ಅವಿನಾಶ್-ಮಾಳವಿಕಾ ಜೀವನದಲ್ಲಿ ವಿಷ್ಣುವರ್ಧನ್ಗೆ ಏಕಷ್ಟು ಪ್ರಾಧಾನ್ಯತೆ? ದೇವರ ಕೋಣೆಯಲ್ಲಿ ವಿಷ್ಣು ಫೋಟೊ ಏಕೆ?
Weekend With Ramesh: ಅವಿನಾಶ್-ಮಾಳವಿಕಾ ಜೀವನದಲ್ಲಿ ವಿಷ್ಣುವರ್ಧನ್ಗೆ ಮಹತ್ವದ ಸ್ಥಾನ. ವಿಷ್ಣುವರ್ಧನ್ ಚಿತ್ರವನ್ನು ದೇವರ ಮನೆಯಲ್ಲಿ ಇಟ್ಟುಕೊಂಡಿದ್ದಾರೆ ಈ ದಂಪತಿ ಏಕೆ?
ವೀಕೆಂಡ್ ವಿತ್ ರಮೇಶ್ಗೆ (Weekend With Ramesh) ಈ ವಾರದ ಅತಿಥಿಯಾಗಿ ಆಗಮಿಸಿದ್ದ ಅವಿನಾಶ್ (Avinash) ತಮ್ಮ ಜೀವನದ ಹಲವು ವಿಷಯಗಳನ್ನು ಹಂಚಿಕೊಂಡರು. ವೃತ್ತಿಯಲ್ಲಿ, ಬದುಕಲ್ಲಿ ಸಹಾಯ ಮಾಡಿದ, ನೆರಳಾಗಿ ನಿಂತ ಹಲವರನ್ನು ಸ್ಮರಿಸಿದರು. ಶೋನಲ್ಲಿ ಅತಿ ಹೆಚ್ಚಾಗಿ ಮಾತು ಕೇಳಿಬಂದಿದ್ದು ವಿಷ್ಣುವರ್ಧನ್ ಅವರ ಬಗ್ಗೆ. ಅವಿನಾಶ್ ಹಾಗೂ ಮಾಳವಿಕಾ ಅವರ ಮನೆಯ ದೇವರ ಮನೆಯಲ್ಲಿ ವಿಷ್ಣುವರ್ಧನ್ (Vishnuvardhan) ಚಿತ್ರವನ್ನಿಟ್ಟು ಪೂಜಿಸಲಾಗುತ್ತದೆ. ಇದಕ್ಕೆ ಕಾರಣವೇನು? ಅವಿನಾಶ್ ಹಾಗೂ ಮಾಳವಿಕಾ ಜೀವನದಲ್ಲಿ ವಿಷ್ಣುವರ್ಧನ್ ಅವರಿಗೆ ಪ್ರಾಧಾನ್ಯತೆ ಏಕೆ?
ಅವಿನಾಶ್ ಜೀವನದಲ್ಲಿ ಮಾಳವಿಕಾ ಬರುವ ಮುಂಚೆಯೇ ವಿಷ್ಣುವರ್ಧನ್ ಪರಿಚಯ ಅವಿನಾಶ್ ಅವರಿಗಿತ್ತು. ಗೆಳೆಯನಂತೆ, ಅಣ್ಣನಂತೆ ಅವಿನಾಶ್ಗೆ ವಿಷ್ಣು ಅವರು ಸಲಹೆಗಳನ್ನು ನೀಡುತ್ತಿದ್ದರು. ಅವಿನಾಶ್ಗೆ ಮದುವೆ ಮಾಡಿಸಲು ಹೆಣ್ಣು ಹುಡುಕುವ ಕಾರ್ಯವನ್ನೂ ಅವಿನಾಶ್ ಮಾಡಿದ್ದರಂತೆ. ಆ ಬಳಿಕ ಅವಿನಾಶ್ ಅವರು ಸೈಟು ಖರೀದಿಸಿ ಮನೆ ಕಟ್ಟಬೇಕೆಂದು ವಿಷ್ಣು ಅವರಿಂದಲೇ ಗುದ್ದಲಿ ಪೂಜೆ ಸಹ ಮಾಡಿಸಿದ್ದರಂತೆ. ಆದರೆ ಬಹಳ ಸಮಯ ಮನೆ ಕಟ್ಟಲು ಆಗಿರಲಿಲ್ಲ. ಆಗ ಸಿಕ್ಕಾಗೆಲ್ಲ ವಿಷ್ಣು ಅವರು ಬೈಯುತ್ತಿದ್ದರಂತೆ.
