‘ಸರೋಜಾದೇವಿ ರೀತಿಯ ವ್ಯಕ್ತಿ ಮತ್ತೆ ಸಿಗಲ್ಲ’: ಭಾವುಕರಾದ ಅರ್ಜುನ್ ಸರ್ಜಾ

ನಟಿ ಬಿ. ಸರೋಜಾದೇವಿ ಅವರು ನಿಧನರಾಗಿದ್ದು, ಅವರ ಅಂತಿಮ ದರ್ಶನ ಪಡೆಯಲು ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದಾರೆ. ಬಹುಭಾಷಾ ನಟ ಅರ್ಜುನ್ ಸರ್ಜಾ ಅವರು ಕೂಡ ಅಂತಿಮ ದರ್ಶನ ಪಡೆದು, ಸರೋಜಾದೇವಿ ಬಗ್ಗೆ ಮಾತನಾಡಿದರು. ಸರೋಜಾದೇವಿಯ ವ್ಯಕ್ತಿತ್ವ ಎಂಥದ್ದು ಎಂಬುದನ್ನು ಅರ್ಜುನ್ ಸರ್ಜಾ ಅವರು ವಿವರಿಸಿದರು.

‘ಸರೋಜಾದೇವಿ ರೀತಿಯ ವ್ಯಕ್ತಿ ಮತ್ತೆ ಸಿಗಲ್ಲ’: ಭಾವುಕರಾದ ಅರ್ಜುನ್ ಸರ್ಜಾ
Arjun Sarja, B Saroja Devi

Updated on: Jul 14, 2025 | 10:52 PM

ಸೋಮವಾರ (ಜುಲೈ 14) ನಿಧನರಾದ ಹಿರಿಯ ನಟಿ ಬಿ. ಸರೋಜಾದೇವಿ (B Saroja Devi) ಅವರ ಅಂತಿಮ ದರ್ಶನವನ್ನು ಅರ್ಜುನ್ ಸರ್ಜಾ ಪಡೆದುಕೊಂಡಿದ್ದಾರೆ. ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ‘ಕನ್ನಡ ಚಿತ್ರರಂಗದ ಒಂದು ದೊಡ್ಡ ಅಧ್ಯಾಯ ಇಂದು ಮುಗಿದಿದೆ. ಬಿ. ಸರೋಜಾದೇವಿ ಅವರು ಕನ್ನಡ ಚಿತ್ರರಂಗದ ಮಾತೃಸ್ವರೂಪ ಎಂದರೆ ತಪ್ಪಾಗಲ್ಲ. ತುಂಬಲಾರದ ನಷ್ಟ ಎಂಬ ಪದವನ್ನು ಎಲ್ಲರೂ ಉಪಯೋಗಿಸುತ್ತಾರೆ. ಆದರೆ, ಅದರ ನಿಜವಾದ ಅರ್ಥ ನಮಗೆ ಭಾಸವಾಗುವುದು ಸರೋಜಮ್ಮನ ರೀತಿಯ ವ್ಯಕ್ತಿಗಳು ನಿಧನರಾದಾಗ. ಅವರ ನಟನೆ ಬಗ್ಗೆ ಮಾತನಾಡಬೇಕಾ, ಅವರ ವ್ಯಕ್ತಿತವದ ಬಗ್ಗೆ ಮಾತನಾಡಬೇಕಾ? ಎಲ್ಲದರಲ್ಲೂ ಅವರು ಪರಿಪೂರ್ಣ ವ್ಯಕ್ತಿ ಆಗಿದ್ದರು’ ಎಂದು ಅರ್ಜುನ್ ಸರ್ಜಾ (Arjun Sarja) ಹೇಳಿದ್ದಾರೆ.

‘ನಮಗೆ ತುಂಬಾ ಹತ್ತಿರವಾದಂಥವರು. ಸ್ವಲ್ಪ ವರ್ಷಗಳ ಹಿಂದೆ ತಮಿಳು ಸಿನಿಮಾದಲ್ಲಿ ಅವರ ಜೊತೆ ನಟನೆ ಮಾಡಿದ್ದೇನೆ. ನಮ್ಮ ಕುಟುಂಬಕ್ಕೆ, ನಮ್ಮ ಮಕ್ಕಳಿಗೆ, ನನ್ನ ಹೆಂಡತಿಗೆ ಅವರು ಎಂದರೆ ಪ್ರಾಣ. ವ್ಯಕ್ತಿತ್ವದ ಕಾರಣಕ್ಕಾಗಿ ಅವರು ನಮಗೆ ಅಷ್ಟೊಂದು ಇಷ್ಟ. ರಾಜ್​ಕುಮಾರ್, ಕಲ್ಯಾಣ್​ಕುಮಾರ್, ಎಂಜಿಆರ್​, ಶಿವಾಜಿ ಗಣೇಶನ್, ಎನ್​ಟಿಆರ್​ ಅವರಂತಹ ದೊಡ್ಡ ಹೀರೋಗಳ ಜೊತೆ ನಟಿಸಿದರೂ ಗರ್ವ ಎಂಬುದು ಅವರಿಗೆ ಕಿಂಚಿತ್ತೂ ಇರಲಿಲ್ಲ’ ಎಂದಿದ್ದಾರೆ ಅರ್ಜುನ್ ಸರ್ಜಾ.

