ಪ್ರತಿಷ್ಠಿತ ‘ಪಿ.ಆರ್.ಕೆ ಪ್ರೊಡಕ್ಷನ್ಸ್’ (PRK Productions) ನಿರ್ಮಾಣ ಸಂಸ್ಥೆಯ ಮೂಲಕ ಮೂಡಿಬಂದಿರುವ ‘O2’ ಸಿನಿಮಾ (O2 Movie) ಬಿಡುಗಡೆಗೆ ಸಜ್ಜಾಗಿದೆ. ಈ ಹೊಸ ಸಿನಿಮಾ ಏಪ್ರಿಲ್ 19ರಂದು ತೆರೆ ಕಾಣಲಿದೆ. ವಿಶೇಷ ಏನೆಂದರೆ, ಇದು ಕುತೂಹಲಕಾರಿ ಮೆಡಿಕಲ್ ಥ್ರಿಲ್ಲರ್ ಕಹಾನಿ ಹೊಂದಿರುವ ಸಿನಿಮಾ. ಕನ್ನಡದಲ್ಲಿ ಈ ಪ್ರಕಾರದ ಸಿನಿಮಾಗಳು ವಿರಳ. ಈ ಸಿನಿಮಾದ ಕಥೆಯಲ್ಲಿ ಬರೀ ಥ್ರಿಲ್ಲರ್ ಅಂಶಗಳು ಮಾತ್ರವಲ್ಲದೇ ಪ್ರೀತಿ-ಪ್ರೇಮದ ಎಳೆ ಕೂಡ ಇರಲಿದೆ. ಹಾಗಾಗಿ ‘O2’ ಸಿನಿಮಾವನ್ನು ಲವ್ ಥ್ರಿಲ್ಲರ್ ಸಿನಿಮಾ ಎಂದು ಕರೆಯುತ್ತಿದೆ ಚಿತ್ರತಂಡ. ಈ ಸಿನಿಮಾದಲ್ಲಿ ಪ್ರವೀಣ್ ತೇಜ್, ಆಶಿಕಾ ರಂಗನಾಥ್ (Ashika Ranganath), ರಾಘವ್ ನಾಯಕ್, ಪ್ರಕಾಶ್ ಬೆಳವಾಡಿ, ಸಿರಿ ರವಿಕುಮಾರ್ ಮುಂತಾದವರು ನಟಿಸಿದ್ದಾರೆ.
ಪುನೀತ್ ರಾಜ್‌ಕುಮಾರ್ ಆರಂಭಿಸಿದ ‘ಪಿ.ಆರ್.ಕೆ ಪ್ರೊಡಕ್ಷನ್ಸ್’ ಸಂಸ್ಥೆಯು ಮೊದಲಿನಿಂದಲೂ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಾ ಬಂದಿದೆ. ಈ ಬ್ಯಾನರ್ನಿಂದ ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಾಣ ಮಾಡಿರುವ 10ನೇ ಸಿನಿಮಾ ‘O2’. ಪ್ರಶಾಂತ್ ರಾಜ್ ಮತ್ತು ಹೀರೋ ರಾಘವ್ ನಾಯಕ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
ಈ ಸಿನಿಮಾದ ಶೀರ್ಷಿಕೆಯೇ ಭಿನ್ನವಾಗಿದೆ. ಇದರ ಕಥೆ ಕೂಡ ಡಿಫರೆಂಟ್ ಆಗಿರಲಿದೆ. ಜನರ ಜೀವ ಉಳಿಸುವುದು ವೈದ್ಯರ ಕರ್ತವ್ಯ ಎಂಬುದನ್ನು ನಂಬಿರುವ ಶ್ರದ್ಧಾ ತನ್ನ ಸಂಶೋಧನೆಯ ಫಲವಾದ O2 ಎನ್ನುವ ಡ್ರಗ್ ಮೂಲಕ ಜನರ ಪ್ರಾಣ ಉಳಿಸಲು ಪ್ರಯತ್ನಿಸುತ್ತಾಳೆ. ಈ ಕೆಲಸದಲ್ಲಿ ಹಲವು ಸಮಸ್ಯೆಗಳನ್ನು ಆಕೆ ಎದುರಿಸುತ್ತಾಳೆ. ಎಲ್ಲ ಅಡೆತಡೆ ಮೀರಿ ಗುರಿ ತಲುಪಲು ಶ್ರದ್ಧಾಗೆ ಸಾಧ್ಯವಾಗುತ್ತೋ ಅಥವಾ ಇಲ್ಲವೋ ಎಂಬುದನ್ನು ತಿಳಿಯುಲು ಪ್ರೇಕ್ಷಕರು ಸಿನಿಮಾ ನೋಡಬೇಕು. ‘O2’ ಸಿನಿಮಾದಲ್ಲಿ ಮನರಂಜನೆ ಜೊತೆ ಪ್ರೀತಿ, ವಿಜ್ಞಾನ, ಅನಿರೀಕ್ಷಿತ ಟ್ವಿಸ್ಟ್ಗಳ ಸಮಾಗಮ ಇರಲಿದೆ ಎಂದಿದೆ ಚಿತ್ರತಂಡ.