ವಿಷ್ಣುವರ್ಧನ್ ಅವರಿಗೆ ಮಾಯಾಮೃಗ ಧಾರಾವಾಹಿ ಬಹಳ ಇಷ್ಟವಾದ ಧಾರಾವಾಹಿಯಾಗಿತ್ತು. ವೀಕೆಂಡ್ ವಿತ್ ರಮೇಶ್ನಲ್ಲಿ ಮಾಳವಿಕಾ ಅವರು ಹೇಳಿದಂತೆ, ”ಆಗಷ್ಟೆ ವಿಷ್ಣುವರ್ಧನ್ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ಬಹಳ ದುಃಖದಲ್ಲಿದ್ದ ಅವರು ಮನೆಯಲ್ಲಿಯೇ ಬಹು ಸಮಯ ಕಳೆಯುತ್ತಿದ್ದರು. ಟಿವಿ ನೋಡುತ್ತಾ ಕಾಲ ಕಳೆಯುತ್ತಿದ್ದರು. ಆಗ ಮಾಯಾಮೃಗವನ್ನು ತಪ್ಪದೇ ನೋಡಿ ಖುಷಿ ಪಡುತ್ತಿದ್ದರು. ಆ ನಂತರ ನಾನೂ ಅವಿನಾಶ್ ಮದುವೆಯಾಗುತ್ತಿರುವ ಸುದ್ದಿ ಪತ್ರಿಕೆಯಲ್ಲಿ ಓದಿ ನಮ್ಮನ್ನು ಕರೆಸಿದರು. ಮನೆಗೆ ಹೋದಾಗ ಅವಿನಾಶ್ಗೆ ಚೆನ್ನಾಗಿ ಬೈದು ಈ ಹುಡುಗಿಯನ್ನು ಮದುವೆಯಾಗಬೇಕಿದೆ ಎಂದು ಮೊದಲೇ ಏಕೆ ಹೇಳಲಿಲ್ಲ ಎಂದಿದ್ದರು ಎಂದು ನೆನಪು ಮಾಡಿಕೊಂಡರು.
ಮಾಳವಿಕಾ ಎಂದರೆ ವಿಷ್ಣುವರ್ಧನ್ಗೆ ಬಹಳ ಪ್ರೀತಿ. ಆಕೆಯನ್ನು ಬಹಳ ಹಚ್ಚಿಕೊಂಡಿದ್ದರು. ಮಾಳವಿಕಾ ಅವರನ್ನು ಯಾರಾದರೂ ಬೈದರೆ ಗದರುತ್ತಿದ್ದರು ಎಂದು ಅವಿನಾಶ್ ನೆನಪು ಮಾಡಿಕೊಂಡರೆ, ”ವಿಷ್ಣುವರ್ಧನ್ ಅವರಿಗೆ ಪಾಪಚ್ಚಿ ಎಂಬ ತಂಗಿ ಇದ್ದರು ಅವರು ತೀರಿಕೊಂಡಿದ್ದರು. ನನ್ನನ್ನು ಕಂಡಾಗ ಹಲವು ಬಾರಿ ನೀನು ನನ್ನ ಪಾಪಚ್ಚಿಯಂತೆ ಎಂದು ಹೇಳುತ್ತಿದ್ದರು. ನಮ್ಮನ್ನು ಬಹಳ ಹಚ್ಚಿಕೊಂಡಿದ್ದರು. ಕೆಲವು ದಿನಗಳಿಗೊಮ್ಮೆಯಾದರೂ ನಮ್ಮ ಬಳಿ ಮಾತನಾಡಿ, ಕುಶಲ ವಿಚಾರಿಸುತ್ತಿದ್ದರು. ಅವರು ನನಗೆ ತಂದೆಯಂತೆಯೇ ಇದ್ದರು. ಕಲಾವಿದರಿಗೆ ಆ ರೀತಿಯ ಮಾರೆಲ್, ಎಮೋಷನಲ್ ಬೆಂಬಲ ಬೇಕಾಗುತ್ತದೆ ಅಂಥಹಾ ಬೆಂಬಲ ಕೊಟ್ಟವರು ವಿಷ್ಣುವರ್ಧನ್, ಈಗಲೂ ನನಗೆ ತೊಂದರೆ ಆದರೆ ಎಲ್ಲಾದರೂ ಸೋಲಾದರೆ, ವಿಷ್ಣುವರ್ಧನ್ ಇದ್ದಿದ್ದರೆ ಹೀಗಾಗಿರುತ್ತಿರಲಿಲ್ಲ ಎಂದು ಎನಿಸುತ್ತದೆ ಎಂದು ಭಾವುಕರಾಗಿ ನುಡಿದರು ಮಾಳವಿಕಾ.
