Ashwini Puneeth Rajkumar: ಸಿನಿಮಾ ಮಾಡಲು ಕಾದಂಬರಿ ಓದುತ್ತಿರುವ ಅಶ್ವಿನಿ; ಪಾರ್ವತಮ್ಮ ಸಾಗಿದ ಹಾದಿಯಲ್ಲಿ ದೊಡ್ಮನೆ ಸೊಸೆಯ ಸಿನಿಪಯಣ
PRK Productions: ಕಥೆಗಳನ್ನು ಆಯ್ಕೆ ಮಾಡುವುದು, ಸ್ಕ್ರಿಪ್ಟ್ ಓದುವುದು ಸೇರಿದಂತೆ ಅನೇಕ ಕೆಲಸಗಳಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ನಿರತರಾಗಿದ್ದಾರೆ. ಕನ್ನಡದ ಸಾಹಿತ್ಯ ಕೃತಿಗಳನ್ನು ಆಧರಿಸಿ ಸಿನಿಮಾ ಮಾಡಬೇಕು ಎಂಬ ಆಸಕ್ತಿ ಅವರಿಗೆ ಮೂಡಿದೆ.
ಡಾ. ರಾಜ್ಕುಮಾರ್ ಅವರದ್ದು ಸಿನಿಮಾಗೆ ಮೀಸಲಾದ ಕುಟುಂಬ. ಅವರ ಫ್ಯಾಮಿಲಿಯ ಬಹುತೇಕರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ರಾಜ್ಕುಮಾರ್ ಅವರು ಹೀರೋ ಆಗಿ ಮಿಂಚಿದರು. ಅವರ ಹಿಂದಿನ ಶಕ್ತಿಯಾಗಿ ಪಾರ್ವತಮ್ಮ ಇದ್ದರು. ನಿರ್ಮಾಪಕಿಯಾಗಿ ಪಾರ್ವತಮ್ಮ ರಾಜ್ಕುಮಾರ್ (Parvathamma Rajkumar) ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಕನ್ನಡ ಸಾಹಿತ್ಯದ ಬಗ್ಗೆ ಅವರಿಗೆ ಬಹಳ ಆಸಕ್ತಿ ಇತ್ತು. ತಾವು ಓದಿದ ಕಾದಂಬರಿಯನ್ನು (Kannada Novels) ಇಟ್ಟುಕೊಂಡು ಅವರು ಸಿನಿಮಾ ಮಾಡುತ್ತಿದ್ದರು. ಈಗ ದೊಡ್ಮನೆಯ ಸೊಸೆ ಅಶ್ವಿನಿ ಪುನೀತ್ ರಾಜ್ಕುಮಾರ್ (Ashwini Puneeth Rajkumar) ಕೂಡ ಪಾರ್ವತಮ್ಮನ ಹಾದಿಯಲ್ಲೇ ಸಾಗುತ್ತಿದ್ದಾರೆ. ಸಿನಿಮಾ ಮಾಡುವ ಸಲುವಾಗಿ ಅವರು ಕಥೆ, ಕಾದಂಬರಿಗಳನ್ನು ಓದುತ್ತಿದ್ದಾರೆ ಎಂಬುದು ವಿಶೇಷ.
ಹೊಸಬರಿಗೆ ಅವಕಾಶ ನೀಡಬೇಕು ಎಂಬ ಕಾರಣದಿಂದ ಪುನೀತ್ ರಾಜ್ಕುಮಾರ್ ಅವರು ‘ಪಿಆರ್ಕೆ ಪ್ರೊಡಕ್ಷನ್ಸ್’ ಸಂಸ್ಥೆ ಆರಂಭಿಸಿದರು. ಈಗ ಅದನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಸಿನಿಮಾ ನಿರ್ಮಾಣದಲ್ಲಿ ಅವರು ಸಂಪೂರ್ಣ ತೊಡಗಿಕೊಂಡಿದ್ದಾರೆ. ಕಥೆಗಳನ್ನು ಆಯ್ಕೆ ಮಾಡುವುದು, ಸ್ಕ್ರಿಪ್ಟ್ ಓದುವುದು ಸೇರಿದಂತೆ ಅನೇಕ ಕೆಲಸಗಳಲ್ಲಿ ಅಶ್ವಿನಿ ನಿರತರಾಗಿದ್ದಾರೆ. ಸಾಹಿತ್ಯ ಕೃತಿಗಳನ್ನು ಆಧರಿಸಿ ಸಿನಿಮಾ ಮಾಡಬೇಕು ಎಂಬ ಆಸಕ್ತಿ ಅವರಿಗೆ ಮೂಡಿದೆ. ಆ ಬಗ್ಗೆ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಅಪರೂಪಕ್ಕೆ ಮೈಕ್ ಹಿಡಿದು ಮಾತನಾಡಿದ ಅಶ್ವಿನಿ ಪುನೀತ್ ರಾಜ್ಕುಮಾರ್ ಏನಂದರು?
