ಸಿನಿಮಾ ಮೇಕಿಂಗ್ ಎಂಬುದು ದಿನದಿನಕ್ಕೂ ಬದಲಾಗುತ್ತಿರುವ ಪ್ರಕ್ರಿಯೆ. ಕಪ್ಪು ಬಿಳುಪಿನ ಕಾಲದ ಸಿನಿಮಾ ಮೇಕಿಂಗ್ಗೂ ಈಗಿನ ಸಿನಿಮಾ ನಿರ್ಮಾಣ ಶೈಲಿಗೂ ಊಹಿಸಲು ಸಾಧ್ಯವಾಗದಷ್ಟು ವ್ಯತ್ಯಾಸ ಇದೆ. ದಿನದಿಂದ ದಿನಕ್ಕೆ ಹೊಸ ತಂತ್ರಜ್ಞಾನಗಳು, ಹೊಸ ನಿಯಮಗಳು, ಹೊಸ ಸಲಕರಣೆಗಳು ಸೇರ್ಪಡೆ ಆಗುತ್ತಲೇ ಇವೆ. ಅದೆಲ್ಲವನ್ನೂ ಒಂದೇ ಸೂರಿನಡಿಯಲ್ಲಿ ಒದಗಿಸಿಕೊಡುವ ಭರವಸೆಯೊಂದಿಗೆ ಅರ್ಗಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯು ಕನ್ನಡದಲ್ಲಿ ಕಾರ್ಯಾರಂಭ ಮಾಡಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಅದರಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರಮುಖರು ಭಾಗವಹಿಸಿದ್ದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಮಾಜಿ ಅಧ್ಯಕ್ಷ ಸಾರಾ ಗೋವಿಂದು, ನಿರ್ಮಾಪಕ ಕೆ. ಮಂಜು, ಹಿರಿಯ ನಿರ್ದೇಶಕ ನಾಗಣ್ಣ, ಎನ್.ಎಂ. ಸುರೇಶ್ ಸೇರಿದಂತೆ ಅನೇಕರು ಈ ಕಾರ್ಯಕ್ರಮಕ್ಕೆ ಹಾಜರಿ ಹಾಕಿದ್ದರು. ಕನ್ನಡ ಚಿತ್ರರಂಗಕ್ಕೆ ಈ ಸಂಸ್ಥೆ ಯಾವ ರೀತಿ ನೆರವಾಗಬಹುದು ಎಂಬ ಬಗ್ಗೆ ಎಲ್ಲರೂ ತಮ್ಮ ಮಾತುಗಳನ್ನು ಹಂಚಿಕೊಂಡರು.
ವಿದೇಶದಲ್ಲಿ ಸಿನಿಮಾ ಚಿತ್ರೀಕರಣ ಮಾಡುವುದು ಇಂದು ಅಷ್ಟು ಸುಲಭವಿಲ್ಲ. ಸ್ಟಾರ್ ನಟರ ಸಿನಿಮಾ ತಂಡಗಳು ಕೂಡ ವಿದೇಶಿ ನೆಲದಲ್ಲಿ ತೊಂದರೆ ಅನುಭವಿಸಿದ ಉದಾಹರಣೆ ಸಾಕಷ್ಟಿದೆ. ಅಂತಹ ಅಡ್ಡಿ ಆತಂಕಗಳು ಎದುರಾಗದ ರೀತಿಯಲ್ಲಿ ನಿರ್ಮಾಪಕರಿಗೆ ನೆರವಾಗುವುದಾಗಿ ಅರ್ಗಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಹೇಳಿಕೊಂಡಿದೆ. ಅಲ್ಲದೆ, ಸಿನಿಮಾ ನಿರ್ಮಾಣಕ್ಕೆ ಬೇಕಾಗುವ ಎಲ್ಲ ಸೌಕರ್ಯಗಳನ್ನು ನಿರ್ಮಾಪಕರಿಗೆ ಒದಗಿಸಿಕೊಡಲು ಸಜ್ಜಾಗಿದೆ.
