ಬೆಂಗಳೂರಿನ ಮೈಸೂರು ರಸ್ತೆಯಿಂದ ವೆಗಾಸಿಟಿ ಮಾಲ್ ಜಂಕ್ಷನ್ವರೆಗಿನ 12 ಕಿ.ಮೀ ರಸ್ತೆಗೆ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಹೆಸರು ಇಡಲಾಗಿದೆ. ಇದು ಅಭಿಮಾನಿಗಳಿಗೆ ಸಾಕಷ್ಟು ಖುಷಿ ನೀಡಿದೆ. ಪುನೀತ್ ಕುಟುಂಬ ಕೂಡ ಈ ವಿಚಾರದಲ್ಲಿ ಸಂತಸ ವ್ಯಕ್ತಪಡಿಸಿದೆ. ಚಿತ್ರರಂಗದ ಅನೇಕರು ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ. ಈಗ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ (Ashwini Puneeth) ಅವರು ಕೂಡ ಸರ್ಕಾರಕ್ಕೆ ಕೃತಜ್ಞತೆ ತಿಳಿಸಿದ್ದಾರೆ.
ರಸ್ತೆ ಪಕ್ಕದಲ್ಲಿ ಅಪ್ಪು ಭಾವಚಿತ್ರ ಹಾಕಿ ‘ಡಾ||ಪುನೀತ್ ರಾಜ್‌ಕುಮಾರ್ ರಸ್ತೆ’ ಎಂದು ಬರೆದಿರುವ ಗ್ರಾಫಿಕ್ಸ್ ಫೋಟೋವನ್ನು ಅಶ್ವಿನಿ ಪುನೀತ್ ಅವರು ಪೋಸ್ಟ್ ಮಾಡಿದ್ದಾರೆ. ಜೊತೆಗೆ ‘ಕರ್ನಾಟಕ ಸರ್ಕಾರಕ್ಕೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು’ ಎಂದು ಅವರು ಹೇಳಿದ್ದಾರೆ. ಇದರ ಕೆಳಭಾಗದಲ್ಲಿ ಅವರು ಪತ್ರ ಒಂದನ್ನು ಬರೆದು ಪೋಸ್ಟ್ ಮಾಡಿದ್ದಾರೆ.
‘ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಯಂಡಹಳ್ಳಿ ಜಂಕ್ಷನ್ನಿಂದ ವೆಗಾಸಿಟಿ ಮಾಲ್ ಜಂಕ್ಷನ್ವರೆಗಿನ 12 ಕಿ.ಮೀ. ಹೊರ ವರ್ತುಲ ರಸ್ತೆಯನ್ನು ಅಪ್ಪು ಗೌರವಾರ್ಥ ‘ಡಾ|| ಪುನೀತ್ ರಾಜ್‌ಕುಮಾರ್ ರಸ್ತೆ’ಯನ್ನು ಲೋಕಾರ್ಪಣೆ ಮಾಡಿದಕ್ಕಾಗಿ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು. ಈ ಮೂಲಕ ಅಪ್ಪು ಅವರನ್ನು ನಮ್ಮನಡುವೆ ಸದಾ ಜೀವಂತವಾಗಿರಿಸಿದ್ದಕ್ಕಾಗಿ ರಾಜ್ಯ ಸರ್ಕಾರ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಚಿತ್ರರಂಗದ ಬಂಧುಗಳು ಮತ್ತು ಅವರ ಅಸಂಖ್ಯಾತ ಅಭಿಮಾನಿಗಳಿಗೆ ಎಂದೆಂದಿಗೂ ಚಿರಋಣಿ’ ಎಂದು ಅಶ್ವಿನಿ ಅವರು ಬರೆದುಕೊಂಡಿದ್ದಾರೆ.
ಕರ್ನಾಟಕ ಸರ್ಕಾರಕ್ಕೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು.
Our heartfelt gratitude to the Government of Karnataka. ?#DrPuneethRajkumarRoad #PowerInU pic.twitter.com/uPo9X6hubn— Ashwini Puneeth Rajkumar (@Ashwini_PRK) February 7, 2023
ಫೆಬ್ರವರಿ 7ರಂದು ಪದ್ಮನಾಭ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುನೀತ್ ರಾಜ್‌ಕುಮಾರ್ ರಸ್ತೆ ಉದ್ಘಾಟನೆ ಆಯಿತು. ಸಿಎಂ ಬೊಮ್ಮಾಯಿ ಅವರು ಈ ರಸ್ತೆಗೆ ಮರುನಾಮಕರಣ ಮಾಡಿದರು. ಆ ಬಳಿಕ ಹಲವು ಮನರಂಜನಾ ಕಾರ್ಯಗಳು ನಡೆದವು. ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್‌ಕುಮಾರ್ ಕುಟುಂಬ, ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಹಾಜರಿ ಹಾಕಿದ್ದರು. ಮಾರ್ಚ್ ವೇಳೆಗೆ ಅಂಬರೀಷ್ ಅವರ ಸ್ಮಾರಕ ಉದ್ಘಾಟನೆ ಮಾಡುವ ಭರವಸೆಯನ್ನು ಸಿಎಂ ಬೊಮ್ಮಾಯಿ ಅವರು ನೀಡಿದ್ದಾರೆ. ಇದು ಅಂಬರೀಷ್ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:07 am, Wed, 8 February 23