ಅಪರ್ಣಾ ಫ್ಯಾನ್ಸ್ಗೆ ಗುಡ್ ನ್ಯೂಸ್; ಶೀಘ್ರವೇ ಬರಲಿದೆ ಅವರ ನಟನೆಯ ‘ಗ್ರಾಮಾಯಣ’ ಸಿನಿಮಾ
ಅಪರ್ಣಾ ಅವರ ಕೊನೆಯ ಸಿನಿಮಾ ಯಾವುದು ಎನ್ನುವ ಪ್ರಶ್ನೆ ಇತ್ತು. ಅದಕ್ಕೆ ಉತ್ತರ ಸಿಕ್ಕಿದೆ. ‘ಗ್ರಾಮಾಯಣ’ ಅವರ ನಟನೆಯ ಕೊನೆಯ ಸಿನಿಮಾ ಆಗಲಿದೆ. ಈಗಾಗಲೇ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ. ಈ ಬಗ್ಗೆ ನಿರ್ದೇಶಕ ಚಂದ್ರು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಪ್ರಮುಖ ಅಪ್ಡೇಟ್ ನೀಡಿದ್ದಾರೆ.
ನಟಿ, ನಿರೂಪಕಿ ಅಪರ್ಣಾ ಅವರು ಇತ್ತೀಚೆಗೆ ನಿಧನ ಹೊಂದಿದರು. ಅವರು ಕೆಲವು ವರ್ಷಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಅವರು ನಿಧನ ಹೊಂದಿದ್ದು ಅನೇಕರಿಗೆ ಶಾಕಿಂಗ್ ಎನಿಸಿದೆ. ಅಪರ್ಣಾ ಅವರು ಚಿತ್ರರಂಗದ ಜೊತೆ ಒಳ್ಳೆಯ ನಂಟು ಹೊಂದಿದ್ದರು. ವಿಶೇಷ ಎಂದರೆ ಅವರು ‘ಗ್ರಾಮಾಯಣ’ ಸಿನಿಮಾದಲ್ಲಿ ನಟಿಸಿದ್ದಾರೆ. ವಿನಯ್ ರಾಜ್ಕುಮಾರ್ ಅವರ ತಾಯಿ ಪಾತ್ರದಲ್ಲಿ ಅಪರ್ಣಾ ಕಾಣಿಸಿಕೊಂಡಿದ್ದಾರೆ. ಇದು ಅವರು ಬಣ್ಣ ಹಚ್ಚಿದ ಕೊನೆಯ ಸಿನಿಮಾ. ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿಲ್ಲ ಎನ್ನುವ ಮಾತಿತ್ತು. ಇದಕ್ಕೆ ಸ್ಪಷ್ಟನೆ ಸಿಕ್ಕಿದೆ. ಈ ಚಿತ್ರದ ನಿರ್ದೇಶಕ ದೇವನೂರು ಚಂದ್ರು ಅವರು ‘ಟಿವಿ9 ಕನ್ನಡ ಡಿಜಿಟಲ್’ ಜೊತೆ ಮಾತನಾಡಿದ್ದಾರೆ.
‘ಅಪರ್ಣಾ ಅವರ ಪಾತ್ರದ ಶೂಟಿಂಗ್ ಪೂರ್ಣಗೊಂಡಿದೆ. ಆದರೆ, ಡಬ್ಬಿಂಗ್ ಆಗಿಲ್ಲ. ಶೂಟ್ ಮಾಡಿದ ದೃಶ್ಯಗಳಲ್ಲಿ ಅವರ ಧ್ವನಿ ಸ್ಪಷ್ಟವಾಗಿ ರೆಕಾರ್ಡ್ ಆಗಿದೆ. ಈಗಿನ ತಂತ್ರಜ್ಞಾನ ಬಳಸಿ ಅದನ್ನೇ ಬಳಕೆ ಮಾಡಲು ನಿರ್ಧರಿಸಿದ್ದೇವೆ. ಪಾತ್ರದ ಬಗ್ಗೆ ಹೆಚ್ಚಿನದ್ದು ರಿವೀಲ್ ಮಾಡೋಕೆ ಆಗಲ್ಲ. ಅವರು ವಿನಯ್ ರಾಜ್ಕುಮಾರ್ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಮಾತ್ರ ಹೇಳಬಹುದು. ಅವರು ಈ ಸಿನಿಮಾದಲ್ಲಿ ದೇವನೂರು ಭಾಷೆ ಮಾತನಾಡಿದ್ದಾರೆ’ ಎನ್ನುತ್ತಾರೆ ಚಂದ್ರು.
