Devara Kanasu: ‘ದೇವರ ಕನಸು’ ಚಿತ್ರಕ್ಕೆ ಸಾಥ್ ನೀಡಿದ ಅಶ್ವಿನಿ ಪುನೀತ್; ಜುಲೈ 21ಕ್ಕೆ ರಿಲೀಸ್ ಆಗಲಿದೆ ಮಕ್ಕಳ ಸಿನಿಮಾ
Ashwini Puneeth Rajkumar: ‘ಪಿಆರ್ಕೆ ಆಡಿಯೋ’ ಮೂಲಕ ‘ದೇವರ ಕನಸು’ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆ ಆಗಿವೆ. ಈ ಮಕ್ಕಳ ಚಿತ್ರದ ಟ್ರೇಲರ್ ಗಮನ ಸೆಳೆಯುತ್ತಿದೆ.
ಪುನೀತ್ ರಾಜ್ಕುಮಾರ್ ಅವರು ಚಿತ್ರರಂಗದಲ್ಲಿ ಹೊಸಬರಿಗೆ ಬೆಂಬಲ ನೀಡುತ್ತಿದ್ದರು. ಅವರು ಆರಂಭಿಸಿದ ‘ಪಿಆರ್ಕೆ ಆಡಿಯೋ’ ಮತ್ತು ‘ಪಿಆರ್ಕೆ ಪ್ರೊಡಕ್ಷನ್ಸ್’ ಸಂಸ್ಥೆಗಳನ್ನು ಈಗ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ (Ashwini Puneeth Rajkumar) ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅಶ್ವಿನಿ ಕೂಡ ಹೊಸ ತಂಡಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಈಗ ಅವರು ‘ದೇವರ ಕನಸು’ (Devara Kanasu) ಚಿತ್ರಕ್ಕೆ ಸಾತ್ ನೀಡಿದ್ದಾರೆ. ಇದು ಮಕ್ಕಳ ಸಿನಿಮಾ ಎಂಬುದು ವಿಶೇಷ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಟ್ರೇಲರ್ ಅನಾವರಣ ಮಾಡುವ ಮೂಲಕ ‘ದೇವರ ಕನಸು’ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಇತರೆ ಕಮರ್ಷಿಯಲ್ ಸಿನಿಮಾಗಳಿಗೆ ಹೋಲಿಸಿದರೆ ಮಕ್ಕಳ ಸಿನಿಮಾಗಳ ಸಂಖ್ಯೆ ವಿರಳ. ಅಂಥ ಒಂದು ಅಪರೂಪದ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಸುರೇಶ್ ಲಕ್ಕೂರ್. ‘ದೇವರ ಕನಸು’ ಸಿನಿಮಾಗೆ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಚಿತ್ರವೀಗ ಬಿಡುಗಡೆಗೆ ಸಜ್ಜಾಗುತ್ತಿದೆ. ‘ಪಿಆರ್ಕೆ ಆಡಿಯೋ’ ಮೂಲಕ ಹಾಡುಗಳು ಬಿಡುಗಡೆ ಆಗಿದೆ. ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಟ್ರೇಲರ್ ಅನಾವರಣ ಮಾಡಿರುವುದರಿಂದ ಚಿತ್ರದ ಬಲ ಹೆಚ್ಚಾಗಿದೆ. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ 3 ಸಾಂಗ್ಗಳನ್ನು ಪ್ರದರ್ಶಿಸಲಾಯಿತು. ಅದರೊಂದಿಗೆ ಚಿತ್ರತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿತು.
ಇದನ್ನೂ ಓದಿ: Ashwini Puneeth Rajkumar: ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್ಕುಮಾರ್, ರಾಘಣ್ಣ
ನಿರ್ದೇಶಕ ಸುರೇಶ್ ಲಕ್ಕೂರ್ ಅವರು ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಅಧ್ಯಯನ ಮಾಡಿದ್ದಾರೆ. ಅವರು ನಿರ್ದೇಶನ ಮಾಡಿರುವ ಮೊದಲ ಚಿತ್ರವೇ ‘ದೇವರ ಕನಸು’. ಈ ಮಕ್ಕಳ ಸಿನಿಮಾ ಈಗಾಗಲೇ ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರದರ್ಶನ ಕಂಡಿದೆ. ಇನ್ನೂ ಒಂದಷ್ಟು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಂಸೆಗೆ ಪಾತ್ರವಾಗಿದೆ ಎಂದು ಚಿತ್ರತಂಡದವರು ಹೇಳಿಕೊಂಡಿದ್ದಾರೆ.
‘ದೇವ ಎನ್ನುವುದು ಈ ಸಿನಿಮಾ ಮುಖ್ಯ ಪಾತ್ರಧಾರಿಯ ಹೆಸರು. ಮಾಸ್ಟರ್ ದೀಪಕ್ ಅವರು ಈ ಪಾತ್ರವನ್ನು ನಿಭಾಯಿದ್ದಾರೆ. ಈ ಹುಡುಗನ ಕನಸು ನನಸಾಗುತ್ತೋ ಇಲ್ಲವೋ ಎಂಬುದೇ ಸಿನಿಮಾದ ಕಥೆ. ದೀಪಕ್, ಅರುಷಿ ವೇದಿಕಾ, ಅಮೂಲ್ಯ, ಮಾಕ್ ಮಣಿ ಅವರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಜುಲೈ 21ರಂದು ನಮ್ಮ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ ನಿರ್ದೇಶಕ ಸುರೇಶ್ ಲಕ್ಕೂರ್.
ಜಯ್ ಕುಮಾರ್ ಮತ್ತು ಶೇಖರ್ ಅವರು ‘ದೇವರ ಕನಸು’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸುನೀಲ್ ರಾಮ್ ಅವರು ಕಥೆ ಬರೆದಿದ್ದು, ಹಾಡುಗಳು ಹಾಗೂ ಸಂಭಾಷಣೆಯನ್ನು ಲಿಂಗರಾಜ್ ಇತಿಹಾಸ್ ಬರೆದಿದ್ದಾರೆ. ಸ್ಯಾಂಡಿ ಸಂಗೀತ ನಿರ್ದೇಶನ, ಜಿಷ್ಣು ಸೇನ್ ಅವರ ಸಂಕಲನ ಈ ಸಿನಿಮಾಗಿದೆ. ಮಕ್ಕಳ ಚಿತ್ರದ ಟ್ರೇಲರ್ ಗಮನ ಸೆಳೆಯುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.