ದೊಡ್ಡ ಮೊತ್ತಕ್ಕೆ ಸೇಲ್ ಆಯ್ತು ‘ಬಲರಾಮನ ದಿನಗಳು’ ಚಿತ್ರದ ಆಡಿಯೋ ಹಕ್ಕು

ವಿನೋದ್ ಪ್ರಭಾಕರ್ ನಟನೆಯ 25ನೇ ಸಿನಿಮಾ ‘ಬಲರಾಮನ ದಿನಗಳು’. ಸಂತೋಷ್ ನಾರಾಯಣನ್ ಸಂಗೀತ ನೀಡಿದ್ದಾರೆ. ಟಿ-ಸಿರೀಸ್ ಸಂಸ್ಥೆಯು ಈ ಚಿತ್ರದ ಹಾಡುಗಳ ಪ್ರಸಾರ ಹಕ್ಕುಗಳನ್ನು ಖರೀದಿ ಮಾಡಿದೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಯಿತು. ಕೆ.ಎಂ. ಚೈತನ್ಯ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದವರು ಮಾತಾಡಿದರು.

ದೊಡ್ಡ ಮೊತ್ತಕ್ಕೆ ಸೇಲ್ ಆಯ್ತು ‘ಬಲರಾಮನ ದಿನಗಳು’ ಚಿತ್ರದ ಆಡಿಯೋ ಹಕ್ಕು
Balaramana Dinagalu Movie Team

Updated on: Dec 18, 2025 | 8:24 PM

ನಟ ವಿನೋದ್ ಪ್ರಭಾಕರ್ (Vinod Prabhakar) ಅವರು ‘ಬಲರಾಮನ ದಿನಗಳು’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಪ್ರಿಯಾ ಆನಂದ್ ಅಭಿನಯಿಸಿದ್ದಾರೆ. ಬಿಡುಗಡೆಗೆ ಸಜ್ಜಾಗುತ್ತಿರುವ ಈ ಸಿನಿಮಾಗೆ ಪ್ರಚಾರ ಕಾರ್ಯ ಆರಂಭಿಸಲಾಗಿದೆ. ‘ಶುರು ಶುರು..’ ಎಂಬ ಹಾಡಿನ ಮೂಲಕ ಪ್ರಚಾರ ಶುರುವಾಗಿದೆ. ಈ ಸಿನಿಮಾಗೆ ಕೆ.ಎಂ. ಚೈತನ್ಯ ಅವರು ನಿರ್ದೇಶನ ಮಾಡಿದ್ದಾರೆ. 18 ವರ್ಷಗಳ ಹಿಂದೆ ಕೆ.ಎಂ. ಚೈತನ್ಯ ಅವರ ನಿರ್ದೇಶನದಲ್ಲಿ ‘ಆ ದಿನಗಳು’ ಸಿನಿಮಾ ಮೂಡಿಬಂದಿತ್ತು. ಈಗ ಅವರು ‘ಬಲರಾಮನ ದಿನಗಳು’ (Balaramana Dinagalu) ಸಿನಿಮಾ ಮಾಡಿದ್ದಾರೆ.

ಈ ಸಿನಿಮಾಗೆ ಪದ್ಮಾವತಿ ಜಯರಾಮ್ ಹಾಗೂ ಶ್ರೇಯಸ್ ಬಂಡವಾಳ ಹೂಡಿದ್ದಾರೆ. ಇದು ವಿನೋದ್ ಪ್ರಭಾಕರ್ ನಟನೆಯ 25ನೇ ಸಿನಿಮಾ ಎಂಬುದು ವಿಶೇಷ. ಅವಿನಾಶ್, ಅತುಲ್ ಕುಲಕರ್ಣಿ, ವಿನಯ್ ಗೌಡ, ಆಶಿಶ್ ವಿದ್ಯಾರ್ಥಿ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಸಂತೋಷ್ ನಾರಾಯಣನ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈಗ ಬಿಡುಗಡೆ ಆಗಿರುವ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ಸಂಚಿತ್ ಹೆಗ್ಡೆ ಮತ್ತು ಪುಣ್ಯ ಅವರು ಧ್ವನಿ ನೀಡಿದ್ದಾರೆ.

