‘ಇದು ಹೀನ ಕೃತ್ಯ; ಶಿಕ್ಷೆ ಆಗಬೇಕು’: ದರ್ಶನ್​ ಬಗ್ಗೆ ಬಿ.ಸಿ. ಪಾಟೀಲ್​ ಪ್ರತಿಕ್ರಿಯೆ

|

Updated on: Jun 17, 2024 | 4:00 PM

ಕೊಲೆ ಆರೋಪಿ ದರ್ಶನ್​ ಬಗ್ಗೆ ಕನ್ನಡ ಚಿತ್ರರಂಗದ ಹಲವರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ರೇಣುಕಾ ಸ್ವಾಮಿ ಕೊಲೆಯನ್ನು ಬಹುತೇಕರು ಖಂಡಿಸಿದ್ದಾರೆ. ನಟ, ಮಾಜಿ ಸಚಿವ ಬಿ.ಸಿ. ಪಾಟೀಲ್​ ಅವರು ಕೂಡ ಈ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಯಾರೇ ತಪ್ಪು ಮಾಡಿದರೂ ಶಿಕ್ಷೆ ಆಗಬೇಕು ಎಂದು ಅವರು ಹೇಳಿದ್ದಾರೆ. ದರ್ಶನ್​ ಜೊತೆಗಿನ ಒಡನಾಟದ ಬಗ್ಗೆಯೂ ಅವರು ಮಾತಾಡಿದ್ದಾರೆ.

‘ಇದು ಹೀನ ಕೃತ್ಯ; ಶಿಕ್ಷೆ ಆಗಬೇಕು’: ದರ್ಶನ್​ ಬಗ್ಗೆ ಬಿ.ಸಿ. ಪಾಟೀಲ್​ ಪ್ರತಿಕ್ರಿಯೆ
ಬಿ.ಸಿ. ಪಾಟೀಲ್​, ದರ್ಶನ್​
Follow us on

ನಟ, ಮಾಜಿ ಸಚಿವ ಬಿ.ಸಿ. ಪಾಟೀಲ್​ ಅವರ ಜೊತೆ ದರ್ಶನ್​ (Darshan) ಒಡನಾಟ ಹೊಂದಿದ್ದರು. ಈಗ ಕೊಲೆ ಆರೋಪಿಯಾಗಿ ದರ್ಶನ್​ ಪೊಲೀಸ್​ ಕಸ್ಟಡಿಯಲ್ಲಿ ಇದ್ದಾರೆ. ಅವರ ಮೇಲೆ ಅನೇಕ ಆರೋಪಗಳು ಎದುರಾಗಿವೆ. ಅಭಿಮಾನಿಯನ್ನೇ ಕೊಲೆ (Renuka Swamy Murder) ಮಾಡಿದ ಆರೋಪದಲ್ಲಿ ದರ್ಶನ್​ ಮತ್ತು ಗ್ಯಾಂಗ್​ ಸಿಕ್ಕಿಬಿದ್ದಿದೆ. ವಿಚಾರಣೆ ತೀವ್ರಗೊಂಡಂತೆಲ್ಲ ಶಾಕಿಂಗ್​ ವಿಚಾರಗಳು ಹೊರಬರುತ್ತಿವೆ. ಈ ಘಟನೆಯ ಬಗ್ಗೆ ಬಿ.ಸಿ. ಪಾಟೀಲ್​ (BC Patil) ಪ್ರತಿಕ್ರಿಯೆ ನೀಡಿದ್ದಾರೆ. ಹಾವೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರಿಗೆ ದರ್ಶನ್​ ಬಗ್ಗೆ ಪ್ರಶ್ನೆ ಎದುರಾಯಿತು. ಅದಕ್ಕೆ ಅವರು ಉತ್ತರಿಸಿದ್ದಾರೆ.

‘ರೇಣುಕಾ ಸ್ವಾಮಿ ಹತ್ಯೆ ಆಗಿರುವುದು ದುರದೃಷ್ಟಕರ. ಯಾರೂ ಕೂಡ ಕ್ಷಮಿಸಲಾರದ ಹೇಯ ಕೃತ್ಯ. ರೇಣುಕಾ ಸ್ವಾಮಿ ಜೀವ ವಾಪಸ್​ ಬರುವುದಿಲ್ಲ. ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು. ಈ ಕೇಸ್​ನಲ್ಲಿ ಯಾರೇ ತಪ್ಪಿತಸ್ಥರಾಗಿರಲಿ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಕಾನೂನು ಎಲ್ಲವನ್ನೂ ಮೀರಿದ್ದು. ಕಾನೂನಿನ ಪ್ರಕಾರ ತಪಿತಸ್ಥರಿಗೆ ಶಿಕ್ಷೆ ಆಗಬೇಕು’ ಎಂದು ಬಿ.ಸಿ. ಪಾಟೀಲ್​ ಹೇಳಿದ್ದಾರೆ.

