ಅಮ್ಮನ ಸೀರೆ ಧರಿಸಿ ಬಂದ ಸುಧಾರಾಣಿ; ಇದರಲ್ಲಿವೆ ಎಂದೂ ಮಾಸದ ನೆನಪುಗಳು
ಹಿರಿಯ ನಟಿ ಸುಧಾರಾಣಿ ಅವರು ತಾಯಿಯ ಸೀರೆಯನ್ನು ಧರಿಸಿದ್ದಾರೆ. ಆ ಸೀರೆಯ ಜೊತೆ ಇರುವ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಈ ವಿಚಾರವನ್ನು ಬರೆದುಕೊಂಡಿದ್ದಾರೆ. ಅಮ್ಮನ ನೆನಪಿನಲ್ಲಿ ಅವರು ಈ ಭಾವುಕವಾದ ಪೋಸ್ಟ್ ಮಾಡಿದ್ದಾರೆ. ಎಲ್ಲರಿಗೂ ತಾಯಿಯ ನೆನಪನ್ನು ತರಿಸುವಂತಿದೆ ಸುಧಾರಾಣಿ ಅವರ ಈ ಬರಹ..

ಮೊನ್ನೆ ಜೀ ಟಿವಿಯ ಸರಿಗಮಪ ಕಾರ್ಯಕ್ರಮಕ್ಕೆ ಹೋಗೋದಕ್ಕೆ ಯಾವ ಸೀರೆ ಉಟ್ಕೊಳ್ಳೋದು ಅಂತ ಹುಡುಕ್ತಾ ಇದ್ದಾಗ ಕಬೋರ್ಡ್ನಲ್ಲಿ ಅಮ್ಮನ ಈ ಸೀರೆ ಕಣ್ಣಿಗೆ ಬಿತ್ತು. ಈ ಸೀರೆ ನೋಡಿದ ತಕ್ಷಣ ನೆನಪಿನ ಹೂಗುಚ್ಛ ನನ್ನ ಕಣ್ಮುಂದೆ ಬರೋದಕ್ಕೆ ಶುರುವಾಯ್ತು. ತುಂಬಾ ವರ್ಷಗಳ ಹಿಂದೆ ಅಮ್ಮನ ಜೊತೆ ಸೀರೆ ಶಾಪಿಂಗ್ಗೆ ಅಂತ ಹೋಗಿದ್ದಿರಬಹುದು. ಆಗ ಅಕುಲ್ ಬಾಲಾಜಿ ಅವರ ತಂದೆಯ ಅಂಗಡಿಯಲ್ಲಿ ಈ ಸೀರೆ ತಗೊಂಡಿದ್ದಿರಬಹುದು. ಅಮ್ಮ ಈ ಸೀರೆನ ತುಂಬಾ ಇಷ್ಟಪಟ್ಟು ಈ ಕಾಂಬಿನೇಷನ್ ಚೆನ್ನಾಗಿದೆ ಅಂತ ಮೊದಲು ಈ ಸೀರೆನ ಆಯ್ಕೆ ಮಾಡಿಟ್ಕೊಂಡಿದ್ದರಬಹುದು. ಇದು ಅವಳ ಫೇವರಿಟ್ ಸೀರೆ ಆಗಿದ್ರಿಂದ ಸುಮಾರು ಬೇರೆ ಬೇರೆ ಸಂದರ್ಭಗಳಲ್ಲಿ ಈ ಸೀರೆ ಉಟ್ಟಿದ್ದಿರಬಹುದು.
ಹೀಗೆ ಎಲ್ಲಾ ನೆನೆಪುಗಳು ಮರುಕಳಿಸ್ತು. ಆಗಲೇ ನಿರ್ಧಾರ ಮಾಡಿದೆ ಕಾರ್ಯಕ್ರಮಕ್ಕೆ ಈ ಸೀರೆನೇ ಉಡೋದು ಅಂತ. ಆ ಲೈಟ್ಗಳ ಮಧ್ಯ, ಅಲ್ಲಿರೋ ವೈಭವದ ಮಧ್ಯ ಈ ಸೀರೆ ಸಿಂಪಲ್ ಆಗಿ ಕಾಣಬಹುದು ಅನ್ನೋ ಒಂದು ಯೋಚನೆ ಕೂಡ ಮನಸ್ಸಿಗೆ ಬಂತು. ಆದ್ರು ಪರ್ವಾಗಿಲ್ಲ ಈ ಸೀರೆನೇ ಉಡಬೇಕು ಅಂತ ನಿರ್ಧಾರ ಮಾಡ್ಬಿಟ್ಟೆ. ಯಾಕಂದ್ರೆ.. ಗೊತ್ತಿಲ್ಲ.
