‘ಅಮ್ಮಾವ್ರ ಗಂಡ’ ಚಿತ್ರದ ನಟಿ ಭಾಗ್ಯಶ್ರೀ ಹಣೆಗೆ ಗಾಯ, 13 ಹೊಲಿಗೆ: ಫೋಟೋ ವೈರಲ್
ಶಿವರಾಜ್ಕುಮಾರ್ ಜೊತೆ ‘ಅಮ್ಮಾವ್ರ ಗಂಡ’ ಚಿತ್ರದಲ್ಲಿ ನಟಿಸಿದ್ದ ಭಾಗ್ಯಶ್ರೀ ಅವರು ಪೆಟ್ಟು ಮಾಡಿಕೊಂಡಿದ್ದಾರೆ. ಆಪರೇಷನ್ ಥಿಯೇಟರ್ನಲ್ಲಿ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡುತ್ತಿರುವ ಫೋಟೋ ವೈರಲ್ ಆಗಿದೆ. ಭಾಗ್ಯಶ್ರೀ ಅವರ ಹೆಲ್ತ್ ಅಪ್ಡೇಟ್ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ. ಆ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..

ಒಂದು ಕಾಲದಲ್ಲಿ ಸೂಪರ್ ಹಿಟ್ ಸಿನಿಮಾಗಳ ಮೂಲಕ ಮಿಂಚಿದ ನಟಿ ಭಾಗ್ಯಶ್ರೀ (Bhagyashree) ಅವರ ಬಗ್ಗೆ ಈಗ ಒಂದು ಕಹಿ ಸುದ್ದಿ ಕೇಳಿಬಂದಿದೆ. ಅವರ ಹಣೆಗೆ ತೀವ್ರವಾಗಿ ಪೆಟ್ಟಾಗಿದೆ. ಅದರ ಫೋಟೋ ಕೂಡ ವೈರಲ್ ಆಗುತ್ತಿದೆ. ಗಾಯ ಆದ ಕೂಡಲೇ ಭಾಗ್ಯಶ್ರೀ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಸರ್ಜರಿ (Surgery) ಮಾಡಿದ್ದು, ಭಾಗ್ಯಶ್ರೀ ಹಣೆಗೆ 13 ಹೊಲಿಗೆ ಹಾಕಿದ್ದಾರೆ. ಈ ಬಗ್ಗೆ ಭಾಗ್ಯಶ್ರೀ ಅವರು ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಅವರ ಹೆಲ್ತ್ ಅಪ್ಡೇಟ್ ತಿಳಿಯಲು ಅಭಿಮಾನಿಗಳು ಕಾದಿದ್ದಾರೆ. ಆದಷ್ಟು ಬೇಗ ಭಾಗ್ಯಶ್ರೀ ಅವರು ಚೇತರಿಸಿಕೊಳ್ಳಲಿ ಎಂದು ಜನರು ಪ್ರಾರ್ಥಿಸುತ್ತಿದ್ದಾರೆ.
ಭಾಗ್ಯಶ್ರೀ ಅವರು ಚಿತ್ರರಂಗದಲ್ಲಿ ಈಗ ಅಷ್ಟೇನೂ ಆ್ಯಕ್ಟೀವ್ ಆಗಿಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾಗಳನ್ನು ಮಾತ್ರ ಅವರು ಒಪ್ಪಿಕೊಳ್ಳುತ್ತಿದ್ದಾರೆ. 90ರ ದಶಕದಲ್ಲಿ ಸಲ್ಮಾನ್ ಖಾನ್, ಶಿವರಾಜ್ಕುಮಾರ್ ಮುಂತಾದ ನಟರಿಗೆ ಜೋಡಿಯಾಗಿ ನಟಿಸಿದ್ದ ಅವರಿಗೆ ಈಗ 56 ವರ್ಷ ವಯಸ್ಸು. ಶೂಟಿಂಗ್ ವೇಳೆ ಅವರಿಗೆ ಪೆಟ್ಟಾಗಿರಬಹುದಾ ಎಂಬ ಪ್ರಶ್ನೆ ಹಲವರಿಗೆ ಮೂಡಿದೆ. ಆದರೆ ಅದು ನಿಜವಲ್ಲ. ಭಾಗ್ಯಶ್ರೀ ಅವರು ಆಟ ಆಡುವಾಗ ಈ ಘಟನೆ ನಡೆದಿದೆ.
ಪಿಕಲ್ಬಾಲ್ ಆಟದ ಬಗ್ಗೆ ಭಾಗ್ಯಶ್ರೀ ಅವರು ಆಸಕ್ತಿ ಹೊಂದಿದ್ದಾರೆ. ಇತ್ತೀಚೆಗೆ ಅವರು ಪಿಕಲ್ಬಾಲ್ ಆಡುವಾಗ ಪೆಟ್ಟು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆಪರೇಷನ್ ಥಿಯೇಟರ್ನಲ್ಲಿ ಭಾಗ್ಯಶ್ರೀ ಅವರು ಮಲಗಿರುವ ಫೋಟೋ ವೈರಲ್ ಆಗುತ್ತಿದೆ. ಇದನ್ನು ನೋಡಿ ಅಭಿಮಾನಿಗಳಿಗೆ ಗಾಬರಿ ಆಗಿದೆ. ಆದರೆ ಆತಂಕಪಡುವಂಥದ್ದು ಏನೂ ಇಲ್ಲ. ಸರ್ಜರಿ ಬಳಿಕ ಅವರು ಚೇತರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ‘ಅಮ್ಮಾವ್ರ ಗಂಡ’ ಚಿತ್ರದ ನಟಿ ಭಾಗ್ಯಶ್ರೀ ಪುತ್ರಿಯ ಸಿನಿಮಾಗೆ ನಾಗಶೇಖರ್ ನಿರ್ದೇಶನ
1989ರಲ್ಲಿ ಭಾಗ್ಯಶ್ರೀ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಅವರು ನಟಿಸಿದ ಮೊದಲ ಸಿನಿಮಾ ‘ಮೈನೆ ಪ್ಯಾರ್ ಕಿಯಾ’. ಆ ಸಿನಿಮಾದಲ್ಲಿ ಅವರು ಸಲ್ಮಾನ್ ಖಾನ್ ಜೊತೆ ತೆರೆ ಹಂಚಿಕೊಂಡರು. ಮೊದಲ ಚಿತ್ರವೇ ಸೂಪರ್ ಹಿಟ್ ಆಯಿತು. ಆ ಚಿತ್ರದಲ್ಲಿನ ನಟನೆಗೆ ಭಾಗ್ಯಶ್ರೀ ಅವರಿಗೆ ಫಿಲ್ಮ್ಫೇರ್ ಪ್ರಶಸ್ತಿ ಕೂಡ ಸಿಕ್ಕಿತು. 1997ರಲ್ಲಿ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಶಿವರಾಜ್ಕುಮಾರ್ ಜೊತೆ ‘ಅಮ್ಮಾವ್ರ ಗಂಡ’ ಸಿನಿಮಾದಲ್ಲಿ ಭಾಗ್ಯಶ್ರೀ ನಟಿಸಿದರು. ಕನ್ನಡ, ಹಿಂದಿ ಮಾತ್ರವಲ್ಲದೇ ತೆಲುಗು, ಬೆಂಗಾಲಿ, ಭೋಜ್ಪುರಿ, ಮರಾಠಿ ಮುಂತಾದ ಭಾಷೆಯ ಸಿನಿಮಾಗಳಲ್ಲಿ ಕೂಡ ಭಾಗ್ಯಶ್ರೀ ಅವರು ಅಭಿನಯಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.