ಅನಂತ್ ನಾಗ್ ಜೊತೆ ಒಂದಷ್ಟು ಹರಟೆ; ಅನುಭವ ಹಂಚಿಕೊಂಡ ಸುಧಾರಾಣಿ
ಸುಧಾರಾಣಿ ಅವರು ಪದ್ಮಭೂಷಣ ಪ್ರಶಸ್ತಿ ಪಡೆದ ಅನಂತ್ ನಾಗ್ ಅವರನ್ನು ಭೇಟಿ ಮಾಡಿ ಅಭಿನಂದಿಸಿದ್ದಾರೆ. ಬಾಲ ಕಲಾವಿದೆ ಆಗಿ ಅನುಪಮಾ ಸಿನಿಮಾದಲ್ಲಿ ಅವರೊಂದಿಗೆ ನಟಿಸಿದ್ದ ಅನುಭವವನ್ನು ನೆನಪಿಸಿಕೊಂಡಿದ್ದಾರೆ. ಅವರೊಂದಿಗಿನ ದೀರ್ಘಕಾಲಿಕ ಬಾಂಧವ್ಯ ಮತ್ತು ಅವರಿಂದ ಪಡೆದ ಸ್ಫೂರ್ತಿಯ ಬಗ್ಗೆ ಮಾತನಾಡಿದ್ದಾರೆ. ಈ ಭೇಟಿಯ ಸ್ಮರಣೀಯ ಕ್ಷಣಗಳನ್ನು ಸುಧಾರಾಣಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸುಧಾರಾಣಿ ಅವರು ಬಾಲ ಕಲಾವಿದೆ ಆಗಿದ್ದಾಗಲೇ ಅನಂತ್ ನಾಗ್ ಜೊತೆ ತೆರೆ ಹಂಚಿಕೊಂಡಿದ್ದರು. ಸುಧಾರಾಣಿ ಹೀರೋಯಿನ್ ಆದ ಬಳಿಕ ಇಬ್ಬರೂ ಹಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದರು. ಈ ಕಾರಣಕ್ಕೆ ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಈ ಬಾಂಧವ್ಯದ ಕಾರಣಕ್ಕೆ ಅನಂತ್ ನಾಗ್ ಜೊತೆ ಮಾತನಾಡುವ ಅವಕಾಶ ಸುಧಾರಾಣಿಗೆ ಸಿಕ್ಕಿದೆ. ಇತ್ತೀಚೆಗೆ ಅನಂತ್ ನಾಗ್ ಅವರಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದೆ. ಈ ಬೆನ್ನಲ್ಲೇ ಅವರು ಅನಂತ್ ನಾಗ್ ಬಳಿ ತೆರಳಿ ಮಾತನಾಡಿದ್ದಾರೆ.
ವಿಡಿಯೋ ಹಂಚಿಕೊಂಡು ಅದಕ್ಕೆ ಉದ್ದನೆಯ ಕ್ಯಾಪ್ಶನ್ ನೀಡಿದ್ದಾರೆ ಸುಧಾರಾಣಿ. ‘1981ರಲ್ಲಿ ‘ಅನುಪಮಾ’ ಸಿನಿಮಾದಲ್ಲಿ ಅನಂತ್ ನಾಗ್ ಜೊತೆ ಬಾಲನಟಿಯಾಗಿ ತೆರೆಹಂಚಿಕೊಂಡಾಗಿನಿಂದ ಇಲ್ಲಿಯವರೆಗೂ ಅನಂತ್ ನಾಗ್ ಅವರೊಡನೆ ಒಳ್ಳೆಯ ಒಡನಾಟ ಇದೆ. ಅವರನ್ನ ಭೇಟಿ ಮಾಡೋಕೆ ಕಾರಣವೇ ಬೇಕಿಲ್ಲ. ಪ್ರತಿ ಸಾರಿ ಭೇಟಿ ಮಾಡಿ ಮಾತನಾಡಿದಾಗ ಅದೊಂದು ಬೇರೆ ರೀತಿಯ ಅನುಭವ. ಕಲಿಯೋದು ಬಹಳ ಇರತ್ತದೆ. ಸದಾ ನೆನಪಲ್ಲಿ ಉಳಿಯುವಂಥ ಕ್ಷಣಗಳಾಗಿರತ್ತದೆ’ ಎಂದು ಪತ್ರ ಆರಂಭಿಸಿದ್ದಾರೆ ಸುಧಾರಾಣಿ.