ಉದ್ಘಾಟನೆ ಬಳಿಕ ಸಾ. ರಾ. ಗೋವಿಂದು ಮಾತನಾಡಿದರು. ‘ಕನ್ನಡ ಚಿತ್ರರಂಗ ತುಂಬಾ ಕಷ್ಟದಲ್ಲಿದೆ. ವಿದೇಶದಲ್ಲಿ ಚಿತ್ರೀಕರಣ ಮಾಡುವಾಗ ತುಂಬ ಮೋಸಕ್ಕೆ ಒಳಗಾಗಬೇಕಾಗುತ್ತದೆ. ಈ ಸಂಸ್ಥೆಯಿಂದ ಅಂಥ ಸಮಸ್ಯೆ ನಿವಾರಣೆ ಆಗುವುದಾದರೆ ನಾವೆಲ್ಲ ಕೂತು ಚರ್ಚೆ ಮಾಡೋಣ. ನಮ್ಮ ನಿರ್ಮಾಪಕರಿಗೆ ಅನುಕೂಲ ಆಗುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಿ. ನಿಮ್ಮಿಂದ ಚಿತ್ರರಂಗಕ್ಕೆ ಉಪಯೋಗವಾಗಲಿ. ಒಂದೇ ಸೂರಿನಡಿ ಎಲ್ಲ ಅನುಕೂಲ ಸಿಗುವಂತಾಗಲಿ ಅಂತ ನಾವು ಸರ್ಕಾರಕ್ಕೆ ಮನವಿ ಮಾಡಿದ್ದೆವು. ಅದಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ’ ಎಂದು ಸಾರಾ ಗೋವಿಂದು ಹೇಳಿದರು.
ಅರ್ಗಸ್ ಎಂಟರ್‌ಟೈನ್‌ಮೆಂಟ್ ಸಂಸ್ಥಾಪಕರಾದ ಸುದಿಪ್ತೋ ಚಟರ್ಜಿ, ಸಹ ಸ್ಥಾಪಕರಾದ ಜೈರಾಜ ಸಿಂಗ್ ಶೇಖಾವತ್ ಹಾಗೂ ವ್ಯವಸ್ಥಾಪಕರಾದ ಖುಷಿರಾಜ ಸಿಂಗ್ ಶೇಖಾವತ್ ಈ ಕಾರ್ಯಕ್ರಮದಲ್ಲಿ ಹಾಜರಿದ್ದು ಸಂಸ್ಥೆ ಬಗ್ಗೆ ಮಾಹಿತಿ ಹಂಚಿಕೊಂಡರು. ಅರ್ಗಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ನೀಡಲಿರುವ ಸೌಲಭ್ಯಗಳ ಬಗ್ಗೆ ಕನ್ನಡ ಚಿತ್ರರಂಗದ ನಿರ್ಮಾಪಕರ ಜೊತೆ ಚರ್ಚಿಸುವುದಾಗಿ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ತಿಳಿಸಿದರು.
ಇದನ್ನೂ ಓದಿ:
ರಾತ್ರಿ ಕರ್ಫ್ಯೂ ಎಫೆಕ್ಟ್; ನೈಟ್ ಶೋಗಳು ರದ್ದು, ಮತ್ತೆ ಸಂಕಷ್ಟದಲ್ಲಿ ಕನ್ನಡ ಚಿತ್ರರಂಗ
‘ಕನ್ನಡ ಚಿತ್ರರಂಗ ಅತಿ ಕಳಪೆ’ ಎಂದವರಿಗೆ ಚೇತನ್ ಬೆಂಬಲ; ಖಡಕ್ ಎಚ್ಚರಿಕೆ ಕೊಟ್ಟ ರಕ್ಷಿತ್ ಶೆಟ್ಟಿ
Published On - 5:01 pm, Tue, 7 September 21