‘ಬಟ್ಟೆ ಕಡಿಮೆ ಹಾಕಿ ಬೋಲ್ಡ್ ಎನಿಸಿಕೊಳ್ಳೋದಲ್ಲ, ಪಾತ್ರವೇ ಬೋಲ್ಡ್ ಆಗಿರಬೇಕು’; ‘ಬೆಂಗಳೂರು 69’ ನಟಿ ಅನಿತಾ ಭಟ್
ಈ ಚಿತ್ರದಲ್ಲಿ ಬರೋ ಹಾಡಿನಲ್ಲಿ ಅನಿತಾ ಭಟ್ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ, ಇದೇ ರೀತಿಯ ಪಾತ್ರಗಳು ಅವರನ್ನು ಹುಡುಕಿ ಬರುತ್ತಿವೆಯಂತೆ.
ನಟಿ ಅನಿತಾ ಭಟ್ (Anita Bhat) ಅವರು ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿದ್ದಾರೆ. ‘ಟಗರು’ ಮೊದಲಾದ ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಅವರ ನಟನೆಯ ‘ಬೆಂಗಳೂರು 69’ (Bengaluru 69) ಸಿನಿಮಾ ಫೆಬ್ರವರಿ 10ರಂದು ತೆರೆಗೆ ಬರುತ್ತಿದೆ. ಚಿತ್ರದ ಶೀರ್ಷಿಕೆ ಕಾರಣಕ್ಕೂ ಸಿನಿಮಾ ಗಮನ ಸೆಳೆಯುತ್ತಿದೆ. ಈಗ ನಟಿ ಅನಿತಾ ಭಟ್ ಅವರು ಈ ಚಿತ್ರದ ಬಗ್ಗೆ ಟಿವಿ9 ಕನ್ನಡ ಡಿಜಿಟಿಲ್ ಜತೆ ಮಾತನಾಡಿದ್ದಾರೆ.
‘ಬೆಂಗಳೂರು 69’ ಸಿನಿಮಾದಲ್ಲಿ ಮೂರು ಪಾತ್ರಗಳು ಮುಖ್ಯವಾಗಿ ಬರಲಿವೆಯಂತೆ. ಇದು ಕ್ರೈಂ ಥ್ರಿಲ್ಲರ್ ಸಿನಿಮಾ ಆಗಿದ್ದು, ಹಲವು ಟ್ವಿಸ್ಟ್ಗಳಿವೆ ಎನ್ನುತ್ತಾರೆ ಅನಿತಾ ಭಟ್. ‘ಇಬ್ಬರು ಹುಡುಗರು ಮತ್ತು ಒಂದು ಹುಡುಗಿ ಮಧ್ಯೆ ನಡೆಯುವ ಕಥೆ ‘ಬೆಂಗಳೂರು 69’. ಹಾಗಂತ, ಇಲ್ಲಿ ತ್ರಿಕೋನ ಪ್ರೇಮಕಥೆ ಇಲ್ಲ. ನಾನು ಕಿಡ್ನ್ಯಾಪ್ ಆಗುತ್ತೇನೆ. ನನ್ನನ್ನು ಏಕೆ ಕಿಡ್ನ್ಯಾಪ್ ಮಾಡುತ್ತಾರೆ, ಇದರ ಹಿಂದಿರೋ ಉದ್ದೇಶ ಏನು ಅನ್ನೋದು ಸಿನಿಮಾದ ಕಥೆ. ಸಿನಿಮಾಗೆ ಈ ಟೈಟಲ್ ಇಡೋಕೆ ಒಂದು ಕಾರಣ ಇದೆ. ಅದನ್ನು ಸಿನಿಮಾದಲ್ಲಿ ನೋಡಿ ತಿಳಿದುಕೊಳ್ಳಬೇಕು’ ಎನ್ನುತ್ತಾರೆ ಅನಿತಾ.
