ಅನುಶ್ರೀ, ರೋಷನ್ ಮದುವೆ: ಲವ್ ಸ್ಟೋರಿ ಬಗ್ಗೆ ಮೊದಲ ಬಾರಿ ಮಾತಾಡಿದ ಜೋಡಿ
ಜನಪ್ರಿಯ ನಿರೂಪಕಿ ಅನುಶ್ರೀ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ರೋಷನ್ ರಾಮಮೂರ್ತಿ ಜೊತೆ ಅನುಶ್ರೀ ಮದುವೆ ನೆರೆವೇರಿದೆ. ಅನೇಕ ಸೆಲೆಬ್ರಿಟಿಗಳು ಬಂದು ದಂಪತಿಗೆ ಆಶೀರ್ವಾದ ಮಾಡಿದ್ದಾರೆ. ಮದುವೆ ಬಳಿಕ ಮಾಧ್ಯಮಗಳ ಜೊತೆ ಅನುಶ್ರೀ ಅವರು ಮಾತನಾಡಿದರು. ತಮ್ಮ ಲವ್ ಸ್ಟೋರಿ ಬಗ್ಗೆಯೂ ಅವರು ಹೇಳಿದರು.

ಬೆಂಗಳೂರಿನ ಹೊರವಲಯದಲ್ಲಿ ಆ್ಯಂಕರ್ ಅನುಶ್ರೀ (Anchor Anushree) ಅವರ ಮದುವೆ ನಡೆದಿದೆ. ಅನುಶ್ರೀ ಅವರನ್ನು ರೋಷನ್ ರಾಮಮೂರ್ತಿ (Roshan) ವರಿಸಿದ್ದಾರೆ. ಇವರಿಬ್ಬರದ್ದು ಲವ್ ಮ್ಯಾರೇಜ್. ಶಿವರಾಜ್ಕುಮಾರ್, ತಾರಾ, ಪ್ರೇಮಾ, ತರುಣ್ ಸುಧೀರ್, ಹಂಸಲೇಖ, ಶರಣ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಮದುವೆಯಲ್ಲಿ ಭಾಗಿ ಆಗಿದ್ದಾರೆ. ರೋಷನ್ ಅವರು ತಾಳಿ ಕಟ್ಟುವಾಗ ಅನುಶ್ರೀ ಎಮೋಷನಲ್ ಆದರು. ಸಿಂಪಲ್ ಆಗಿ ಮದುವೆ ಆಗಬೇಕು ಎಂಬುದು ಅನುಶ್ರೀ ಆಸೆ ಆಗಿತ್ತು. ಅದರಂತೆಯೇ ಮದುವೆ (Anushree Marriage) ನೆರವೇರಿದೆ. ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
‘ಮದುವೆ ಬಹಳ ಸುಂದರವಾಗಿ, ಸರಳವಾಗಿ ನಡೆದಿದೆ. ಬಹಳ ಕಡಿಮೆ ಜನರ ಎದುರು ನಮ್ಮಿಬ್ಬರ ವಿವಾಹ ಆಗಬೇಕು ಎಂಬುದು ಆಸೆ ಆಗಿತ್ತು. ಇವರ ಹೆಸರು ರೋಷನ್ ರಾಮಮೂರ್ತಿ. ಕುಶಾಲ ನಗರದಲ್ಲಿ ಇರುವವರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಾ ಇದ್ದಾರೆ. ಈಗ ನನ್ನ ಮದುವೆ ಆಗಿದ್ದಾರೆ. ಮದುವೆಗೆ ಬಂದಿರುವ ಎಲ್ಲರಿಗೂ ಧನ್ಯವಾದಗಳು’ ಎಂದಿದ್ದಾರೆ ಅನುಶ್ರೀ.
