ರಾತ್ರಿ ಕರ್ಫ್ಯೂ ಎಫೆಕ್ಟ್; ನೈಟ್ ಶೋಗಳು ರದ್ದು, ಮತ್ತೆ ಸಂಕಷ್ಟದಲ್ಲಿ ಕನ್ನಡ ಚಿತ್ರರಂಗ
ಸದ್ಯ ಚಿತ್ರಮಂದಿರಗಳಲ್ಲಿ ಶೇ. 50 ಆಸನ ಭರ್ತಿಗೆ ಮಾತ್ರ ಅವಕಾಶವಿದೆ. ಇದರ ಮಧ್ಯೆಯೂ ನಿರ್ಮಾಪಕರು ಸಿನಿಮಾ ರಿಲೀಸ್ ಮಾಡೋಕೆ ಮುಂದಾಗಿದ್ದಾರೆ.
ಕೊವಿಡ್ ಎರಡನೇ ಅಲೆಯ ಅಬ್ಬರ ನಿಧಾನವಾಗಿ ಕಡಿಮೆ ಆಗುತ್ತಿದೆ ಎನ್ನುವಾಗಲೇ ಮೂರನೇ ಅಲೆ ಕಾಣಿಸಿಕೊಳ್ಳುವ ಮುನ್ಸೂಚನೆ ಸಿಕ್ಕಿದೆ. ನಿಧಾನವಾಗಿ ಕೊವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಇದು ರಾಜ್ಯ ಸರ್ಕಾರವನ್ನು ಆತಂಕಕ್ಕೆ ಈಡು ಮಾಡಿದೆ. ಈ ಕಾರಣಕ್ಕೆ ಸರ್ಕಾರ ಈಗಲೇ ಕಾರ್ಯಪ್ರವೃತ್ತವಾಗಿದ್ದು, ರಾಜ್ಯದೆಲ್ಲೆಡೆ ನೈಟ್ ಕರ್ಫ್ಯೂ ಜಾರಿ ಮಾಡಿದೆ. ರಾಜ್ಯದ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಇರಲಿದೆ. ಇದರನ್ವಯ ರಾತ್ರಿ 9ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ಇದು ನೇರವಾಗಿ ಚಿತ್ರರಂಗದ ಮೇಲೆ ಪ್ರಭಾವ ಬೀರಿದೆ.
ಕೊವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿತ್ತು. ಈ ವೇಳೆ ಚಿತ್ರಮಂದಿರಗಳು ಮುಚ್ಚಿದ್ದವು. ಹಂತ ಹಂತವಾಗಿ ಲಾಕ್ಡೌನ್ ತೆರವು ಮಾಡಲಾಗಿತ್ತು. ಸದ್ಯ ಚಿತ್ರಮಂದಿರಗಳಲ್ಲಿ ಶೇ. 50 ಆಸನ ಭರ್ತಿಗೆ ಮಾತ್ರ ಅವಕಾಶವಿದೆ. ಇದರ ಮಧ್ಯೆಯೂ ನಿರ್ಮಾಪಕರು ಸಿನಿಮಾ ರಿಲೀಸ್ ಮಾಡೋಕೆ ಮುಂದಾಗಿದ್ದಾರೆ. ಆದರೆ, ಈಗ ನೈಟ್ ಕರ್ಫ್ಯೂ ನಿರ್ಮಾಪಕರಿಗೆ ಸಂಕಷ್ಟ ತಂದಿದೆ.
ಮೂರನೇ ಅಲೆ ಭೀತಿಗೆ ಗಾಂಧೀನಗರದ ಮಂದಿಗೆ ಸಂಕಷ್ಟ ಶುರುವಾಗಿದೆ. ಇಂದು (ಆಗಸ್ಟ್ 6) ರಾಜ್ಯಾದ್ಯಂತ ‘ಕಲಿವೀರ’ ಹೆಸರಿನ ಸಿನಿಮಾ ರಿಲೀಸ್ ಆಗಿತ್ತು. ವೀಕೆಂಡ್ ಸಂದರ್ಭದಲ್ಲಿ ಜನರು ರಾತ್ರಿ ಶೋಗೆ ಹೋಗೋಕೆ ಇಷ್ಟಪಡುತ್ತಾರೆ. ಆದರೆ, ನೈಟ್ ಕರ್ಪ್ಯೂ ಹಿನ್ನೆಲೆಯಲ್ಲಿ ನೈಟ್ ಶೋ ಕ್ಯಾನ್ಸಲ್ ಆಗಲಿದೆ. ಇನ್ನು, ರಾಜ್ಯದ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಹೇರಲು ನಿರ್ಧರಿಸಲಾಗಿದೆ. ಇದರಿಂದ ಈ ಜಿಲ್ಲೆಗಳಲ್ಲಿ ಎರಡು ದಿನ ಶೋಗೆ ಬ್ರೇಕ್ ಬೀಳಲಿದೆ.
ಈಗಾಗಲೇ ಸ್ಟಾರ್ ಸಿನಿಮಾಗಳು ರಿಲೀಸ್ಗೆ ರೆಡಿ ಇವೆ. ‘ಸಲಗ’ ಸಿನಿಮಾ ಸ್ಯಾಂಡಲ್ವುಡ್ನ ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಇಷ್ಟು ದಿನ ನಾಯಕ ನಟನಾಗಿ ಗುರುತಿಸಿಕೊಂಡಿದ್ದ ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಆಗಸ್ಟ್ 20ರಂದು ‘ಸಲಗ’ ರಿಲೀಸ್ ಆಗುತ್ತಿದೆ. ಇನ್ನು, ಗಣೇಶ ಚತುರ್ಥಿ ಪ್ರಯುಕ್ತ ಸೆಪ್ಟೆಂಬರ್ 10ರಂದು ಶಿವರಾಜ್ ಕುಮಾರ್ ನಟನೆಯ ‘ಭಜರಂಗಿ 2’ ಚಿತ್ರ ರಿಲೀಸ್ ಆಗುತ್ತಿದೆ. ಒಂದೊಮ್ಮೆ ನೈಟ್ ಕರ್ಫ್ಯೂ ಮುಂದುವರಿದರೆ, ಈ ಸಿನಿಮಾಗಳು ರಿಲೀಸ್ ದಿನಾಂಕ ಮುಂದೂಡಬಹುದು.
ಇದನ್ನೂ ಓದಿ: ‘ನೀವು ಗೆದ್ದು ಬನ್ನಿ’; ಫಿನಾಲೆ ತಲುಪಿದ ಮಂಜುಗೆ ಶಿವರಾಜ್ಕುಮಾರ್ ವಿಶೇಷ ಹಾರೈಕೆ
ಬಿಗ್ ಬಾಸ್ ಫಿನಾಲೆಯಲ್ಲಿ ಅರವಿಂದ್ ಕೆಪಿ ಗೆಲುವಿಗೂ, ಸೋಲಿಗೂ ಕಾರಣವಾಗಬಹುದು ಈ ಅಂಶಗಳು
Published On - 5:02 pm, Fri, 6 August 21