ಪುನೀತ್ ರಾಜ್ಕುಮಾರ್ ಬಯೋಪಿಕ್ ಪ್ಲ್ಯಾನ್ ಬಗ್ಗೆ ಮಾತಾಡಿದ ಸಂತೋಷ್ ಆನಂದ್ರಾಮ್
‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಅವರ ಜೀವನದ ಕುರಿತು ಸಿನಿಮಾ ಮೂಡಿಬರಬೇಕು ಎಂಬುದು ಅಭಿಮಾನಿಗಳ ಆಸೆ. ಅದನ್ನು ಈಡೇರಿಸುವ ನಿಟ್ಟಿನಲ್ಲಿ ಸಂತೋಷ್ ಆನಂದ್ರಾಮ್ ಅವರು ಆಲೋಚನೆ ಮಾಡಿದ್ದಾರೆ. ತಮ್ಮ ಮುಂದಿನ ಪ್ಲ್ಯಾನ್ ಬಗ್ಗೆ ಅವರು ಮಾತಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ಪೂರ್ತಿ ವಿವರ..

ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ಭೌತಿಕವಾಗಿ ಇಲ್ಲದಿದ್ದರೂ ಕೂಡ ಫ್ಯಾನ್ಸ್ ಮನದಲ್ಲಿ ಅವರು ಶಾಶ್ವತವಾಗಿ ನೆಲೆಸಿರುತ್ತಾರೆ. ಇಂದು (ಮಾರ್ಚ್ 14) ಪುನೀತ್ ನಟನೆಯ ‘ಅಪ್ಪು’ ಸಿನಿಮಾ ಮರು ಬಿಡುಗಡೆ ಆಗಿದ್ದು, ಅನೇಕ ಸೆಲೆಬ್ರಿಟಿಗಳು ಬಂದು ಸಿನಿಮಾ ನೋಡುತ್ತಿದ್ದಾರೆ. ಪುನೀತ್ ಜೊತೆ ಹೆಚ್ಚು ಆಪ್ತತೆ ಹೊಂದಿದ್ದ ನಿರ್ದೇಶಕ ಸಂತೋಷ್ ಆನಂದ್ರಾಮ್ (Santhosh Ananddram) ಅವರು ಕೂಡ ‘ಅಪ್ಪು’ ಚಿತ್ರ ನೋಡಲು ಬಂದಿದ್ದಾರೆ. ಈ ವೇಳೆ ಟಿವಿ9 ಜೊತೆ ಮಾತನಾಡಿ ಕೆಲವು ಇಂಟರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ಬಯೋಪಿಕ್ (Puneeth Rajkumar Biopic) ಮಾಡುವ ಕುರಿತು ಸಂತೋಷ್ ಆನಂದ್ರಾಮ್ ಮಾತನಾಡಿದ್ದಾರೆ.
ಪುನೀತ್ ರಾಜ್ಕುಮಾರ್ ಅವರ ಜೀವನದ ಕುರಿತು ಸಿನಿಮಾ ಮಾಡುವ ಆಲೋಚನೆ ಸಂತೋಷ್ ಆನಂದ್ರಾಮ್ ಅವರಿಗೆ ಇದೆ. ಆ ಕುರಿತು ಅವರು ವಿವರ ಹಂಚಿಕೊಂಡಿದ್ದಾರೆ. ‘ಅವರ ಜೊತೆ ನಾನು ಮಾಡಿದ 2 ಸಿನಿಮಾಗಳು ಹಿಟ್ ಆದವು. ನನ್ನ ಬರವಣಿಗೆಯಲ್ಲಿ ಅಪ್ಪು ಅವರನ್ನು ಬಣ್ಣಿಸಿದ ಖುಷಿ ನನಗೆ ಇದೆ. ನಾನು ಇರುವವರೆಗೂ ನನ್ನ ಬರವಣಿಗೆ ಅವರ ಕುರಿತು ಇದ್ದೇ ಇರುತ್ತದೆ. ಅವರ ಬಗ್ಗೆ ಸಿನಿಮಾ ಮಾಡಿ ಎಂದು ಫ್ಯಾನ್ಸ್ ಯಾವಾಗಲೂ ಕೇಳುತ್ತಾರೆ’ ಎಂದಿದ್ದಾರೆ ಸಂತೋಷ್ ಆನಂದ್ರಾಮ್.
