ಶೂಟಿಂಗ್ ಮುಗಿಸಿದ ‘ಬಡವ್ರ ಮಕ್ಕಳು ಬೆಳಿಬೇಕು ಕಣ್ರಯ್ಯ’ ಸಿನಿಮಾ
ಸುಚೇಂದ್ರ ಪ್ರಸಾದ್, ಸಂಗೀತಾ ಅವರು ‘ಬಡವ್ರ ಮಕ್ಕಳು ಬೆಳಿಬೇಕು ಕಣ್ರಯ್ಯ’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಮಂಜು ಕವಿ ನಿರ್ದೇಶನ ಮಾಡಿದ ಈ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡದವರು ಸಿದ್ಧತೆ ನಡೆಸಿದ್ದಾರೆ. ಅನೇಕ ಹಾಸ್ಯ ಕಲಾವಿದರು ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಟೈಟಲ್ ಡಿಫರೆಂಟ್ ಆಗಿದ್ದರೆ ಸಿನಿಮಾ ಮೇಲೆ ಪ್ರೇಕ್ಷಕರಿಗೆ ಕೌತುಕ ಮೂಡುತ್ತದೆ. ಈಗ ‘ಬಡವ್ರ ಮಕ್ಕಳು ಬೆಳಿಬೇಕು ಕಣ್ರಯ್ಯ’ ಸಿನಿಮಾ ಕೂಡ ಈ ವಿಚಾರದಲ್ಲಿ ಗಮನ ಸೆಳೆಯುತ್ತಿದೆ. ‘ಶ್ರೀ ರಾಮ ಪ್ರೊಡಕ್ಷನ್’ ಸಂಸ್ಥೆಯ ಮೂಲಕ ಸಿ .ಎಸ್. ವೆಂಕಟೇಶ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಬಗ್ಗೆ ಒಂದು ಅಪ್ಡೇಟ್ ಸಿಕ್ಕಿದೆ. ಅದೇನೆಂದರೆ, ಈ ಚಿತ್ರದ ಶೂಟಿಂಗ್ ಮುಕ್ತಾಯ ಆಗಿದೆ. ನವೆಂಬರ್ 10ರಂದು ಈ ಚಿತ್ರದ ಟ್ರೇಲರ್ ರಿಲೀಸ್ ಮಾಡಲು ಸಿದ್ಧತೆ ನಡೆದಿದೆ. ‘ಬಡವ್ರ ಮಕ್ಕಳು ಬೆಳಿಬೇಕು ಕಣ್ರಯ್ಯ’ ಸಿನಿಮಾದ ಮುಖ್ಯ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ಮತ್ತು ಸಂಗೀತಾ ನಟಿಸಿದ್ದಾರೆ.
ಮಕ್ಕಳ ಪಾತ್ರದಲ್ಲಿ ರಾಜವರ್ಧನ್, ವೈಭವಿ, ಲಾವಣ್ಯ ಅವರು ನಟಿಸಿದ್ದಾರೆ. ಈ ಚಿತ್ರಕ್ಕೆ ಮಂಜು ಕವಿ ಅವರು ಸಾಹಿತ್ಯ, ಸಂಭಾಷಣೆ ಬರೆದಿದ್ದಾರೆ. ಅಲ್ಲದೇ ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ. ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಕೂಡ ಅವರೇ ನಿಭಾಯಿಸಿದ್ದಾರೆ. ಎಸ್.ಜೆ. ಸಂಜಯ್, ಗಿರೀಶ್ ಸಾಕಿ, ಸಂಗೀತಾ ಶೆಟ್ಟಿ ಅವರು ಡೈರೆಕ್ಷನ್ ತಂಡದಲ್ಲಿ ಇದ್ದಾರೆ.