‘ಇತ್ತೀಚೆಗೆ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂದಿರೋ ವಿಚಾರ ಕೇಳಿ ತುಂಬಾ ಖುಷಿ ಆಯಿತು. ಅವರು ಪ್ರಶಸ್ತಿ ಸ್ವೀಕರಿಸೋದನ್ನ ಪ್ರತ್ಯಕ್ಷವಾಗಿ ನೋಡಲಾಗುವುದಿಲ್ಲ. ಆದರೆ ಅಂಥ ಮೇರು ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯ ಜೊತೆ ಸಮಯ ಕಳೆಯೋ ಅವಕಾಶ ಅವರ ಸ್ವಗೃಹದಲ್ಲೇ ಸಿಗುತ್ತದೆ ಎಂದರೆ ಬಿಡಲಾಗುವುದೇ’ ಎಂದು ಪ್ರಶ್ನೆ ಮಾಡಿದ್ದಾರೆ ಸುಧಾರಾಣಿ.
View this post on Instagram
‘ನಾನು ಮತ್ತು ಮಾಳವಿಕಾ ಅವಿನಾಶ್ ಇಬ್ಬರೂ ಅನಂತ್ ನಾಗ್ ಅವರನ್ನ ಭೇಟಿ ಮಾಡಿ 2 ಗಂಟೆಗಳ ಕಾಲ ಅವರ ಜೊತೆ ಸಮಯ ಕಳೆದೆವು. ಯಾವಾಗಲೂ ಮಾತಾಡೋ ಹಾಗೆ ಹಲವಾರು ವಿಷಯಗಳ ಬಗ್ಗೆ ಮಾತಾಡಿದರು. ತಿಳ್ಕೊಳ್ಳೋ ವಿಚಾರಗಳು ಬೇಕಾದಷ್ಟಿತ್ತು. ಅವರ ಜೊತೆ ಕೂತು ಅವರ ಮಾತುಗಳನ್ನ ಕೇಳ್ತಿದ್ರೆ ಅವರ ಎನರ್ಜಿ ನೋಡಿದರೆ ನಮಗೆ ಎನರ್ಜಿ ಮತ್ತು ಧನಾತ್ಮಕತೆ ಬರುತ್ತದೆ’ ಎಂದಿದ್ದಾರೆ ಮಾಳವಿಕಾ.
‘ಅವರ ಸುಂದರವಾದ ಕುಟುಂಬ, ಗಾಯತ್ರಿ ಅವರು ಹಾಗೂ ಅವರ ಮಗಳು ಅದಿತಿ. ನನ್ನ ಮಗಳು ನಿಧಿಗೆ, ಅದಿತಿ ರೋಲ್ ಮಾಡೆಲ್ ಆಗಿರಬೇಕು ಅಂತ ನಾನು ಯಾವಾಗಲೂ ಹೇಳುತ್ತಾ ಇದ್ದೆ. ಅದಿತಿ ಮದುವೆಗೆ ಹೋಗಿದ್ದ ನೆನಪುಗಳಿರಬಹುದು ಅಥವಾ ಅವರ ಮನೆಗೆ ಗಣಪತಿ ಹಬ್ಬಕ್ಕೆ ಹೋಗಿದ್ದ ನೆನಪುಗಳು ಇದೆಲ್ಲವನ್ನು ಅವರ ಕುಟುಂಬದ ಜೊತೆ ಕೂತು ಮೆಲುಕು ಹಾಕೋ ಅವಕಾಶ ಸಿಕ್ಕಿತು’ ಎಂದು ಸುಧಾರಾಣಿ ಸಂತಸ ಹೊರಹಾಕಿದ್ದಾರೆ.
ಇದನ್ನೂ ಓದಿ: ಅಮ್ಮನ ಸೀರೆ ಧರಿಸಿ ಬಂದ ಸುಧಾರಾಣಿ; ಇದರಲ್ಲಿವೆ ಎಂದೂ ಮಾಸದ ನೆನಪುಗಳು
‘ಅನಂತ್ ನಾಗ್ ಜೊತೆ ಏಳೆಂಟು ಸಿನಿಮಾಗಳಲ್ಲಿ ನಟಿಸಿ, ಅವರೊಡನೆ ಸಮಯ ಕಳೆದಂಥ ಅನುಭವ, ಅವರಿಂದ ಕಲಿತದ್ದು ಸಾಕಷ್ಟಿದೆ. ಮತ್ತೊಮ್ಮೆ ಅಭಿನಂದನೆಗಳು ಅನಂತ್ ನಾಗ್ ಸರ್. ಇನ್ನಷ್ಟು ಉನ್ನತ ಪ್ರಶಸ್ತಿ, ಪುರಸ್ಕಾರ ಮತ್ತು ಗೌರವ ನಿಮ್ಮನ್ನು ಅರಸಿ ಬರಲಿ. ಕನ್ನಡ ಚಿತ್ರರಂಗಕ್ಕೆ ನೀವು ಸಲ್ಲಿಸಿರುವ ಸೇವೆ ಭಾರತಾದ್ಯಂತ ಪಸರಿಸಲಿ’ ಎಂದು ಹೇಳಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:43 pm, Tue, 25 February 25