‘ನಮ್ಮದು ಸಿಂಪಲ್ ಲವ್ ಸ್ಟೋರಿ. ಅದನ್ನು ಯಾರು ಹೇಳಿದರೂ ನಂಬುತ್ತಾ ಇರಲಿಲ್ಲ. ನಾವಿಬ್ಬರು ಫ್ರೆಂಡ್ಸ್ ಆದೆವು. ಕಾಫಿ ಕುಡಿದೆವು. ನನಗೆ ಅವರು ಇಷ್ಟ ಆದರು. ಅವರಿಗೆ ನಾನು ಇಷ್ಟ ಆದೆ. ಲವ್ ಆಯಿತು. ಮದುವೆ ಆದೆವು. ರೋಷನ್ ಕೂಡ ಅಪ್ಪು ಸರ್ ಅವರನ್ನು ಬಹಳ ಇಷ್ಟಪಡುವವರು. ಪುನೀತ ಪರ್ವ ಕಾರ್ಯಕ್ರಮದಲ್ಲಿ ನಾವು ಭೇಟಿ ಮಾಡಿದ್ದು. ಒಂದು ಲೆಕ್ಕದಲ್ಲಿ ಅಪ್ಪು ಸರ್ ಅವರೇ ನಮ್ಮನ್ನು ಸೇರಿಸಿದ್ದಾರೆ’ ಎಂದು ಅನುಶ್ರೀ ಹೇಳಿದ್ದಾರೆ.
‘5 ವರ್ಷದಿಂದ ಅನುಶ್ರೀ ಪರಿಚಯ. ಕಳೆದ 3 ವರ್ಷದಿಂದ ಹೆಚ್ಚು ಆಪ್ತರಾದೆವು. ಶ್ರೀದೇವಿ ಬೈರಪ್ಪ ನನ್ನ ಬಾಲ್ಯದ ಸ್ನೇಹಿತೆ. ಅವರಿಂದಾಗಿ ಅನು ಪರಿಚಯ ಆಯಿತು. ಅನುಶ್ರೀ ಸಿಂಪಲ್ ಹುಡುಗಿ. ನನಗೆ ಎಂದಿಗೂ ಅವರೊಬ್ಬ ಸೆಲೆಬ್ರಿಟಿ ಅಂತ ಅನಿಸಿಯೇ ಇಲ್ಲ. ಆ ಗುಣವೇ ನನಗೆ ತುಂಬ ಇಷ್ಟ ಆಯಿತು. ನಾನು ಚೆನ್ನಾಗಿ ಅಡುಗೆ ಮಾಡುತ್ತೇವೆ’ ಎಂದು ರೋಷನ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ಅನುಶ್ರೀ ಮದುವೆಗೆ ಆಗಮಿಸಿ ಹರಸಿದ ಶಿವಣ್ಣ-ಗೀತಕ್ಕ: ವಿಡಿಯೋ ನೋಡಿ
‘ನಾವಿಬ್ಬರು ಜೀವನವನ್ನು ತುಂಬ ಸರಳವಾಗಿ ನೋಡುವವರು. ಚಿಕ್ಕ ಚಿಕ್ಕ ಸಂತೋಷಗಳನ್ನು ತುಂಬ ಇಷ್ಟಪಡುತ್ತೇವೆ. ಅವರಿಗೆ ಸಹಾಯ ಮಾಡುವ ಮನೋಭಾವ ಇದೆ. ಅದು ನನಗೆ ಬಹಳ ಇಷ್ಟ ಆಗಿದೆ. ನಮ್ಮ ಅಮ್ಮನಿಗೆ ತುಂಬ ಖುಷಿ ಆಗಿದೆ. ಮದುವೆ ಮಾಡಿಸಿದ್ದು, ಅರೇಂಜ್ಮೆಂಟ್ ಮಾಡಿದ್ದು, ಅಪ್ಪು ಸರ್ ಪರವಾಗಿ ಇದನ್ನೆಲ್ಲ ಮಾಡಿದ್ದು ವರುಣ್. ಅವರಿಗೆ ನನ್ನ ಧನ್ಯವಾದಗಳು’ ಎಂದು ಅನುಶ್ರೀ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




