‘ಯಜಮಾನ’ ಮುಹೂರ್ತ ನಡೆದ ದೈವಿ ಸ್ಥಳದಲ್ಲೇ ಸೆಟ್ಟೇರಿತು ಅನಿರುದ್ಧ್​ ಹೊಸ ಸಿನಿಮಾ ‘ಶೆಫ್​ ಚಿದಂಬರ’

Chef Chidambara Kannada Movie: ಅನಿರುದ್ಧ್​ ನಟನೆಯ ‘ಶೆಫ್​ ಚಿದಂಬರ’ ಸಿನಿಮಾಗೆ ಎಂ. ಆನಂದರಾಜ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಗುರುವಾರ (ಆಗಸ್ಟ್​ 10) ಈ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಗಿದೆ. ಉಪೇಂದ್ರ, ಭಾರತಿ ವಿಷ್ಣುವರ್ಧನ್​ ಅವರು ಅತಿಥಿಗಳಾಗಿ ಬಂದು ಚಿತ್ರತಂಡಕ್ಕೆ ವಿಶ್​ ಮಾಡಿದ್ದಾರೆ.

‘ಯಜಮಾನ’ ಮುಹೂರ್ತ ನಡೆದ ದೈವಿ ಸ್ಥಳದಲ್ಲೇ ಸೆಟ್ಟೇರಿತು ಅನಿರುದ್ಧ್​ ಹೊಸ ಸಿನಿಮಾ ‘ಶೆಫ್​ ಚಿದಂಬರ’
‘ಶೆಫ್​ ಚಿದಂಬರ’ ಸಿನಿಮಾ ಮುಹೂರ್ತ ಸಮಾರಂಭ

Updated on: Aug 10, 2023 | 8:53 PM

ಕನ್ನಡ ಚಿತ್ರರಂಗಕ್ಕೆ ಡಾ. ವಿಷ್ಣುವರ್ಧನ್​ ಮತ್ತು ಅವರ ಕುಟುಂಬದವರು ನೀಡಿದ ಕೊಡುಗೆ ಅಪಾರ. 200 ಸಿನಿಮಾಗಳ ಮೂಲಕ ವಿಷ್ಣುವರ್ಧನ್​ ಅವರು ಅಭಿಮಾನಿಗಳನ್ನು ಭರಪೂರ ರಂಜಿಸಿದ್ದರು. ಅವರ ಅಳಿಯ ಅನಿರುದ್ಧ್​ ಜತ್ಕರ್​ (Aniruddha Jatkar) ಕೂಡ ತಮ್ಮದೇ ಆದ ರೀತಿಯ ಗುರುತಿಸಿಕೊಂಡಿದ್ದಾರೆ. ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಅವರು ಸೈ ಎನಿಸಿಕೊಂಡಿದ್ದಾರೆ. ಇಂದು (ಆಗಸ್ಟ್​ 10) ಅವರ ಹೊಸ ಸಿನಿಮಾ ಸೆಟ್ಟೇರಿದೆ. ‘ಶೆಫ್​ ಚಿದಂಬರ’ (Chef Chidambara) ಎಂಬುದು ಈ ಸಿನಿಮಾದ ಶೀರ್ಷಿಕೆ. ವಿಷ್ಣುವರ್ಧನ್​ ನಟನೆಯ ಸೂಪರ್​ ಹಿಟ್​ ‘ಯಜಮಾನ’ ಸಿನಿಮಾಗೆ ಮುಹೂರ್ತ ನಡೆದಿದ್ದ ರಾಮಾಂಜನೇಯ ದೇವಸ್ಥಾನದಲ್ಲೇ ‘ಶೆಫ್​ ಚಿದಂಬರ’ ಚಿತ್ರಕ್ಕೆ ಮುಹೂರ್ತ ನೆರವೇರಿದೆ ಎಂಬುದು ವಿಶೇಷ. ಭಾರತಿ ವಿಷ್ಣುವರ್ಧನ್​ (Bharathi Vishnuvardhan), ಉಪೇಂದ್ರ ಮುಂತಾದವರು ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಕಿರುತೆರೆ ಸೀರಿಯಲ್​ಗಳಲ್ಲಿ ಬ್ಯುಸಿ ಆಗಿದ್ದ ಅನಿರುದ್ಧ್​ ಅವರು ಒಂದಷ್ಟು ವರ್ಷಗಳ ಕಾಲ ಸಿನಿಮಾದಿಂದ ದೂರ ಉಳಿದುಕೊಂಡಿದ್ದರು. ಈಗ ‘ಶೆಫ್​ ಚಿದಂಬರ’ ಮೂಲಕ ಅವರು ಮತ್ತೆ ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಬೆಂಗಳೂರಿನ ಹನುಮಂತ ನಗರದ ರಾಮಾಂಜನೇಯ ದೇವಸ್ಥಾನದಲ್ಲಿ ಈ ಸಿನಿಮಾಗೆ ಮುಹೂರ್ತ ಮಾಡಲಾಗಿದೆ. ಚಿತ್ರದ ಮೊದಲ ದೃಶ್ಯಕ್ಕೆ ಉಪೇಂದ್ರ ಅವರು ಆರಂಭ ಫಲಕ ತೋರಿದರು. ಭಾರತಿ ವಿಷ್ಣುವರ್ಧನ್​ ಅವರು ಕ್ಯಾಮೆರಾ ಚಾಲನೆ ಮಾಡಿದರು. ‘ಈ ಜಾಗಕ್ಕೆ ಬಂದಾಗ ವಿಷ್ಣುವರ್ಧನ್​ ಅವರ ‘ಯಜಮಾನ’ ಸಿನಿಮಾ ಮುಹೂರ್ತ ಸಮಾರಂಭ ನೆನಪಾಯಿತು. ಆ ಸಿನಿಮಾದ ಮುಹೂರ್ತ ಸಹ ಇಲ್ಲಿಯೇ ನಡೆದಿತ್ತು. ಅದೇ ರೀತಿ ಶೆಫ್​ ಚಿದಂಬರ ಚಿತ್ರಕ್ಕೂ ಒಳ್ಳೆಯದಾಗಲಿ’ ಎಂದು ಭಾರತಿ ವಿಷ್ಣುವರ್ಧನ್ ಶುಭಕೋರಿದರು.

