ್ರಿಯವಾಗಿದೆ. ‘ಗಂಧದ ಗುಡಿ’ (Gandhada Gudi) ಬಿಡುಗಡೆ ಹೊಸ್ತಿಲಿನಲ್ಲಿ ಟ್ವೀಟ್ ಮಾಡಲಾಗಿದೆ. ಇದನ್ನು ಕಂಡು ಅಪ್ಪು ಅಭಿಮಾನಿಗಳು ಒಮ್ಮೆಲೇ ಶಾಕ್ ಆಗಿದ್ದಾರೆ.
‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಬಗ್ಗೆ ಪುನೀತ್ ರಾಜ್ಕುಮಾರ್ ಅವರು ಸಾಕಷ್ಟು ಕನಸು ಕಂಡಿದ್ದರು. ಅವರ ಕನಸಿನ ಪ್ರಾಜೆಕ್ಟ್ ಅಕ್ಟೋಬರ್ 28ರಂದು ಬಿಡುಗಡೆ ಆಗುತ್ತಿದೆ. ಅನೇಕ ಕಡೆಗಳಲ್ಲಿ ಅ.27ರ ಸಂಜೆಯೇ ಪ್ರೀಮಿಯರ್ ಶೋ ಆಯೋಜನೆಗೊಂಡಿದೆ. ಆ ಪ್ರಯುಕ್ತ ಅಪ್ಪು ಟ್ವಿಟರ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ‘ನಿಮ್ಮನ್ನೆಲ್ಲ ನೋಡುವ ಕಾತುರದಲ್ಲಿ…’ ಎಂಬ ಕ್ಯಾಪ್ಷನ್ ಜೊತೆ ಟ್ವೀಟ್ ಮಾಡಲಾಗಿದೆ. ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಒಂದು ಸಣ್ಣ ತುಣುಕು ಕೂಡ ಹಂಚಿಕೊಳ್ಳಲಾಗಿದೆ.
ಪುನೀತ್ ರಾಜ್ಕುಮಾರ್ ಅವರ ಖಾತೆ ಹೀಗೆ ತಕ್ಷಣ ಆಕ್ಟೀವ್ ಆಗುತ್ತದೆ ಎಂದು ಅಭಿಮಾನಿಗಳು ಊಹಿಸಿರಲಿಲ್ಲ. ಏಕಾಏಕಿ ಟ್ವೀಟ್ ಮಾಡಿದ್ದನ್ನು ಕಂಡು ಎಲ್ಲರಿಗೂ ಅಚ್ಚರಿ ಆಗಿದೆ. ‘ಪಿಆರ್ಕೆ ಪ್ರೊಡಕ್ಷನ್ಸ್’ ತಂಡದಿಂದ ಈ ಟ್ವೀಟ್ ಮಾಡಲಾಗಿದೆ. ಇದನ್ನು ನೋಡಿ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಜನರು ತುಂಬ ಎಮೋಷನಲ್ ಆಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ನಿಮ್ಮನ್ನೆಲ್ಲ ನೋಡುವ ಕಾತುರದಲ್ಲಿ…
Looking forward to see you all in the theaters ❤️
– Team PRK#GandhadaGudi @Ashwini_PRK #Amoghavarsha @PRK_Productions @PRKAudio @AJANEESHB #Mudskipper @pratheek_dbf @KRG_Studios @KRG_Connects #GGMovie #PowerInU pic.twitter.com/9gEwyGCzIT
— Puneeth Rajkumar (@PuneethRajkumar) October 27, 2022
‘ಒಂದು ಕ್ಷಣ ಪುನೀತ್ ರಾಜ್ಕುಮಾರ್ ಅವರೇ ವಾಪಸ್ ಬಂದಂಗೆ ಆಯ್ತು’ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ‘ಈ ಟ್ವೀಟ್ ರೀತಿಯೇ ಅಪ್ಪು ಬಾಸ್ ಕೂಡ ಸಡನ್ನಾಗಿ ಬಂದು ಬಿಡಲಿ’ ಎಂದು ಜನರು ಭಾವುಕವಾಗಿ ಪ್ರತಿಕ್ರಿಯಿದ್ದಾರೆ. ‘ಈ ಖಾತೆಯಿಂದ ಟ್ವೀಟ್ ಬರುತ್ತದೆ ಅಂತ ನಾವು ಊಹಿಸಿಯೇ ಇರಲಿಲ್ಲ’ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ಕೆಲವೇ ನಿಮಿಷಗಳಲ್ಲಿ ಈ ಪೋಸ್ಟ್ ವೈರಲ್ ಆಗಿದೆ. ‘ನಾವೂ ಕೂಡ ನಿಮ್ಮನ್ನು ನೋಡುವ ಕಾತುರದಲ್ಲಿದ್ದೇವೆ’ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:41 pm, Thu, 27 October 22