ವಿಷ್ಣುವರ್ಧನ್ ಸ್ಮಾರಕ ನೆಲಸಮ: ಕುಟುಂಬದ ಮೇಲಿನ ಆರೋಪಕ್ಕೆ ಅನಿರುದ್ಧ್ ಸ್ಪಷ್ಟನೆ
Vishnuvardhan Grave controversy: ವಿಷ್ಣುವರ್ಧನ್ ಸಮಾಧಿ ನೆಲಸಮ ಘಟನೆಗೆ ಸಂಬಂಧಿಸಿದಂತೆ ವಿಷ್ಣು ಕುಟುಂಬದ ಮೇಲೆ ಕೆಲವರು ಆರೋಪ ಹೊರಿಸಿದ್ದು ಇದೀಗ ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ್ ಅವರು ಈ ಸಂಬಂಧ ಅಭಿಮಾನಿಗಳ ಸಭೆ ಕರೆದು ಮಾತನಾಡಿದ್ದಾರೆ. ವಿಷ್ಣುವರ್ಧನ್ ಸಮಾಧಿ ಸ್ಥಳದ ಇತಿಹಾಸ ಹೇಳಿದ್ದಾರೆ. ಜೊತೆಗೆ ತಮ್ಮ ಮೇಲೆ ಬಂದಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಅಭಿಮಾನ್ ಸ್ಟುಡಿಯೋನಲ್ಲಿದ್ದ ವಿಷ್ಣುವರ್ಧನ್ ಸ್ಮಾರಕವನ್ನು ಬಾಲಣ್ಣ ಕುಟುಂಬದವರು ನೆಲಸಮ ಮಾಡಿದ್ದಾರೆ. ಘಟನೆ ಖಂಡಿಸಿ ವಿಷ್ಣು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ವಿಷ್ಣುವರ್ಧನ್ ಕುಟುಂಬದವರನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ. ಕೆಲವರಂತೂ ನೇರವಾಗಿ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ವಿರುದ್ಧ ಆರೋಪ ಮಾಡಿದ್ದರು. ವಿಷ್ಣು ಕುಟುಂಬದವರು ಹಣ ಪಡೆದು ಸ್ಮಾರಕ ನೆಲಸಮಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದಿದ್ದರು. ಇದೀಗ ನಟ ಅನಿರುದ್ಧ್ ಎಲ್ಲ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಇಂದು (ಆಗಸ್ಟ್ 17) ವಿಷ್ಣುವರ್ಧನ್ ಅವರ ನಿವಾಸದಲ್ಲಿ ನಟ ಅನಿರುದ್ಧ್ ಅವರು ವಿಷ್ಣುವರ್ಧನ್ ಅಭಿಮಾನಿಗಳ ಸಭೆ ಕರೆದಿದ್ದು, ಸಭೆಯಲ್ಲಿ ಮೊದಲಿಗೆ ಎರಡು ವಿಡಿಯೋಗಳನ್ನು ತೋರಿಸಿದರು. ಎರಡೂ ವಿಡಿಯೋನಲ್ಲಿ ಅನಿರುದ್ಧ್ ಅವರು ಅಭಿಮಾನ್ ಸ್ಟುಡಿಯೋನಲ್ಲಿ ವಿಷ್ಣುವರ್ಧನ ಸ್ಮಾರಕ ನಿರ್ಮಾಣಕ್ಕೆ ಬೆಂಬಲ ವ್ಯಕ್ತಪಡಿಸುವುದಾಗಿಯೇ ಹೇಳಿದ್ದರು. ಆದರೆ ಅಭಿಮಾನ್ ಸ್ಟುಡಿಯೋನಲ್ಲಿ ಸ್ಮಾರಕ ನಿರ್ಮಾಣಕ್ಕೆ ಕಾನೂನು ತೊಡಕು ಇರುವ ಬಗ್ಗೆ ಉಲ್ಲೇಖವನ್ನು ವಿಡಿಯೋನಲ್ಲಿ ಮಾಡಿದ್ದರು.
