ಈ ವಾರ ‘ಅಪ್ಪು’ ರೀ-ರಿಲೀಸ್; ಹೊಸ ಚಿತ್ರ ತಂಡಗಳಿಗೆ ಇಲ್ಲ ಬಿಡುಗಡೆ ಮಾಡುವ ಆಸಕ್ತಿ
ಈ ವಾರ ಕನ್ನಡ ಚಿತ್ರರಂಗದಲ್ಲಿ ಹಲವು ಹೊಸ ಬಿಡುಗಡೆಗಳಿಲ್ಲ. ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನಾಚರಣೆಯ ಪ್ರಯುಕ್ತ ‘ಅಪ್ಪು’ ಸಿನಿಮಾ ಮರುಬಿಡುಗಡೆಯಾಗುತ್ತಿದೆ. ಇದರ ಜೊತೆಗೆ, ಹಿಂದಿ ಚಿತ್ರ ‘ದಿ ಡಿಪ್ಲೋಮ್ಯಾಟ್’, ತೆಲುಗು ಚಿತ್ರಗಳು ‘ದಿಲ್ರುಬಾ’ ಮತ್ತು ‘ಕೋರ್ಟ್’, ಮತ್ತು ತಮಿಳು ಚಿತ್ರ ‘ಸ್ವೀಟ್‌ಹಾರ್ಟ್’ ಗಳು ಬಿಡುಗಡೆಯಾಗುತ್ತಿವೆ.

ಶುಕ್ರವಾರ ಬಂತೆಂದರೆ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತವೆ. ಆದರೆ, ಈ ವಾರ ಯಾವುದೇ ಹೊಸ ಸಿನಿಮಾಗಳು ತೆರೆಗೆ ಬರುತ್ತಿಲ್ಲ. ಯಾವುದೇ ಹೊಸ ಸಿನಿಮಾಗಳನ್ನು ರಿಲೀಸ್ ಮಾಡಲು ತಂಡದವರು ಹೆಚ್ಚು ಆಸಕ್ತಿ ತೋರಿಸಿಲ್ಲ. ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿವೆ. ಈ ಕಾರಣದಿಂದ ಸಿನಿಮಾ ಹೆಚ್ಚಿನ ಸಂಖ್ಯೆಯಲ್ಲಿ ರಿಲೀಸ್ ಆಗುತ್ತಿಲ್ಲ. ಈ ವಾರ ರಿಲೀಸ್ ಆಗುತ್ತಿರುವ ಸಿನಿಮಾಗಳ ಬಗ್ಗೆ ಇಲ್ಲಿದೆ ವಿವರ.
ಅಪ್ಪು
ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಕಲಾವಿದರಲ್ಲಿ ಒಬ್ಬರಾಗಿದ್ದರು. ಕೇವಲ 46 ವರ್ಷ ವಯಸ್ಸಿನಲ್ಲಿ ಅವರು ನಿಧನ ಹೊಂದಿದರು. ಅವರು ಇಲ್ಲ ಎಂಬ ನೋವು ಎಂದಿಗೂ ಮರೆಯಾಗುವಂಥದ್ದು ಅಲ್ಲ. ಮಾರ್ಚ್ 17 ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನ. ಆ ಪ್ರಯುಕ್ತ ‘ಅಪ್ಪು’ ಸಿನಿಮಾ ರೀ-ರಿಲೀಸ್ ಆಗುತ್ತಿದೆ.
ಟಾಲಿವುಡ್ನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಅವರು ‘ಅಪ್ಪು’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಪಾರ್ವತಮ್ಮ ರಾಜ್‌ಕುಮಾರ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಶಿವರಾಜ್ಕುಮಾರ್ ಅವರು ‘ಅಪ್ಪು’ ಎನ್ನುವ ಶೀರ್ಷಿಕೆ ಕೊಟ್ಟರು ಎನ್ನಲಾಗಿದೆ. ಗುರು ಕಿರಣ್ ಸಂಗೀಯ ಸಂಯೋಜನೆ ಚಿತ್ರದ ತೂಕ ಹೆಚ್ಚಿಸಿತು. ಈಗ ‘ಅಪ್ಪು’ ಸಿನಿಮಾ ಮತ್ತೆ ರಿಲೀಸ್ ಆಗುತ್ತಿರುವುದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ಪಿಆರ್ಕೆ ಪ್ರೊಡಕ್ಷನ್ಸ್ ಬ್ಯಾನರ್ ಮೂಲಕ ಸಿನಿಮಾ ಬಿಡುಗಡೆ ಕಾಣುತ್ತಿರುವುದು ವಿಶೇಷ. ಈ ಚಿತ್ರದ ಸ್ವಾಗತಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ದೊಡ್ಡ ಮಟ್ಟದಲ್ಲೇ ಚಿತ್ರ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ‘ಇದು ಸಿಂಹದ ಮರಿ’; ‘ಅಪ್ಪು’ 100ನೇ ದಿನದ ಸೆಲೆಬ್ರೇಷನ್ನಲ್ಲಿ ರಜನಿ ಮಾತು; ಇಲ್ಲಿದೆ ಹಳೆಯ ವಿಡಿಯೋ
ಡಿಪ್ಲೋಮ್ಯಾಟ್
ಹಿಂದಿಯಲ್ಲಿ ಜಾನ್ ಅಬ್ರಹಾಂ ನಟಿಸುತ್ತಿರುವ ‘ದಿ ಡಿಪ್ಲೋಮ್ಯಾಟ್’ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ಸಾದಿಯಾ ಖತೀಬ್ ನಾಯಕಿ. ಶಿವ ನಾಯರ್ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ಸಿಕ್ಕಿಲ್ಲ. ಉಳಿದಂತೆ ತೆಲುಗಿನಲ್ಲಿ ಕಿರಣ್ ಹಾಗೂ ರುಕ್ಸರ್ ದಿಲ್ಲೋನ್ ನಟನೆಯ ‘ದಿಲ್ರುಬಾ’, ತೆಲುಗಿನ ‘ಕೋರ್ಟ್’, ‘ತಮಿಳಿನ ‘ಸ್ವೀಟ್‌ಹಾರ್ಟ್’ ಸಿನಿಮಾ ತೆರೆಗೆ ಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.