ವಿಷ್ಣುವರ್ಧನ್ ಅಭಿಮಾನಿಗಳ ಬಗ್ಗೆ ಸ್ವಾರಸ್ಯಕರ ಘಟನೆಯೊಂದನ್ನು ನೆನಪು ಮಾಡಿಕೊಂಡ ಅವಿನಾಶ್, ”ಹಿಂದೆ ನಾನು, ವಿಷ್ಣುವರ್ಧನ್ ಅವರು ಒಟ್ಟಿಗೆ ಮಾಡಿದ್ದ ಸಿನಿಮಾದ ಕ್ಲೈಮ್ಯಾಕ್ಸ್ ಒಂದರಲ್ಲಿ ನಾನು ವಿಷ್ಣುವರ್ಧನ್ ಅವರ ಕಪಾಳಕ್ಕೆ ಹೊಡೆಯುವ ದೃಶ್ಯವಿತ್ತು. ಆ ಸಿನಿಮಾ ಬಿಡುಗಡೆ ಆದ ಮೇಲೆ ನಾನು ಒಮ್ಮೆ ಮಾರ್ಕೆಟ್ಗೆ ಹೋಗಿ ಏನೋ ತಗೋತಿದ್ದೆ. ವಿಷ್ಣುವರ್ಧನ್ಗೆ ಹೇಗೆ ಹೊಡೆದೆ ನೀನು ಎಂದು ಅವರ ಅಭಿಮಾನಿಗಳು ನನ್ನನ್ನು ಓಡಿಸಿಕೊಂಡು ಬಂದಿದ್ದರು. ನಾನು ನನ್ನ ಲೂನಾ ತೆಗೆದುಕೊಂಡು ಓಡಿಹೋಗಿ ಪಾರಾಗಿದ್ದೆ” ಎಂದರು ಅವಿನಾಶ್.
ಅವಿನಾಶ್ ಮಾತು ಮುಂದುವರೆಸಿ, ”2001 ಕ್ಕೆ ನಮ್ಮ ಮದುವೆಯಾಯಿತು, ಒಂಬತ್ತು ವರ್ಷ ನಮ್ಮೊಟ್ಟಿಗೆ ಒಡನಾಟ ಇಟ್ಟುಕೊಂಡಿದ್ದರು. ಪಾರ್ಟಿಗೆ ಕರೆದಾಗ ನಾವು ಹೋಗಲೇ ಬೇಕಿತ್ತು. ಎಷ್ಟು ಸಮಯವಾದರೂ ಮನೆಗೆ ಕಳಿಸುತ್ತಿರಲಿಲ್ಲ. ಬರೋದು ನಿಮ್ಮಿಚ್ಚೆ, ಕಳಿಸೋದು ನನ್ನಿಚ್ಚೆ ಎನ್ನುತ್ತಿದ್ದರು ಎಂದು ನೆನಪು ಮಾಡಿಕೊಂಡರು, ”ನಾನು ಕೊನೆಗೂ ಮನೆ ಕಟ್ಟಿಸಿದ ಮೇಲೆ ಒಂದು ಪಾರ್ಟಿಗೆ ಅವರನ್ನು ಕರೆದೆ ಆರಂಭದಲ್ಲಿ ಅವರು ಬರಲು ಆಗಲ್ಲ ಆರೋಗ್ಯ ಸರಿಯಿಲ್ಲ ಎಂದರು ಆದರೂ ಬಂದರು ನಮ್ಮೊಟ್ಟಿಗೆ ಇದ್ದರು. ಆದರೆ ಅದಾದ ಮೇಲೆ ಹೆಚ್ಚು ಕಾಲ ಅವರು ಇರಲಿಲ್ಲ. ಅವರು ಹೋದ ಬಳಿಕ ನಾವು ನ್ಯೂ ಯಿಯರ್ ಪಾರ್ಟಿಗಳಿಗೆ ಹೋಗುವುದನ್ನೇ ಬಿಟ್ಟುಬಿಟ್ಟಿದ್ದೇವೆ ಎಂದರು.
ವಿಷ್ಣುವರ್ಧನ್ ಅವರು ನಮ್ಮ ಹೃದಯದಲ್ಲಿ ನೆಲೆಸಿದ್ದಾರೆ. ಹೃದಯದಲ್ಲಿ ನೆಲೆಸಿರುವವರನ್ನು ದೇವರ ಮನೆಯಲ್ಲಿ ಕೂರಿಸುವುದು ಕಷ್ಟವೇನೂ ಆಗಲಿಲ್ಲ. ಅವರು ನಮ್ಮ ದೇವರ ಮನೆಯಲ್ಲಿದ್ದಾರೆ. ಅವರಿಗೆ ನಿತ್ಯ ಪೂಜೆ ಆಗುತ್ತದೆ ಎಂದರು ಮಾಳವಿಕಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