ಸುಮಲತಾ ಮನೆಯಲ್ಲಿ ನಾಮಕರಣ, ಬರ್ತಾರಾ ದರ್ಶನ್?
Darshan Thoogudeepa: ನಟ ದರ್ಶನ್ ತೂಗುದೀಪ ಹಾಗೂ ಮಾಜಿ ಸಂಸದೆ ಸುಮಲತಾ ಮಧ್ಯೆ ಬಿರುಕು ಮೂಡಿದೆ ಎನ್ನಲಾಗುತ್ತಿದೆ. ಆದರೆ ಸುಮಲತಾ ಅವರು ಈ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. ಇಂದು ಸುಮಲತಾ ಮೊಮ್ಮಗನ ನಾಮಕರಣ ಇದ್ದು, ಇಂದಿನ ಕಾರ್ಯಕ್ರಮಕ್ಕೆ ದರ್ಶನ್ ಬರುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಮೂಡಿದೆ.

ನಟಿ, ಮಾಜಿ ಸಂಸದೆ ಸುಮಲತಾ (Sumalatha) ಅವರ ಮನೆಯಲ್ಲಿ ಇಂದು ನಾಮಕರಣ ಮಹೋತ್ಸವ ನಡೆಯುತ್ತಿದೆ. ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಮತ್ತು ಸೊಸೆ ಅವಿವಾ ಬಿದ್ದಪ್ಪ ಅವರು ಇತ್ತೀಚೆಗಷ್ಟೆ ಗಂಡು ಮಗುವಿನ ಪೋಷಕರಾಗಿದ್ದು, ಮಗುವಿನ ನಾಮಕರಣ ಮಹೋತ್ಸವ ಇಂದು ಸುಮಲತಾ ಅವರ ಬೆಂಗಳೂರಿನ ನಿವಾಸದಲ್ಲಿ ನಡೆಯುತ್ತಿದೆ. ಈ ನಾಮಕರಣ ಮಹೋತ್ಸವಕ್ಕೆ ನಟ ದರ್ಶನ್ ಬರುತ್ತಾರಾ ಎಂಬುದು ಕುತೂಹಲ ಕೆರಳಿಸಿದೆ.
ಇತ್ತೀಚೆಗೆ ನಡೆದಿರುವ ಕೆಲ ಬೆಳವಣಿಗೆಗಳು ನಟ ದರ್ಶನ್ ಮತ್ತು ಸುಮಲತಾ ನಡುವೆ ಕಂದಕ ಸೃಷ್ಟಿಸಿವೆ ಎನ್ನಲಾಗುತ್ತಿದೆ. ನಟ ದರ್ಶನ್ ಏಕಾಏಕಿ, ಸುಮಲತಾ ಸೇರಿದಂತೆ ಅವರ ಪುತ್ರ ಇನ್ನಿತರೆ ಕೆಲವರನ್ನು ಇನ್ಸ್ಟಾಗ್ರಾಂನಿಂದ ಅನ್ಫಾಲೋ ಮಾಡಿದ್ದಾರೆ. ಅದರ ಬೆನ್ನಲ್ಲೆ ಸುಮಲತಾ ಸಹ ಇನ್ಸ್ಟಾಗ್ರಾಂನಲ್ಲಿ ಸಾಲು ಸಾಲು ಇನ್ಸ್ಟಾಗ್ರಾಂ ಪೋಸ್ಟ್ಗಳನ್ನು ಹಂಚಿಕೊಂಡಿದ್ದು, ಎಲ್ಲ ಪೋಸ್ಟ್ಗಳು ಪರೋಕ್ಷವಾಗಿ ದರ್ಶನ್ಗೆ ಚುಚ್ಚುವಂತೆಯೇ ಇದ್ದವು. ಆದರೆ ಸುಮಲತಾ, ತಮ್ಮ ಹಾಗೂ ದರ್ಶನ್ ನಡುವೆ ಯಾವುದೇ ಮನಸ್ಥಾಪ ಇಲ್ಲವೆಂದು ಹೇಳಿದ್ದಾರೆ. ಹಾಗಾಗಿ ಇಂದಿನ ನಾಮಕರಣ ಸಮಾರಂಭಕ್ಕೆ ದರ್ಶನ್ ಬರುತ್ತಾರೆಯೇ ಇಲ್ಲವೇ ಎಂಬುದು ಕುತೂಹಲ ಕೆರಳಿಸಿದೆ.
