
ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರ 50ನೇ ವರ್ಷದ ಹುಟ್ಟುಹಬ್ಬ ಸಮೀಪಿಸುತ್ತಿದೆ. ಮಾರ್ಚ್ 17ರಂದು ಅವರ ಜನ್ಮದಿನ ಆಚರಿಸಲಾಗುತ್ತದೆ. ಆ ಪ್ರಯುಕ್ತ ಇಂದು (ಮಾರ್ಚ್ 14) ಸೂಪರ್ ಹಿಟ್ ಅಪ್ಪು ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗಿದೆ. ವಿಶೇಷ ಏನೆಂದರೆ, ಇಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬ ಕೂಡ ಹೌದು. ಹಾಗಾಗಿ ಅಭಿಮಾನಿಗಳ ಸಂಭ್ರಮ ಡಬಲ್ ಆಗಿದೆ. ರಾಜ್ಯದ ಹಲವಾರು ಚಿತ್ರಮಂದಿರಗಳಲ್ಲಿ ‘ಅಪ್ಪು’ ಸಿನಿಮಾ (Appu Movie) ರೀ-ರಿಲೀಸ್ ಮಾಡಲಾಗಿದೆ. ಗುರುವಾರ (ಮಾ.13) ರಾತ್ರಿಯಿಂದಲೇ ಅಭಿಮಾನಿಗಳ ಸಂಭ್ರಮ ಜೋರಾಗಿದೆ.
ಬೆಂಗಳೂರಿನ ‘ವಿರೇಶ್’ ಸೇರಿದಂತೆ ಹಲವು ಥಿಯೇಟರ್ಗಳಲ್ಲಿ ಬೆಳಗ್ಗೆ 6 ಘಂಟೆಯಿಂದ ‘ಅಪ್ಪು’ ಸಿನಿನಮಾದ ಶೋ ಆರಂಭ ಆಗಿದೆ. ರಕ್ಷಿತಾ ಪ್ರೇಮ್, ರಮ್ಯಾ ದಿವ್ಯ ಸ್ಪಂದನಾ ಸೇರಿದಂತೆ ಹಲವು ಕಲಾವಿದರು ಚಿತ್ರಮಂದಿರಕ್ಕೆ ಆಗಮಿಸುವ ಸಾಧ್ಯತೆ ಇದೆ. ಚಿತ್ರಮಂದಿರಗಳ ಎದುರು ಅಪ್ಪು ಕಟೌಟ್ ರಾರಾಜಿಸುತ್ತಿವೆ. ಅವರ ಅಭಿಮಾನಿಗಳು ಹಬ್ಬದ ರೀತಿ ಸಂಭ್ರಮಿಸುತ್ತಿದ್ದಾರೆ.
‘ಅಪ್ಪು’ ಸಿನಿಮಾ ಬಿಡುಗಡೆ ಆಗಿ 23 ವರ್ಷಗಳು ಕಡೆದಿವೆ. ಹಾಗಿದ್ದರೂ ಕೂಡ ಆ ಸಿನಿಮಾದ ಕ್ರೇಜ್ ಕಡಿಮೆ ಆಗಿಲ್ಲ. ಮೊದಲು ಬಾಲನಟನಾಗಿ ಅಭಿಮಾನಿಗಳ ಮನ ಗೆದ್ದಿದ್ದ ಪುನೀತ್ ರಾಜ್ಕುಮಾರ್ ಅವರು ಹೀರೋ ಆಗಿ ಬಣ್ಣ ಹಚ್ಚಿದ ಮೊದಲ ಸಿನಿಮಾ ‘ಅಪ್ಪು’. ಆ ಕಾರಣದಿಂದ ಅಭಿಮಾನಿಗಳಿಗೆ ಈ ಸಿನಿಮಾ ಬಗ್ಗೆ ಹೆಚ್ಚಿನ ಒಲವು. ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದರು.
2002ರಲ್ಲಿ ‘ಅಪ್ಪು’ ಸಿನಿಮಾ ತೆರೆಕಂಡಿತ್ತು. ಮೊದಲ ಸಿನಿಮಾದಲ್ಲೇ ಪುನೀತ್ ರಾಜ್ಕುಮಾರ್ ಅವರು ಗೆಲುವು ಕಂಡಿದ್ದರು. ಆ ಸಿನಿಮಾ ಯಶಸ್ವಿಯಾಗಿ 100 ದಿನಗಳ ಪ್ರದರ್ಶನ ಕಂಡಿತ್ತು. ಶತದಿನೋತ್ಸವಕ್ಕೆ ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅವರು ಆಗಮಿಸಿದ್ದರು. ಡಾ. ರಾಜ್ಕುಮಾರ್, ಪಾರ್ವತಮ್ಮ ರಾಜ್ಕುಮಾರ್, ರಮೇಶ್ ಅರವಿಂದ್, ರಾಘವೇಂದ್ರ ರಾಜ್ಕುಮಾರ್, ಶಿವರಾಜ್ಕುಮಾರ್ ಸೇರಿದಂತೆ ಹಲವರು ಅಂದು ಸಿನಿಮಾದ ಯಶಸ್ಸನ್ನು ಸಂಭ್ರಮಿಸಿದ್ದರು.
ಇದನ್ನೂ ಓದಿ: ಅಪ್ಪು ಸಿನಿಮಾ ಮರು ಬಿಡುಗಡೆ; ಖುಷಿಯಿಂದ ಮಾತಾಡಿದ ಉಪೇಂದ್ರ
‘ಅಪ್ಪು’ ಚಿತ್ರದಲ್ಲಿ ರಕ್ಷಿತಾ ಅವರು ನಾಯಕಿಯಾಗಿ ನಟಿಸಿದ್ದರು. ಅದು ಅವರ ಮೊದಲ ಸಿನಿಮಾ. ಈಗ ಆ ಚಿತ್ರ ರೀ-ರಿಲೀಸ್ ಆಗಿರುವುದಕ್ಕೆ ರಕ್ಷಿತಾ ಕೂಡ ತುಂಬಾ ಖುಷಿಪಟ್ಟಿದ್ದಾರೆ. ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನಿರ್ದೇಶನವಿದೆ. ಅವಿನಾಶ್, ಸುಮಿತ್ರಾ, ಶ್ರೀನಿವಾಸ್ ಮೂರ್ತಿ, ಅಶೋಕ್, ಸತ್ಯಜಿತ್, ಬುಲೆಟ್ ಪ್ರಕಾಶ್ ಮುಂತಾದವರು ‘ಅಪ್ಪು’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.