‘ಒಳ್ಳೆಯ ಕಥೆ ಇದ್ದರೆ ಸಾಹಿತ್ಯ ಕೃತಿ ಆಧರಿಸಿ ಸಿನಿಮಾ ನಿರ್ಮಾಣ ಮಾಡುತ್ತೇನೆ. ನಾನು ಈಗ ಕನ್ನಡದ ಎರಡು-ಮೂರು ಕಾದಂಬರಿಗಳನ್ನು ಓದುತ್ತಿದ್ದೇನೆ. ಅಮ್ಮ (ಪಾರ್ವತಮ್ಮ ರಾಜ್ಕುಮಾರ್) ಕೂಡ ಹಾಗೇ ಮಾಡುತ್ತಿದ್ದರು. ಕೆಲವು ಬಿಗ್ ಬಜೆಟ್ ಸಿನಿಮಾಗಳು ಬಂದಿವೆ. ಆದರೆ ರಿಸ್ಕ್ ಫ್ಯಾಕ್ಟರ್ ಇರುವುದರಿಂದ ಅದರ ಬಗ್ಗೆ ಗಮನ ಹರಿಸಿಲ್ಲ. ಸಿನಿಮಾ ಮಾಡುವ ಸಲುವಾಗಿ ಹೊಸ ಲೇಖಕಿಯೊಬ್ಬರ ಕಾದಂಬರಿಯನ್ನು ಈಗ ಓದುತ್ತಿದ್ದೇನೆ. ಅದನ್ನು ಯಾರು ನಿರ್ದೇಶಿಸಬಹುದು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ’ ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಹೇಳಿದ್ದಾರೆ. ಆದರೆ ಆ ಕಾದಂಬರಿ ಯಾವುದು? ಲೇಖಕಿ ಯಾರು ಎಂಬ ಮಾಹಿತಿಯನ್ನು ಅವರು ಈಗಲೇ ಬಿಟ್ಟುಕೊಟ್ಟಿಲ್ಲ.
ಇದನ್ನೂ ಓದಿ: ಅಂಗಾಂಗದಾನ ಕ್ಯಾಂಪೇನ್: ರಾಯಭಾರಿ ಆಗಲು ಅಶ್ವಿನಿ ಪುನೀತ್ಗೆ ಆಹ್ವಾನ ನೀಡಿದ ರಾಜ್ಯ ಸರ್ಕಾರ
‘ಪಿಆರ್ಕೆ ಪ್ರೊಡಕ್ಷನ್ಸ್’ ಮೂಲಕ ನಿರ್ಮಾಣ ಆಗಿರುವ ‘ಆಚಾರ್ ಆ್ಯಂಡ್ ಕೋ’ ಸಿನಿಮಾ ಜುಲೈ 28ರಂದು ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ರೆಟ್ರೋ ಕಾಲದ ಕಥೆ ಇದೆ. ಸಿನಿಮಾ ನೋಡಿದ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ತುಂಬ ಇಷ್ಟ ಆಗಿದೆ. ಸಿಂಧು ಶ್ರೀನಿವಾಸಮೂರ್ತಿ ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ. ನಿರ್ದೇಶಕಿ ಸೇರಿದಂತೆ ಈ ಸಿನಿಮಾದ ಅನೇಕ ತಂತ್ರಜ್ಞರು ಮಹಿಳೆಯರೇ ಆಗಿರುವುದು ವಿಶೇಷ. ಬಿಂದುಮಾಲಿನಿ ನಾರಾಯಣಸ್ವಾಮಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಇಂಚರಾ ಸುರೇಶ್ ಅವರು ಕಾಸ್ಟ್ಯೂಮ್ ಡಿಸೈನ್ ಮಾಡಿದ್ದು, ಸೌಂಡ್ ಇಂಜಿನಿಯರ್ ಆಗಿ ಹೇಮಾ ಸುವರ್ಣ ಅವರು ‘ಆಚಾರ್ ಆ್ಯಂಡ್ ಕೋ’ ಸಿನಿಮಾಗೆ ಕೆಲಸ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.