ಅನಂತ್ ನಾಗ್ರ ಭೇಟಿ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Anant Nag-Prahlad Joshi: ನಟ ಅನಂತ್ ನಾಗ್ ಅವರಿಗೆ ಜನವರಿ ತಿಂಗಳಲ್ಲಿ ಪದ್ಮಭೂಷಣ ಗೌರವ ನೀಡಲಾಗಿದೆ. ಇಂದು (ಮಾರ್ಚ್ 14) ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಮಾಜಿ ಸಚಿವ ಅಶ್ವತ್ಥ್ ನಾರಾಯಣ್ ಅವರು ಅನಂತ್ ನಾಗ್ ನಿವಾಸಕ್ಕೆ ಭೇಟಿ ನೀಡಿ ಅವರನ್ನು ಅಭಿನಂದಿಸಿದ್ದಾರೆ.

ಹಿರಿಯ ನಟ ಅನಂತ್ ನಾಗ್ (Anant Nag) ಅವರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ಗೌರವ ನೀಡಿದೆ. ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ಸಿಗಬೇಕು ಎಂಬುದು ಕನ್ನಡಿಗರ ಬಲು ವರ್ಷದ ಬೇಡಿಕೆಯಾಗಿತ್ತು. ಇದೇ ಜನವರಿಯಲ್ಲಿ ಕೇಂದ್ರ ಸರ್ಕಾರವು ಭಾರತದ ನಾಗರೀಕ ಪ್ರಶಸ್ತಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆ ಮಾಡಿತ್ತು. ಇಂದು (ಮಾರ್ಚ್ 14) ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಅನಂತ್ ನಾಗ್ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಮಾಜಿ ಸಚಿವ ಸಿಎಂ ಅಶ್ವತ್ಥ್ ನಾರಾಯಣ್ ಅವರು ಅನಂತ್ ನಾಗ್ ಅವರ ನಿವಾಸಕ್ಕೆ ತೆರಳಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಈ ವೇಳೆ ಅನಂತ್ ನಾಗ್ ಅವರೊಟ್ಟಿಗೆ ಬಹು ಸಮಯ ರಾಜಕೀಯ, ಸಿನಿಮಾ ಇನ್ನಿತರೆ ವಿಷಯಗಳ ಚರ್ಚೆ ಮಾಡಿದರು. ಭೇಟಿಯ ಚಿತ್ರಗಳನ್ನು ಪ್ರಹ್ಲಾದ್ ಜೋಶಿಯವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
‘ಇಂದು ಬೆಂಗಳೂರಿನಲ್ಲಿ ಕನ್ನಡದ ಪ್ರಸಿದ್ಧ ಹಿರಿಯ ನಟ, ಪದ್ಮಭೂಷಣ ಡಾ ಅನಂತ್ ನಾಗ್ ಅವರನ್ನು ಭೇಟಿಯಾಗಿ ಅಭಿನಂದಿಸಿದೆನು. ಈ ಸಂದರ್ಭದಲ್ಲಿ ಪ್ರಸ್ತುತ ದೇಶದ ಅನೇಕ ವಿದ್ಯಮಾನಗಳ ಕುರಿತು ಶ್ರೀ ಅನಂತ್ ನಾಗ್ ಚರ್ಚಿಸಿದರು. ಭಾರತದ ವಿಶೇಷತೆ ಮತ್ತು ವೈವಿಧ್ಯಮಯ ಇತಿಹಾಸ ಮೊದಲಾದ ವಿಭಿನ್ನ ವಿಷಯಗಳ ಕುರಿತು ಮಾತನಾಡಿದರು. ಕೇಂದ್ರ ಸರ್ಕಾರ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಯಾವ ರೀತಿ ವಿವಿಧ ಕ್ಷೇತ್ರಗಳಲ್ಲಿ ಪರಿಣಾಮಕಾರಿ ಕೆಲಸಮಾಡುತ್ತಿದೆ ಎಂಬುದನ್ನು ನಾನು ಈ ಸಂದರ್ಭದಲ್ಲಿ ಅವರಿಗೆ ವಿವರಿಸಿದೆನು ಈ ಭೇಟಿಯ ಸಂದರ್ಭದಲ್ಲಿ ಅವರ ಪತ್ನಿ ಹಾಗೂ ಹಿರಿಯ ಕಲಾವಿದರಾದ ಶ್ರೀಮತಿ ಗಾಯತ್ರಿ ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕರಾದ ಡಾ ಸಿ.ಎನ್ ಅಶ್ವತ್ಥನಾರಾಯಣ ಉಪಸ್ಥಿತರಿದ್ದರು’ ಎಂದಿದ್ದಾರೆ ಪ್ರಹ್ಲಾದ್ ಜೋಶಿ.
ಇದನ್ನೂ ಓದಿ:ಅನಂತ್ ನಾಗ್ ಜೊತೆ ಒಂದಷ್ಟು ಹರಟೆ; ಅನುಭವ ಹಂಚಿಕೊಂಡ ಸುಧಾರಾಣಿ
ಅನಂತ್ ನಾಗ್ ಅವರು ನಟರಾಗಿರುವ ಜೊತೆಗೆ ರಾಜಕಾರಣಿಯೂ ಹೌದು. ಈ ಹಿಂದೆ ಅವರು ಶಾಸಕ, ಸಚಿವ ಮತ್ತು ವಿಧಾನಪರಿಷತ್ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಅನಂತ್ ನಾಗ್ ಅವರು ಹಲವು ಬಾರಿ ಬಿಜೆಪಿ ಹಾಗೂ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ಮಾತನಾಡಿದ್ದಾರೆ. ಮೋದಿ ಅವರು ಶಕ್ತ ನಾಯಕ, ಅವರಂಥಹಾ ನಾಯಕರು ಕರ್ನಾಟಕಕ್ಕೂ ಬೇಕು ಎಂದು ಸಹ ಹಲವು ಬಾರಿ ಹೇಳಿದ್ದಾರೆ. ಅನಂತ್ ನಾಗ್ ಬಿಜೆಪಿ ಸೇರಲಿದ್ದಾರೆ ಎನ್ನಲಾಗಿತ್ತು, ಅದಕ್ಕಾಗಿ ಕಾರ್ಯಕ್ರಮ ಸಹ ಆಯೋಜನೆ ಆಗಿತ್ತು, ಆದರೆ ಅನಂತ್ ನಾಗ್ ಅವರು ಆ ಕಾರ್ಯಕ್ರಮಕ್ಕೆ ಗೈರಾಗಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