‘ಸಿನಿಮಾದಲ್ಲಿ ನಟಿಸಿದ ಶಫಿ ಹಾಗೂ ಪವನ್ ಶೆಟ್ಟಿ ಇಬ್ಬರೂ ನನಗೆ ಕ್ಲೋಸ್ ಫ್ರೆಂಡ್ಸ್. ಗೆಳೆಯರ ಜತೆ ನಟಿಸಿದ ಖುಷಿ ಇದೆ. ಇಡೀ ಸಿನಿಮಾ ಉದ್ದಕ್ಕೂ ನಾನು ಇದ್ದೇನೆ. ನನ್ನ ಪಾತ್ರಕ್ಕೆ ತೂಕ ಇದೆ. ನಾನು ಫ್ರೇಮ್ನಲ್ಲಿದ್ದರೆ ನನ್ನ ಮೇಲೆ ಕಥೆ ಸಾಗುತ್ತದೆ. ಸಿನಿಮಾದಲ್ಲಿ ಭಯ ಬೀಳುವಂತೆ ನಟಿಸುವ ದೃಶ್ಯಗಳು ಹಲವಿದೆ. ನಿಜ ಜೀವನದಲ್ಲಿ ನಾನು ಭಯ ಪಡುವವಳಲ್ಲ. ಹೀಗಾಗಿ ಭಯಗೊಂಡಂತೆ ಕಾಣೋ ದೃಶ್ಯಗಳನ್ನು ಮಾಡೋದು ಚಾಲೆಂಜ್ ಎನಿಸಿತು’ ಎಂದಿದ್ದಾರೆ ಅವರು.
ಈ ಚಿತ್ರದಲ್ಲಿ ಬರೋ ಹಾಡಿನಲ್ಲಿ ಅನಿತಾ ಭಟ್ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ, ಇದೇ ರೀತಿಯ ಪಾತ್ರಗಳು ಅವರನ್ನು ಹುಡುಕಿ ಬರುತ್ತಿವೆಯಂತೆ. ‘ಚಿತ್ರದ ಒಂದು ಹಾಡು ರಿಲೀಸ್ ಆಗಿದೆ. ಕಲ್ಪನೆಯಲ್ಲಿ ಈ ಹಾಡು ಬರುತ್ತದೆ. ಈ ಹಾಡು ರಿಲೀಸ್ ಆದ ನಂತರ ಬೋಲ್ಡ್ ಪಾತ್ರಗಳನ್ನು ಮಾಡುವಂತೆ ನನಗೆ ಆಫರ್ಗಳು ಬಂದವು. ಬಟ್ಟೆ ಕಡಿಮೆ ಹಾಕಿ ಬೋಲ್ಡ್ ಎನ್ನಿಸಿಕೊಳ್ಳಬಾರದು. ಪಾತ್ರವೇ ಬೋಲ್ಡ್ ಆಗಿರಬೇಕು. ನಾನು ನಟಿಸೋ ಪಾತ್ರಕ್ಕೆ ತೂಕ ಇರಬೇಕು. ಅಂತಹ ಪಾತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತೇನೆ’ ಎಂದಿದ್ದಾರೆ ಅನಿತಾ ಭಟ್.
ಅನಿತಾ ಭಟ್ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಕ್ಕೆ ಒಂದಷ್ಟು ಮಂದಿ ಟೀಕೆ ಮಾಡುತ್ತಿದ್ದಾರೆ. ಈ ಬಗ್ಗೆಯೂ ಅವರು ಮಾತನಾಡಿದ್ದಾರೆ. ‘ಟ್ವಿಟರ್ನಲ್ಲಿ ನನ್ನ ಪಾತ್ರಕ್ಕೆ ಅನೇಕರು ಟೀಕೆ ಮಾಡಿದ್ದಾರೆ. ಈ ವಿಚಾರದಲ್ಲಿ ಒಂದಷ್ಟು ಮಂದಿ ಪೂರ್ವಾಗ್ರಹ ಪೀಡಿತರಾಗಿದ್ದಾರೆ. ನಾನು ಹಿಂದುತ್ವವಾದಿ ಎಂದ ಮಾತ್ರಕ್ಕೆ ಬೇರೆ ಧರ್ಮದವರನ್ನು ನಾನು ದ್ವೇಷಿಸುತ್ತೇನೆ ಎಂದರ್ಥವಲ್ಲ. ಈ ಚಿತ್ರದ ಹೀರೋ ಶಫಿ ನನ್ನ ಬೆಸ್ಟ್ ಫ್ರೆಂಡ್. ನಾನು ಯಾರಿಗೂ ಉತ್ತರ ಕೊಡಬೇಕಿಲ್ಲ. ನನಗೆ ಸಮಯ ಸಿಕ್ಕರೆ ಟೀಕೆ ಮಾಡಿದವರಿಗೆ ಉತ್ತರ ಕೊಡುತ್ತೇನೆ. ಕೆಲಸದಲ್ಲಿ ಬ್ಯುಸಿ ಇದ್ರೆ ಆ ಬಗ್ಗೆ ತಲೆಕೆಡಿಸಿಕೊಳ್ಳಲ್ಲ’ ಎಂದಿದ್ದಾರೆ ಅನಿತಾ ಭಟ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