ಆಸ್ಪತ್ರೆಗೆ ದಾಖಲಾದ ಶಿವರಾಜ್ಕುಮಾರ್; ಆರೋಗ್ಯ ವಿಚಾರಿಸಲು ಬಂದ ಮಧು ಬಂಗಾರಪ್ಪ
ಕಳೆದ ಒಂದಷ್ಟು ದಿನಗಳಿಂದ ನಟ ಶಿವರಾಜ್ಕುಮಾರ್ ಅವರು ತುಂಬ ಬ್ಯುಸಿ ಆಗಿದ್ದಾರೆ. ಅವರ ಪತ್ನಿ ಗೀತಾ ಶಿವರಾಜ್ಕುಮಾರ್ ಅವರು ಈ ಬಾರಿ ಶಿವಮೊಗ್ಗದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಪ್ರಚಾರದಲ್ಲಿ ಶಿವಣ್ಣ ಭಾಗಿ ಆಗುತ್ತಿದ್ದಾರೆ. ಇಂದು (ಏ.1) ಅವರು ಅನಾರೋಗ್ಯದ ಕಾರಣದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ (Shivarajkumar) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅನಾರೋಗ್ಯದ ಕಾರಣದಿಂದ ಇಂದು (ಏಪ್ರಿಲ್ 1) ಅವರನ್ನು ವಿಠಲ್ ಮಲ್ಯ ರಸ್ತೆಯಲ್ಲಿ ಇರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲಗಳ ಪ್ರಕಾರ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲ. ಜನರಲ್ ಚಕಪ್ ಸಲುವಾಗಿ ಅವರು ಆಸ್ಪತ್ರೆಗೆ ಬಂದಿದ್ದಾರೆ ಎನ್ನಲಾಗಿದೆ. ಮಂಗಳವಾರ (ಏ.2) ಬೆಳಗ್ಗೆ ಅವರನ್ನು ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ. ಶಿವರಾಜ್ಕುಮಾರ್ ಅವರನ್ನು ನೋಡಲು ಮಧು ಬಂಗಾರಪ್ಪ (Madhu Bangarappa) ಅವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಶಿವರಾಜ್ಕುಮಾರ್ ಅವರು ಸಖತ್ ಬ್ಯುಸಿ ಆಗಿದ್ದಾರೆ. ಒಂದೆಡೆ ಸಿನಿಮಾ ಕೆಲಸ. ಇನ್ನೊಂದು ಲೋಕಸಭಾ ಚುನಾವಣಾ ಪ್ರಚಾರ. ಶಿವರಾಜ್ಕುಮಾರ್ ಅವರ ಪತ್ನಿ ಗೀತಾ ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಹಾಗಾಗಿ ಪತ್ನಿ ಪರವಾಗಿ ಪ್ರಚಾರ ಮಾಡಲು ಅವರು ಹಲವು ಊರುಗಳನ್ನು ಸುತ್ತಿದ್ದಾರೆ.
ಶಿವರಾಜ್ಕುಮಾರ್ ಅವರಿಗೆ ಈಗ 61 ವರ್ಷ ವಯಸ್ಸು. ಹದಿಹರೆಯದ ಯುವಕನಂತೆ ಅವರು ಈಗಲೂ ಫೈಟಿಂಗ್ ದೃಶ್ಯಗಳಲ್ಲಿ ನಟಿಸುತ್ತಾರೆ. ಫಿಟ್ನೆಸ್ ಬಗ್ಗೆ ಕಾಳಜಿ ವಹಿಸುತ್ತಾರೆ. ಅವರ ಎನರ್ಜಿ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಇತ್ತೀಚಿನ ಕೆಲವು ದಿನಗಳಿಂದ ಅವರು ಬಿಡುವಿಲ್ಲದೇ ಗೀತಾ ಶಿವರಾಜ್ಕುಮಾರ್ ಪರವಾಗಿ ಪ್ರಚಾರ ಮಾಡಿದ್ದಾರೆ. ಹಾಗಾಗಿ ಅವರು ಕೊಂಚ ದಣಿದಿರುವ ಸಾಧ್ಯತೆ ಇದೆ. ಜನರಲ್ ಚಕಪ್ ಸಲುವಾಗಿ ಅವರು ‘ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ಗೆ ದಾಖಲಾಗಿದ್ದಾರೆ.
ಇದನ್ನೂ ಓದಿ: ಗೀತಾ ಸರಿಯಾಗಿ ಕೆಲಸ ಮಾಡದಿದ್ರೆ ಹೆಸರು ಚೇಂಜ್ ಮಾಡ್ಕೋತೀನಿ ಎಂದ ಶಿವರಾಜ್ಕುಮಾರ್
ಶಿವರಾಜ್ಕುಮಾರ್ ಹೊಸ ಸಿನಿಮಾ:
ಬ್ಯಾಟ್ ಟು ಬ್ಯಾಕ್ ಸಿನಿಮಾ ಮಾಡುವಲ್ಲಿ ಶಿವರಾಜ್ಕುಮಾರ್ ಫೇಮಸ್. ಇತ್ತೀಚೆಗೆ ಅವರು ನಟಿಸಿದ ‘ಕರಟಕ ದಮನಕ’ ಸಿನಿಮಾ ಬಿಡುಗಡೆ ಆಯಿತು. ಈಗ ಅವರ ಇನ್ನೊಂದು ಸಿನಿಮಾ ಅನೌನ್ಸ್ ಆಗಿದೆ. ಆರ್. ಚಂದ್ರು ಅವರ ‘ಆರ್ಸಿ ಸ್ಟುಡಿಯೋ’ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ 6ನೇ ಸಿನಿಮಾ ಬಗ್ಗೆ ಮಾಹಿತಿ ನೀಡಲಾಗಿದೆ. ಆ ಸಿನಿಮಾದಲ್ಲಿ ಶಿವರಾಜ್ಕುಮಾರ್ ಅವರು ನಟಿಸಲಿದ್ದಾರೆ. ಈ ಬಗ್ಗೆ ‘ಎಕ್ಸ್’ (ಟ್ವಿಟರ್) ಮೂಲಕ ಆರ್. ಚಂದ್ರು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೊದಲು ‘ಮೈಲಾರಿ’, ‘ಕಬ್ಜ’ ಸಿನಿಮಾಗಳಲ್ಲಿ ಶಿವರಾಜ್ಕುಮಾರ್ ಅವರಿಗೆ ಆರ್. ಚಂದ್ರು ಆ್ಯಕ್ಷನ್-ಕಟ್ ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:28 pm, Mon, 1 April 24