ಇದನ್ನೂ ಓದಿ: ಅಶ್ವಿನಿ ಪುನೀತ್-ಶೋಭಾ ಕರಂದ್ಲಾಜೆ ಭೇಟಿ ಬಗ್ಗೆ ಶಿವಣ್ಣ ಮೊದಲ ಪ್ರತಿಕ್ರಿಯೆ
ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ‘O2’ ಬಗ್ಗೆ ಮಾತನಾಡಿದ್ದಾರೆ. ‘ಇಂಥ ವಿಭಿನ್ನವಾದ ಸಿನಿಮಾವನ್ನು ನಿರ್ಮಿಸಿರುವುದಕ್ಕೆ ಹೆಮ್ಮೆ ಇದೆ. ಈ ಸಿನಿಮಾವನ್ನು ಪ್ರೇಕ್ಷಕರ ಮುಂದಿಡಲು ಕಾತುರದಿಂದ ಕಾಯುತ್ತಿದ್ದೇನೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶ ಹೊಂದಿರುವ ನಮ್ಮ ಪಿಆರ್ಕೆ ಸಂಸ್ಥೆಯಿಂದ ಮೂಡಿಬರುತ್ತಿರುವ ಈ ಚಿತ್ರವು ಜನರ ಮನಸ್ಸಿನಲ್ಲಿ ಉಳಿಯುತ್ತದೆ. ದೊಡ್ಡ ಮಟ್ಟದಲ್ಲಿ ಪರಿಣಾಮವನ್ನೂ ಬೀರುತ್ತದೆ ಅಂತ ನಂಬಿದ್ದೇನೆ’ ಎಂದು ಅವರು ಹೇಳಿದ್ದಾರೆ.
ವಿವಾನ್ ರಾಧಾಕೃಷ್ಣ ಅವರು ‘O2’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ನವೀನ್ ಕುಮಾರ್ ಎಸ್. ಅವರ ಛಾಯಾಗ್ರಹಣ, ದೀಪು ಎಸ್. ಕುಮಾರ್ ಅವರ ಸಂಕಲನ, ಅವಿನಾಶ್ ಎಸ್. ದಿವಾಕರ್ ಅವರ ಕಲಾ ನಿರ್ದೇಶನ, ಇಂಚರಾ ಸುರೇಶ್ ಅವರ ವಸ್ತ್ರ ವಿನ್ಯಾಸ ಈ ಸಿನಿಮಾಗೆ ಇದೆ. ಎಂ.ಆರ್. ರಾಜಕೃಷ್ಣನ್ ಅವರು ಸೌಂಡ್ ಡಿಸೈನ್ ಮಾಡಿದ್ದು, ಸೌಂಡ್ ಇಂಜಿನಿಯರ್ ಆಗಿ ಹೇಮಾ ಸುವರ್ಣ ಅವರು ಕೆಲಸ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.