‘ಕೊನೆಯವರೆಗೂ ಅವರಲ್ಲಿ ಮುಗ್ಧತೆ ಇತ್ತು. ಅದಕ್ಕಾಗಿಯೇ ಅವರನ್ನು ಅಷ್ಟೊಂದು ಪ್ರೀತಿಸುತ್ತಿದ್ದರು. ಸರೋಜಮ್ಮ ಇನ್ನಿಲ್ಲ ಎಂಬ ವಿಷಯ ತಿಳಿದ ಕೂಡಲೇ ಹೇಗೆ ಪ್ರತಿಕ್ರಿಯಿಸಬೇಕು ಎಂಬುದೇ ತಿಳಿಯಲಿಲ್ಲ. ಜೀರ್ಣಿಸಿಕೊಳ್ಳಲು ಆಗದಷ್ಟು ಸತ್ಯ ಆಯಿತು ಇದು. ಅವರು ಚೆನ್ನೈಗೆ ಬಂದಾಗಲೆಲ್ಲ ಅವರನ್ನು ನಮ್ಮ ಮನೆಗೆ ಕರೆದುಕೊಂಡು ಬರುತ್ತಿದೆ. ಮಗನೇ ಮಗನೇ ಎಂದು ಬಾಯಿತುಂಬ ಕರೆಯುತ್ತಿದ್ದರು. ಅವರನ್ನು ಕಂಡಾಗ ನಮ್ಮ ತಾಯಿಯನ್ನು ಕಂಡಷ್ಟೇ ತೃಪ್ತಿ ಆಗುತ್ತಿತ್ತು’ ಎಂದು ಅರ್ಜುನ್ ಸರ್ಜಾ ಹೇಳಿದ್ದಾರೆ.

ಇದನ್ನೂ ಓದಿ
‘ಅತ್ಯಂತ ದುಃಖವಾಗಿದೆ’: ಬಿ. ಸರೋಜಾದೇವಿ ನಿಧನಕ್ಕೆ ಕಂಬನಿ ಮಿಡಿದ ನಟ ದರ್ಶನ್
ಸರೋಜಾದೇವಿ ಅವರೊಂದಿಗಿನ ನೆನಪಿನ ಬುತ್ತಿ ಬಿಚ್ಚಿಟ್ಟ ನಟ ಜಗ್ಗೇಶ್
ಪುನೀತ್ ನನ್ನ ಮಗ ಆಗಿರಬೇಕಿತ್ತು ಎಂದುಕೊಂಡಿದ್ದ ಸರೋಜಾ ದೇವಿ
ತಾಯಿಗೆ ಕೊಟ್ಟ ಮಾತನ್ನು ಕೊನೆವರೆಗೂ ಉಳಿಸಿಕೊಂಡ ಸರೋಜಾ ದೇವಿ

‘ಸರೋಜಾದೇವಿ ಅವರು ಕೇವಲ ನಟಿ ಮಾತ್ರ ಆಗಿರಲಿಲ್ಲ. ಎಷ್ಟೋ ಜನರಿಗೆ ಒಳ್ಳೆಯದು ಮಾಡಬೇಕು ಎಂಬ ಮನಸ್ಸು ಅವರಲ್ಲಿತ್ತು. ಅದು ತುಂಬ ವಿರಳವಾದ ಕಾಂಬಿನೇಷನ್. ಎಷ್ಟು ಬೇಕಾದರೂ ಅವರ ಗುಣಗಾನ ಮಾಡಬಹುದು. ಅವರು ಬಿಟ್ಟು ಹೋದ ಎಷ್ಟೋ ಒಳ್ಳೆಯ ವಿಷಯಗಳು ಅವರ ಮನೆ ತುಂಬ ತುಳುಕಾಡುತ್ತಿವೆ. ನನ್ನಂತಹ ಎಷ್ಟೋ ಜನರಿಗೆ ಅವರು ಸ್ಫೂರ್ತಿ ಆಗಿದ್ದಾರೆ’ ಎಂದು ಅರ್ಜುನ್ ಅರ್ಜಾ ಅವರು ಭಾವುಕವಾಗಿ ಮಾತನಾಡಿದ್ದಾರೆ.

ಇದನ್ನೂ ಓದಿ: ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ

‘ಈ ನೋವನ್ನು ತಡೆದುಕೊಳ್ಳುವುದಕ್ಕೆ ಅವರ ಕುಟುಂಬಕ್ಕೆ ಮತ್ತು ನಮಗೆ ಆ ದೇವರು ಶಕ್ತಿ ನೀಡಲಿ. ಅವರು ತುಂಬಾ ಅಪರೂಪದ ಮಹಿಳೆ ಆಗಿದ್ದರು. ಸರೋಜಮ್ಮನ ರೀತಿಯ ವ್ಯಕ್ತಿಗಳನ್ನು ಮತ್ತೆ ನೋಡೋಕೆ ಆಗಲ್ಲ. ಅವರನ್ನು ನಾನು ನಿಜಕ್ಕೂ ಮಿಸ್ ಮಾಡಿಕೊಳ್ಳುತ್ತೇನೆ’ ಎಂದಿದ್ದಾರೆ ಅರ್ಜುನ್ ಸರ್ಜಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.