‘ಇಂದು ಎಐ ಟೆಕ್ನಾಲಜಿ ಇದೆ. ಮುಂದಿನ ದಿನಗಳಲ್ಲಿ ಆ ದೇವರು ಅವಕಾಶ ಕೊಟ್ಟರೆ, ಅಪ್ಪು ಅವರ ಚರಿತ್ರೆಯನ್ನು ತೆರೆ ಮೇಲೆ ತರುವ ಪ್ರಯತ್ನವನ್ನು ನಾನು ಮಾಡಬೇಕು ಎಂಬುದನ್ನು ಈಗ ತುಂಬ ಗಂಭೀರವಾಗಿ ಪರಿಗಣಿಸಿದ್ದೇನೆ. ಹೊಂಬಾಳೆ ಫಿಲ್ಮ್ಸ್ ಮೂಲಕ ನಾನು ಮತ್ತು ಪುನೀತ್ ಅವರು 5 ಸಿನಿಮಾ ಮಾಡಬೇಕು ಅಂತ ಪ್ಲ್ಯಾನ್ ಆಗಿತ್ತು. ಮಾಡಿದ್ದರೆ ರೆಕಾರ್ಡ್ ಆಗುತ್ತಿತ್ತು. ಮೂರು ಮತ್ತು ನಾಲ್ಕನೇ ಸಿನಿಮಾಗೆ ಕಮಿಟ್ ಕೂಡ ಆಗಿದ್ದೆವು. ಆದರೆ ದೇವರ ಆಟ ಬೇರೆಯೇ ಇತ್ತು’ ಎಂದು ಸಂತೋಷ್ ಆನಂದ್ರಾಮ್ ಹೇಳಿದ್ದಾರೆ.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ ಅವರ ಸ್ಟಂಟ್ ಅನ್ನು ‘ಅಪ್ಪು ವೆಂಕಟೇಶ್’ ನೆನಪಿಸಿಕೊಂಡಿದ್ದು ಹೀಗೆ
ಪುನೀತ್ ರಾಜ್ಕುಮಾರ್ ಕುರಿತು ಪುಸ್ತಕ ಕೂಡ ಸಿದ್ಧವಾಗುತ್ತಿದೆ. ಆ ಬಗ್ಗೆ ಸಹ ಸಂತೋಷ್ ಆನಂದ್ರಾಮ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಪುನೀತ್ ಹುಟ್ಟುಹಬ್ಬಕ್ಕೆ ಬುಕ್ ಬರಲಿದೆ. ಪ್ರಕೃತಿ ಬನವಾಸಿ ಅವರು ಬರೆಯುತ್ತಿದ್ದಾರೆ. ಅಶ್ವಿನಿ ಮೇಡಂ ನಿಂತು ಆ ಕೆಲಸ ಮಾಡಿಸುತ್ತಿದ್ದಾರೆ. ಆ ಪುಸ್ತಕದಿಂದ ಪುನೀತ್ ಅವರ ವ್ಯಕ್ತಿತ್ವದ ಬಗ್ಗೆ ಜನರಿಗೆ ಇನ್ನಷ್ಟು ಗೊತ್ತಾಗುತ್ತದೆ. ನಾವು ಎಷ್ಟು ಸಾಧ್ಯವೋ ಅಷ್ಟು ಅವರನ್ನು ನೆನಪಿಸಿಕೊಳ್ಳುತ್ತಾ ಇರುತ್ತೇವೆ’ ಎಂದಿದ್ದಾರೆ ಸಂತೋಷ್ ಆನಂದ್ರಾಮ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.