ಸುಮಲತಾ ಕೆಲ ದಿನದ ಹಿಂದಷ್ಟೆ ಹೇಳಿರುವಂತೆ, ದರ್ಶನ್ ಇಲ್ಲದೆ ನಮ್ಮ ಮನೆಯಲ್ಲಿ ಯಾವುದೇ ಶುಭ ಕಾರ್ಯ ನಡೆಯುವುದಿಲ್ಲ ಎಂದಿದ್ದರು. ಹಾಗಿದ್ದ ಮೇಲೆ ದರ್ಶನ್ ಇಂದಿನ ನಾಮಕರಣ ಸಮಾರಂಭಕ್ಕೆ ಹಾಜರಾಗಲೇ ಬೇಕಿದೆ. ಒಂದೊಮ್ಮೆ ದರ್ಶನ್ ಇಂದು ನಾಮಕರಣಕ್ಕೆ ಬರಲಿಲ್ಲವೆಂದಾದಲ್ಲಿ, ಸುಮಲತಾ ಹಾಗೂ ದರ್ಶನ್ ನಡುವೆ ಬಿರುಕು ಮೂಡಿರುವುದು ಬಹುತೇಕ ಖಾತ್ರಿ ಆಗಲಿದೆ. ಈ ಹಿಂದೆ, ಸುಮಲತಾ ಅವರ ಮನೆಯಲ್ಲಿ ನಡೆದಿರುವ ಎಲ್ಲ ಸಮಾರಂಭಗಳಿಗೂ ದರ್ಶನ್ ಭಾಗಿ ಆಗಿರುವುದು ಮಾತ್ರವೇ ಅಲ್ಲದೆ ಮುಂದಾಳತ್ವ ಸಹ ವಹಿಸಿದ್ದರು.
ಇದನ್ನೂ ಓದಿ:Darshan: ದರ್ಶನ್ ಗುರಿ, ಸುಮಲತಾ ಮಾರ್ಮಿಕ ಸುಭಾಷಿತಗಳ ಬಾಣ
ಇನ್ನು ನಟ ದರ್ಶನ್ ಮೈಸೂರಿನಲ್ಲಿ ‘ಡೆವಿಲ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮೈಸೂರಿನ ಅತಿಥಿ ಗೃಹದಲ್ಲಿ ‘ಡೆವಿಲ್’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಈ ಹಿಂದೆ, ದರ್ಶನ್ ಎಷ್ಟೇ ಬ್ಯುಸಿಯಾಗಿದ್ದರೂ ಸುಮಲತಾ ಅವರ ಮನೆಯ ಎಲ್ಲ ಕಾರ್ಯಕ್ರಮಗಳಿಗೆ ಹಾಜರಾಗಿದ್ದರು. ಸುಮಲತಾ ಪರವಾಗಿ ಚುನಾವಣಾ ಪ್ರಚಾರಗಳಲ್ಲಿಯೂ ಭಾಗಿ ಆಗಿದ್ದರು. ಅವರ ರಾಜಕೀಯ ಪಯಣಕ್ಕೂ ಪರೋಕ್ಷವಾಗಿ ಸಹಾಯ ಮಾಡಿದ್ದರು. ಆದರೆ ಈಗ ಇಬ್ಬರ ನಡುವೆ ಬಿರುಕು ಮೂಡಿದಂತಿದೆ.
ನಟ ದರ್ಶನ್, ರೇಣುಕಾ ಸ್ವಾಮಿ ಪ್ರಕರಣದಲ್ಲಿ ಜೈಲು ಪಾಲಾದಾಗ ಸುಮಲತಾ ಅವರು ಜೈಲಿಗೆ ಭೇಟಿ ನೀಡಿರಲಿಲ್ಲ. ಸುಮಲತಾ ಅವರು ರಾಜಕೀಯ ಕಾರಣಕ್ಕೆ ಜೈಲಿಗೆ ಭೇಟಿ ನೀಡಿರಲಿಲ್ಲ ಎನ್ನಲಾಗಿತ್ತು. ಇತ್ತೀಚೆಗೆ ಸುಮಲತಾ ಆಪ್ತರೊಬ್ಬರು ಹೇಳಿರುವಂತೆ, ದರ್ಶನ್ ಅವರೇ ಸುಮಲತಾ ಅವರನ್ನು ಜೈಲಿಗೆ ಬಾರದಂತೆ ತಡೆದಿದ್ದರು ಎನ್ನಲಾಗಿದೆ. ಅದೇ ಕಾರಣಕ್ಕೆ ಸುಮಲತಾ, ಜೈಲಿಗೆ ಹೋಗಿರಲಿಲ್ಲವಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