ಇದೀಗ ತಮ್ಮ ಹಾಗೂ ಕುಟುಂಬದ ಮೇಲೆ ಬಂದಿರುವ ಆರೋಪದ ಬಗ್ಗೆ ಮೊದಲು ಮಾತನಾಡಿದ ಅನಿರುದ್ಧ್, ‘ನಾನು ಹಣ ಪಡೆದು ಸ್ಮಾರಕ ಒಡೆಸಿದ್ದೀನಿ ಎಂದಿದ್ದಾರೆ. ಸ್ಮಾರಕ ಒಡೆದಿದ್ದಕ್ಕೆ ಕುಟುಂಬದವರಿಗೆ ಸಂತೋಷ ಆಗಿದೆ ಎಂದಿದ್ದಾರೆ. ಆದರೆ ಹಾಗೆ ಆಗಲು ಸಾಧ್ಯವಾ? ಯಾರಾದರೂ ಹಣ ಪಡೆದುಕೊಂಡು ತಂದೆಯ ಸ್ಮಾರಕ ಒಡೆಸುತ್ತಾರಾ? ಈ ರೀತಿಯ ಆರೋಪ ಮಾಡುವವರಿಗೆ ಎಂಥಹಾ ವಿಕೃತವಾದ ಮನಸ್ಸು ಇರಬಹುದು? ಎಂದು ಭಾವುಕರಾದರು ಅನಿರುದ್ಧ್.
ಆ ಬಳಿಕ ಆ ಸ್ಥಳದ ಇತಿಹಾಸ ಹೇಳಿದ ಅನಿರುದ್ಧ್, ‘ವಿಷ್ಣುವರ್ಧನ್ ಅವರನ್ನು ಚಾಮರಾಜಪೇಟೆಯಲ್ಲಿ ಸಂಸ್ಕಾರ ಮಾಡೋಕೆ ಯೋಜನೆ ಮಾಡಿದ್ದೆವು. ಆದರೆ ನಂತರದಲ್ಲಿ ಸರ್ಕಾರ ಹಾಗೂ ಅಂಬರೀಶ್ ಅವರ ಒತ್ತಾಯದಂತೆ ಅಭಿಮಾನ್ ಸ್ಟುಡಿಯೋನಲ್ಲಿ ಸಂಸ್ಕಾರ ಮಾಡಿದೆವು. ಆದರೆ ಆ ಅವಸರದಲ್ಲಿ ಅದು ವಿವಾದಿತ ಜಾಗ ಅನ್ನೋದು ಅವರುಗಳಿಗೆ ಗೊತ್ತಾಗಲಿಲ್ಲ ಅನಿಸುತ್ತದೆ. ಬಹಳ ವರ್ಷಗಳ ಹಿಂದೆ 20 ಎಕರೆ ಜಾಗವನ್ನು ಸರ್ಕಾರ ಬಾಲಣ್ಣ ಅವರಿಗೆ ಕೊಟ್ಟಿತ್ತು. ಅದರಲ್ಲಿ 10 ಎಕರೆ ಜಾಗವನ್ನು ಅವರು ಮಾರಿಕೊಂಡಿದ್ದರು. ಉಳಿದ 10 ಎಕರೆ ಜಾಗದಲ್ಲಿ ಸ್ಟುಡಿಯೋ ಮಾಡ್ತೀವಿ ಅಂತಾ ಒಪ್ಪಿಕೊಂಡಿದ್ದರು, ಅಕಸ್ಮಾತ್ ಸ್ಟುಡಿಯೋ ನಿರ್ಮಾಣ ಮಾಡಲಿಲ್ಲ ಅಂದರೆ ಸರ್ಕಾರ ಜಾಗ ಮುಟ್ಟುಗೋಲು ಹಾಕಿಕೊಳ್ತೀವಿ ಅಂತಾ ಉಲ್ಲೇಖ ಮಾಡಿದೆ. ಆದರೆ ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದಿದ್ದಾರೆ ಅನಿರುದ್ಧ್.