ಇದು ‘ಆ ದಿನಗಳು’ ಸಿನಿಮಾದ ಸೀಕ್ವೆಲ್ ಅಲ್ಲ ಎಂದು ನಿರ್ದೇಶಕ ಕೆ.ಎಂ. ಚೈತನ್ಯ ಅವರು ಸ್ಪಷ್ಟಪಡಿಸಿದ್ದಾರೆ. ‘ಇದು ಒಂದು ಕಾಲ್ಪನಿಕ ಕತೆ ಇರುವ ಸಿನಿಮಾ’ ಎಂದು ಅವರು ಹೇಳಿದ್ದಾರೆ. ಈ ಸಿನಿಮಾದ ಆಡಿಯೋ ಹಕ್ಕುಗಳನ್ನು ಟಿ-ಸಿರೀಸ್ ಕಂಪನಿಯು ದೊಡ್ಡ ಮೊತ್ತಕ್ಕೆ ಖರೀದಿಸಿದೆ. ‘ಮತ್ತೊಂದು ಸಿನಿಮಾ ನಿರ್ಮಾಣ ಮಾಡುವಷ್ಡು ಹಣ ನೀಡಿದ್ದಾರೆ’ ಎಂದು ನಿರ್ಮಾಪಕ ಶ್ರೇಯಸ್ ಹೇಳಿದ್ದಾರೆ.

‘ಶುರು ಶುರು..’ ಹಾಡು:

ಮೂಲಗಳ ಪ್ರಕಾರ, 3 ಕೋಟಿ 75 ಲಕ್ಷ ರೂಪಾಯಿಗೆ ‘ಬಲರಾಮನ ದಿನಗಳು’ ಸಿನಿಮಾದ ಆಡಿಯೋ ರೈಟ್ಸ್ ಮಾರಾಟ ಆಗಿದೆ. ‘ನನ್ನ ವೃತ್ತಿ ಜೀವನದ 25 ಸಿನಿಮಾಗಳಲ್ಲಿ ಆಡಿಯೋಗೆ ಗರಿಷ್ಠ ಮೊತ್ತ ಪಡೆದ ಮೊದಲ ಚಿತ್ರ ಇದು. ಈ ಸಿನಿಮಾದಲ್ಲಿ ನನ್ನ ಪಾತ್ರ ಚೆನ್ನಾಗಿ ಮೂಡಿಬಂದಿದೆ’ ಎಂದಿದ್ದಾರೆ ವಿನೋದ್ ಪ್ರಭಾಕರ್. ನಟಿ ಪ್ರಿಯಾ ಆನಂದ್ ಅವರು ಕನ್ನಡದಲ್ಲಿ ನಟಿಸಿದ 5ನೇ ಸಿನಿಮಾ ಇದು.

ಇದನ್ನೂ ಓದಿ: ವಿನೋದ್ ಪ್ರಭಾಕರ್ ನಟನೆಯ ‘ಬಲರಾಮನ ದಿನಗಳು’ಗೆ ಗೃಹ ಸಚಿವರ ಶುಭಾಶಯ

ವಿನಯ್ ಗೌಡ ಅವರು ಈ ಸಿನಿಮಾದಲ್ಲಿ ಕತ್ತಿ ಎನ್ನುವ ಪಾತ್ರ ಮಾಡಿದ್ದಾರೆ. ಪರಭಾಷಾ ನಟಿ ಪ್ರಿಯಾ ಆನಂದ್ ಅವರು ಕನ್ನಡದಲ್ಲೇ ಮಾತನಾಡಿ ಮೆಚ್ಚುಗೆ ಪಡೆದರು. ಈ ಮೊದಲು ಪುನೀತ್ ರಾಜ್​​ಕುಮಾರ್ ಜೊತೆ ‘ರಾಜಕುಮಾರ’ ಸಿನಿಮಾದಲ್ಲಿ ಅವರು ನಟಿಸಿದ್ದರು. ತಾವು ಕನ್ನಡ ಕಲಿಯಲು ಪುನೀತ್ ರಾಜ್​​ಕುಮಾರ್ ಕಾರಣ ಎಂದು ಅವರು ಹೇಳಿದರು. ನಿರ್ಮಾಪಕಿ ಪದ್ಮಾವತಿ ಜಯರಾಮ್ ಮಾತನಾಡಿ, ‘ಕುಟುಂಬದ ಜೊತೆ ಕುಳಿತು ನೋಡುವ ಸಿನಿಮಾ ಮಾಡಿದ್ದೇವೆ’ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.