ರೂಪ ಡಿ.ಎನ್. ಅವರು ನಿರ್ಮಾಣ ಮಾಡುತ್ತಿರುವ ‘ಶೆಫ್​ ಚಿದಂಬರ’ ಸಿನಿಮಾಗೆ ಎಂ. ಆನಂದರಾಜ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಡಾರ್ಕ್ ಕಾಮಿಡಿ ಕಥಾಹಂದರ ಇರಲಿದೆ. ಅನಿರುದ್ಧ್​ ಅವರಿಗೆ ನಾಯಕಿಯರಾಗಿ ರೇಚಲ್ ಡೇವಿಡ್ ಮತ್ತು ನಿಧಿ ಸುಬ್ಬಯ್ಯ ಅವರು ಅಭಿನಯಿಸುತ್ತಿದ್ದಾರೆ. ಶರತ್ ಲೋಹಿತಾಶ್ವ, ಶಿವಮಣಿ, ರಘು ರಮಣಕೊಪ್ಪ, ಕೆ.ಎಸ್. ಶ್ರೀಧರ್ ಸೇರಿದಂತೆ ಹಲವು ಕಲಾವಿದರು ಈ ಚಿತ್ರದ ಪಾತ್ರವರ್ಗದಲ್ಲಿ ಇದ್ದಾರೆ.

ಹೇಗಿದೆ ನೋಡಿ ವಿಷ್ಣುವರ್ಧನ್​ ಹೊಸ ಮನೆ; ‘ವಲ್ಮೀಕ’ ಗೃಹ ಪ್ರವೇಶದಲ್ಲಿ ಅನಿರುದ್ಧ್​ ಕುಟುಂಬ

ಉದಯ್ ಲೀಲ ಅವರ ಛಾಯಾಗ್ರಹಣ, ರಿತ್ವಿಕ್ ಮುರಳಿಧರ್ ಅವರ ಸಂಗೀತ ನಿರ್ದೇಶನ, ವಿಜೇತ್ ಚಂದ್ರ ಅವರ ಸಂಕಲನದಲ್ಲಿ ‘ಶೆಫ್​ ಚಿದಂಬರ’ ಸಿನಿಮಾ ಮೂಡಿಬರಲಿದೆ. ಬಿ.ಆರ್. ನವೀನ್ ಕುಮಾರ್ ಅವರು ಸೌಂಡ್ ಡಿಸೈನ್ ಮಾಡುತ್ತಿದ್ದಾರೆ. ಈ ಸಿನಿಮಾದ ಕ್ಯಾರೆಕ್ಟರ್​ ಟೀಸರ್​ ಅನ್ನು ಉಪೇಂದ್ರ ಬಿಡುಗಡೆ ಮಾಡಿದ್ದಾರೆ. ಇತ್ತೀಚೆಗೆ ಕಿಚ್ಚ ಸುದೀಪ್​ ಅವರು ಈ ಸಿನಿಮಾದ ಪೋಸ್ಟರ್​ ಬಿಡುಗಡೆ ಮಾಡಿದ್ದರು. ಈ ಎಲ್ಲ ಕಾರಣಗಳಿಂದಾಗಿ ‘ಶೆಫ್​ ಚಿದಂಬರ’ ಸಿನಿಮಾ ಸುದ್ದಿಯಲ್ಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us