‘ಬಡವ್ರ ಮಕ್ಕಳು ಬೆಳಿಬೇಕು ಕಣ್ರಯ್ಯ’ ಚಿತ್ರಕ್ಕೆ ರೇಣು ಕುಮಾರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಕರಣ್ ಕುಮಾರ್ ಮತ್ತು ವೆಂಕಿ ಯುಡಿಐ ಅವರು ಸಂಕಲನ ಮಾಡಿದ್ದಾರೆ. ನಂದ ಮಾಸ್ಟರ್ ಮತ್ತು ಮೈಸೂರು ರಾಜು ಅವರ ನೃತ್ಯ ಈ ಸಿನಿಮಾಗಿದೆ. ಸಿನಿಮಾದಲ್ಲಿ 4 ಹಾಡುಗಳಿದ್ದು ರವೀಂದ್ರ ಸೊರಗಾವಿ, ಕೈಲಾಶ್ ಕೇರ್, ಅನುರಾಧ ಭಟ್ ಅವರು ಧ್ವನಿ ನೀಡಿದ್ದಾರೆ. ವಿನು ಮನಸು ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ.
ಸುಚೇಂದ್ರ ಪ್ರಸಾದ್, ಸಂಗೀತಾ, ರಾಜವರ್ಧನ್, ವೈಭವಿ, ಲಾವಣ್ಯ ಮಾತ್ರವಲ್ಲದೇ ಚಂದ್ರಪ್ರಭ, ಟೆನ್ನಿಸ್ ಕೃಷ್ಣ, ವಿನೋದ್ ಗೊಬ್ಬರಗಾಲ, ರೇಖಾ ದಾಸ್, ವಿನೋದ್, ಜಗದೀಶ್ ಕೊಪ್ಪ, ಮೂಗು ಸುರೇಶ್, ಚೈತ್ರಾ ಕೊಟ್ಟೂರು, ಶಿವಾರೆಡ್ಡಿ, ಮಂಜು ಪಾವಗಡ, ಮುಖೇಶ್, ಸಿಲ್ಲಿ ಲಲ್ಲಿ ಚಿದಾನಂದ್, ಶ್ರೀನಿವಾಸ್ ಗೌಡ, ಸುರೇಶ್ ಉದ್ಬೂರ್, ಯಶೋದಾ ನಾಗರಾಜ್ ಕೂಡ ಪಾತ್ರವರ್ಗದಲ್ಲಿ ಇದ್ದಾರೆ.
ಇದನ್ನೂ ಓದಿ: ‘ಇದರಿಂದ ಮಕ್ಕಳು ಎಷ್ಟು ನಲುಗಬಹುದು ಎಂಬುದನ್ನು ಯೋಚಿಸಿದಾಗ ಮನಸ್ಸು ವಿಚಲಿತವಾಗುತ್ತದೆ’: ಸುಚೇಂದ್ರ ಪ್ರಸಾದ್
ಬಡತನದ ಫ್ಯಾಮಿಲಿಯಲ್ಲಿ ಹುಟ್ಟಿದ ಮಕ್ಕಳ ಪರಿಸ್ಥಿತಿ ಹೇಗಿರುತ್ತದೆ? ಮಕ್ಕಳಿಗಾಗಿ ತಂದೆ-ತಾಯಿ ಪಡುವ ಕಷ್ಟಗಳು ಹೇಗಿರುತ್ತವೆ? ಬಡತನವನ್ನು ನಿಭಾಯಿಸುವುದು ಹೇಗೆ? ಬಡತನದ ಕುಟುಂಬಕ್ಕೆ ಸಮಾಜ ಯಾವ ರೀತಿ ಬೆಲೆ ಕೊಡುತ್ತದೆ ಎಂಬಿತ್ಯಾದಿ ವಿಷಯಗಳನ್ನು ಈ ಸಿನಿಮಾ ಮೂಲಕ ಹೇಳಲಾಗುವುದು. ಅಂದುಕೊಂಡಂತೆಯೇ ಸಿನಿಮಾ ಮೂಡಿಬಂದಿದೆ ಎಂದು ನಿರ್ದೇಶಕ ಮಂಜು ಕವಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.