‘ಎಂಥ ನೀಚ ಮನಸ್ಥಿತಿ’: ದರ್ಶನ್ ಕ್ರೌರ್ಯದ ಬಗ್ಗೆ ‘ಕೆರೆಬೇಟೆ’ ಗೌರಿಶಂಕರ್ ಮಾತು

‘ದರ್ಶನ್​ ಅವರನ್ನು ಬ್ಯಾನ್​ ಮಾಡೋಕೆ ಆಗಲ್ಲ ಎಂದು ಈಗಾಗಲೇ ಚಿತ್ರರಂಗದವರು ಹೇಳಿದ್ದಾರೆ. ಅಪರಾಧ ಸಾಬೀತಾಗಬೇಕು. ನಿಷ್ಪಕ್ಷವಾದ, ನ್ಯಾಯಯುತವಾದ ತನಿಖೆ ಆಗಬೇಕು. ಬ್ಯಾನ್​ ಮಾಡೋದರಿಂದ ಈಗೇನು ಪ್ರಯೋಜನ ಇದೆ? ಈಗಾಲೇ ಅವರು ಜೈಲಿನಲ್ಲಿದ್ದಾರೆ. ನ್ಯಾಯಾಲಯದಿಂದ ಹೊರಬಂದ ಬಳಿಕ ಈ ವಿಚಾರ ಬರಬೇಕು. ಸದ್ಯಕ್ಕೆ ದರ್ಶನ್​ ಆರೋಪಿಯೇ ಹೊರತು ಅಪರಾಧಿ ಅಲ್ಲ. ಅಪರಾಧ ಸಾಬೀತಾದ ಬಳಿಕ ಚಿತ್ರರಂಗ ಮುಂದಿನ ನಿರ್ಧಾರ ತೆಗೆದುಕೊಳ್ಳಬಹುದು’ ಎಂದಿದ್ದಾರೆ ಬಿ.ಸಿ. ಪಾಟೀಲ್​.

ತಮ್ಮ ಮತ್ತು ದರ್ಶನ್​ ಒಡನಾಟದ ಬಗ್ಗೆಯೂ ಬಿ.ಸಿ. ಪಾಟೀಲ್​ ಮಾತನಾಡಿದ್ದಾರೆ. ‘ನನಗೆ ಅವರು ಕಲಾವಿದನಾಗಿ, ಸ್ವಲ್ಪ ಮಟ್ಟಿಗೆ ಸ್ನೇಹಿತನಾಗಿ ಗೊತ್ತೇ ಹೊರತು ಅವರ ಸಂಪೂರ್ಣ ವಿವರಗಳು ನನಗೆ ಗೊತ್ತಿಲ್ಲ. ಅವರ ಹತ್ತಿರ ಯಾವೆಲ್ಲ ಜನರು ಇದ್ದರು ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಕೃಷಿ ಮಂತ್ರಿ ಆಗಿದ್ದಾಗ ಅವರನ್ನು ಕೃಷಿ ಇಲಾಖೆಗೆ ಪ್ರಚಾರ ರಾಯಭಾರಿ ಮಾಡಿದ್ದೆವು. ಆಗ ಅವರು ಇಂಥ ಕೃತ್ಯದಲ್ಲಿ ಭಾಗಿ ಆಗಿರಲಿಲ್ಲ. ಜನಪ್ರಿಯ ನಟನನ್ನು ರಾಯಭಾರಿಯನ್ನಾ ಮಾಡಿದರೆ ಅದರಿಂದ ರೈತರಿಂದ ಶಕ್ತಿ ತುಂಬುತ್ತದೆ ಎಂಬುದು ನಮ್ಮ ಉದ್ದೇಶ ಆಗಿತ್ತು’ ಎಂದು ಬಿ.ಸಿ. ಪಾಟೀಲ್​ ಹೇಳಿದ್ದಾರೆ.

ವರದಿ:  ಅಣ್ಣಪ್ಪ ಬಾರ್ಕಿ

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.