ಅಮ್ಮ ಕಡೇ ಬಾರಿ ಈ ಸೀರೆ ಉಟ್ಟು ಹಾಗೆ ಇಟ್ಬಿಟ್ಟಿದ್ಲು ಅನ್ಸತ್ತೆ. ಈ ಸೀರೆ ಉಟ್ಟಾಗ ಅವಳು ಬಳಸುತ್ತಾ ಇದ್ದಂಥ ಟಾಲ್ಕಮ್ ಪೌಡರ್, ಅವಳ ಪರ್ಫ್ಯೂಮ್ ಅದೆಲ್ಲ ಇದ್ದು ಇಲ್ಲದ ಹಾಗೆ, ಆ ಸುವಾಸನೆ ಅಮ್ಮನ ಸೀರೆಯಲ್ಲಿ ಇನ್ನೂ ಇತ್ತು. ಈ ಸೀರೆ ನೋಡಿದರೆ ಗೊತ್ತಾಗತ್ತೆ, ಬಹಳಷ್ಟು ಸಾರಿ ಅವಳು ಈ ಸೀರೆ ಉಟ್ಟಿದ್ದರೂ ರೇಷ್ಮೆಯಲ್ಲಿ ಒಂದು ಮೃದುತನ ಇದೆ. ಅದರ ಜೊತೆಗೆ ಅಷ್ಟು ಸಾರಿ ಉಪಯೋಗಿಸಿದ್ರೂ ರೇಷ್ಮೆಯಲ್ಲಿರೋ ಆ ಗಟ್ಟಿತನ ಕೂಡ ಮಾಸಿಲ್ಲ. ಇದೆಲ್ಲವೂ ಸೀರೆಯ ಗುಣವಲ್ಲ, ಅವಳ ಗುಣವನ್ನ ಸೀರೆಯ ಮೂಲಕ ತೋರಿಸ್ತಾ ಇದೆ ಅನ್ನೋ ಹಾಗಿದೆ. ಅವಳಲ್ಲಿದ್ದ ಆ ಮೃದುತನ, ಗಟ್ಟಿತನ ಸೀರೆಯ ಮೂಲಕ ಎದ್ದು ಕಾಣ್ತಿರೋ ಹಾಗಿತ್ತು.
View this post on Instagram
ಸೀರೆ ಮೇಲೆ ಅಷ್ಟೊಂದು ಲೈಟ್ಸ್ ಬಿದ್ದಾಗ ಆ ರೇಷ್ಮೆಯ ಮೇಲೊಂದು ಕಾಂತಿ, ತೇಜಸ್ಸು ಇತ್ತು. ಇದೆಲ್ಲ ಅಮ್ಮನ ಕಾಂತಿ, ಅವಳ ಮುಖದ ತೇಜಸ್ಸು ಹೊಳಪನ್ನ ತೋರಿಸ್ತಿತ್ತು. ಅವಳು ಜೀವನದಲ್ಲಿ ನೋಡಿದಂಥ ಏಳುಬೀಳುಗಳು, ಸುಖ ದುಃಖಗಳು, ನೋವು ನಲಿವುಗಳು ಎಲ್ಲವೂ ಈ ಸೀರೆಯಲ್ಲಿ ಕಾಣ್ತಿತ್ತು. ಅದೇ ರೀತಿ, ಅದೆಲ್ಲವನ್ನೂ ಮೀರಿ, ಕಷ್ಟಗಳನ್ನು ಗೆದ್ದು, ಅವಳು ಧೈರ್ಯವಾಗಿ ನಡೆದುಬಂದ ಪ್ರಯಾಣದ ಹಾದಿ ಕಾಣಿಸ್ತಾ ಇತ್ತು. ‘ಇದನ್ನೆಲ್ಲ ನೀನು ಜಯಿಸಿದ್ದೀಯಾ, ನಿನಗೆ ದೃಷ್ಟಿ ಬೀಳದೇ ಇರಲಿ’ ಅಂತ ಈ ಸೃಷ್ಟಿ ಅಮ್ಮನಿಗೆ ಹೇಳ್ತಿರೋ ಸಂಕೇತವೇ ಈ ಸೀರೆಯಲ್ಲಿರೋ ಕಪ್ಪು ಬಣ್ಣದ ಸೆರಗು, ಕಪ್ಪು ಅಂಚು ಅನ್ನಿಸ್ತಾ ಇತ್ತು.
ಇದನ್ನೂ ಓದಿ: ಶಿವಣ್ಣಗೆ ಪ್ರೀತಿಯ ಅಪ್ಪುಗೆ ಕೊಟ್ಟ ಸುಧಾರಾಣಿ; ಸಾವು ಗೆದ್ದು ಬಂದಿದ್ದಕ್ಕೆ ಭವ್ಯ ಸ್ವಾಗತ
ಈ ಸೀರೆ ಉಟ್ಟಾಗ ಅವಳೇ ನನ್ನನ್ನ ಅಪ್ಪಿಹಿಡಿದು ಮಡಿಲಲ್ಲಿ ಕೂರಿಸಿಕೊಂಡು ಅವಳ ಬದುಕಿನ ಅನುಭವದ ಪಾಠವನ್ನ ನನಗೆ ಕಲಿಸುತ್ತಿರೋ ಹಾಗೆ ಭಾಸವಾಯ್ತು. ಇಂಥದ್ದೊಂದು ವಿಶೇಷವಾದ ಸೀರೆ ಉಟ್ಟಾಗ ನನಗೆ ಅನ್ನಿಸಿದ್ದು ಒಂದೇ. ಅಮ್ಮನ ಪ್ರೀತಿಯ ಮುಂದೆ, ಆ ಭಾವನೆಗಳ ಮುಂದೆ ಬೇರೆ ಯಾವುದೇ ಹೊಸ ಡಿಸೈನರ್ ಸೀರೆ ಆಗ್ಲಿ, ಬ್ರ್ಯಾಂಡೆಡ್ ಬಟ್ಟೆ ಆಗ್ಲಿ ಸರಿಸಮವಲ್ಲ. ಅಮ್ಮನ ಅಪ್ಪುಗೆಯ ಅನುಭವ ಕೊಡೋ ಸೀರೆ ಎದುರು ಇನ್ಯಾವುದು ನಿಲ್ಲೋದಿಲ್ಲ, ಬೆಲೆ ಬಾಳೋದಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