ಅಪರ್ಣಾಗೆ ನಟಿಸಬೇಕು ಎನ್ನುವ ಆಸೆ ಇತ್ತು. ಆದರೆ, ಯಾವುದೂ ಒಳ್ಳೆಯ ಕಥೆ ಬಂದಿರಲಿಲ್ಲ. ಆದರೆ, ‘ಗ್ರಾಮಾಯಣ’ ಅವರಿಗೆ ಸಾಕಷ್ಟು ಇಷ್ಟ ಆಗಿತ್ತು. ‘ಅಪರ್ಣಾ ಅವರು ಇದೇ ಪಾತ್ರ ಮಾಡಬೇಕು ಎಂದು ನಾನು ಬಯಸಿದ್ದೆ. ನಾನು ಹೋಗಿ ಪಾತ್ರದ ಬಗ್ಗೆ ಹೇಳಿದೆ. ಅವರಿಗೆ ಇಷ್ಟ ಆಯಿತು. ಆ ಬಳಿಕ ಕಥೆ ಹೇಳಿದೆ. ಅವರು ಮತ್ತಷ್ಟು ಇಷ್ಟಪಟ್ಟರು. ಸಂಪೂರ್ಣ ಸ್ಕ್ರಿಪ್ಟ್ ಪಡೆದು ಅವರು ಓದಿದರು. ಅವರು ತುಂಬಾನೇ ತೊಡಗಿಸಿಕೊಂಡರು’ ಎಂದಿದ್ದಾರೆ ಅವರು.
ಇದನ್ನೂ ಓದಿ: ನನ್ನ ಈ ಮುಖ ಯಾರಿಗೂ ತಿಳಿಯುವುದು ಬೇಡ ಎಂದಿದ್ದರು ಅಪರ್ಣಾ
‘ಒಳ್ಳೆಯ ಜೀವ ಅವರದ್ದು. ಇದನ್ನು ಒಂದು ಮಾತಲ್ಲಿ ಹೇಳೋಕೆ ಆಗಲ್ಲ. ಅವರು ಇಲ್ಲ ಎಂಬುದನ್ನು ಇವತ್ತೂ ನಂಬೋಕೆ ಆಗಲ್ಲ. ಶೂಟಿಂಗ್ ಮುಗಿದಿಲ್ಲ ಎನ್ನುವ ಸುದ್ದಿ ಅನೇಕ ಕಡೆಗಳಲ್ಲಿ ಇದೆ. ಆದರೆ, ಅದು ಸುಳ್ಳು. ಅವರದ್ದೇ ಧ್ವನಿ ಉಳಿಸಿಕೊಳ್ಳುವ ಸವಾಲೊಂದು ನಮ್ಮ ಮುಂದಿದೆ’ ಎನ್ನುತ್ತಾರೆ ಚಂದ್ರು. ಈ ಮೊದಲು ‘ಗ್ರಾಮಾಯಣ’ ಸಿನಿಮಾ ಅರ್ಧಕ್ಕೆ ನಿಂತಿತ್ತು. ಆಗ ಅಪರ್ಣಾ ಅವರು ಚಂದ್ರು ಬೆಂಬಲಕ್ಕೆ ನಿಂತಿದ್ದರಂತೆ. ಮಾರಲ್ ಸಪೋರ್ಟ್ನ ಅವರು ನೀಡಿದ್ದರು. ಸಣ್ಣ ಪುಟ್ಟ ಶೂಟ್ಗಳು ಬಾಕಿ ಉಳಿದಿದೆ. ಅದನ್ನು ಮುಗಿಸಿ ಶೀಘ್ರವೇ ತೆರೆಮೇಲೆ ಬರೋ ಆಲೋಚನೆ ಅವರಿಗೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:07 pm, Tue, 16 July 24