ಇದನ್ನೂ ಓದಿ:ಪುಣ್ಯಭೂಮಿಗೆ ಅದೇ ಜಾಗ ಬೇಕು: ಪಟ್ಟು ಹಿಡಿದ ವಿಷ್ಣುವರ್ಧನ್ ಅಭಿಮಾನಿಗಳು
‘ನಾವು ಸ್ಮಾರಕ ಮಾಡ್ಬೇಕು ಅಂದರೆ, 2 ಎಕರೆ ಜಾಗಬೇಕು, ಆದರೆ ಜಾಗದ ಗಲಾಟೆ ಇತ್ಯರ್ಥ ಆಗಲಿಲ್ಲ. ಗೀತಾ ಬಾಲಿ ಅವರನ್ನು ಸಾಕಷ್ಟು ಬಾರಿ ಕೇಳಿಕೊಂಡ್ವಿ, ಅವರು ಜಾಗದ ಸಮಸ್ಯೆ ಇತ್ಯರ್ಥ ಮಾಡಬೇಕಾದರೆ, ಅವರು ಜಾಗದ ಮೇಲೆ ಹಾಕಿದ್ದ ಕೇಸು ಹಿಂಪಡೆಯಬೇಕಿತ್ತು, ಅಕಸ್ಮಾತ್ ಕೇಸು ಹಿಂಪಡೆದರೆ ಅವರ ಸಹೋದರರು ಜಾಗ ಕಿತ್ತುಕೊಳ್ತಾರೆ ಅನ್ನೋ ಭಯ ಅವರಿಗೆ ಇತ್ತು. ಹಾಗಾಗಿ ಅವರು ಕೇಸು ಹಿಂಪಡೆಯಲಿಲ್ಲ’ ಎಂದಿದ್ದಾರೆ ಅನಿರುದ್ಧ್.
ಅಭಿಮಾನ್ ಸ್ಟುಡಿಯೋದಲ್ಲಿನ ಘಟನೆ ಖಂಡನೀಯ, ದೇವಸ್ಥಾನಕ್ಕೆ ಕಳಶ ಏರಿಸಬೇಕಾದ್ರೆ ಅದರ ಅಡಿಪಾಯ ಮೊದಲು ಕಟ್ಟಬೇಕಾಗುತ್ತೆ. ಇತಿಹಾಸ ಗೊತ್ತಿಲ್ಲದೆ ಕೆಲವರು ನಮ್ಮ ಮೇಲೆ, ನಮ್ಮ ಕುಟುಂಬದ ಮೇಲೆ ಆರೋಪ ಮಾಡುತ್ತಿದ್ದಾರೆ. ಗೊಂದಲ ಹುಟ್ಟುಹಾಕುತ್ತಿದ್ದಾರೆ. ಇದು ನಾನು ಮೊದಲ ಬಾರಿಗೆ ಕರೆದಿರುವ ಸಭೆ ಅಲ್ಲ, ಹಲವು ಬಾರಿ ಅಭಿಮಾನಿಗಳ ಸಭೆ ಕರೆದು ಈ ಬಗ್ಗೆ ಮಾತನಾಡಿದ್ದೇನೆ. ಜಾಗದ ಸಮಸ್ಯೆ ಬಗ್ಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ಧೇನೆ. ಅದು ವಿವಾದಾತ್ಮಕ ಜಾಗ ಅದನ್ನು ಏನೂ ಮಾಡೋಕೆ ಆಗಲ್ಲ ಎಂದು ಹಿಂದೆಯೂ ಹೇಳಿದ್ದೆ. ಆಗ ಎಲ್ಲರೂ ಒಪ್ಪಿದ್ದರು. ಆದರೆ ಈಗ ಆರೋಪ ಮಾಡುತ್ತಿದ್ದಾರೆ’ ಎಂದಿದ್ದಾರೆ ಅನಿರುದ್ಧ್.
ಈಗ ಕೆಲವರೆಲ್ಲ ತಾವೇ ಆ ಜಾಗವನ್ನು ಖರೀದಿ ಮಾಡುವುದಾಗಿ ಹೇಳುತ್ತಿರುವ ಬಗ್ಗೆ ವ್ಯಂಗ್ಯ ಮಾಡಿರುವ ಅನಿರುದ್ಧ್, ‘ಆಗೆಲ್ಲ ಭಾರತಿ ಅಮ್ಮನವರು ಕಣ್ಣೀರು ಹಾಕಿ ಗೋಗರೆದಾಗಲೂ ಸಹ ಯಾರೊಬ್ಬರೂ ಬರಲಿಲ್ಲ ಆದರೆ ಈಗ ನಾವು ಖರೀದಿ ಮಾಡಿ ಕೊಡುತ್ತೇವೆ ಎನ್ನುತ್ತಿದ್ದಾರೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




