ನಟ ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡು ಅಪಾರ ಸಂಖ್ಯೆಯ ಅಭಿಮಾನಿಗಳು ಕಣ್ಣೀರು ಸುರಿಸುತ್ತಿದ್ದಾರೆ. ಈ ನಡುವೆಯೇ ಕಿಡಿಗೇಡಿಯೊಬ್ಬ ಅಪ್ಪು ಬಗ್ಗೆ ಅವಹೇಳನಕಾರಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ. ಆತನ ಕೃತ್ಯಕ್ಕೆ ತೀವ್ರ ಖಂಡನೆ ವ್ಯಕ್ತವಾದ ಬೆನ್ನಲ್ಲೇ ಬೆಂಗಳೂರು ಸೈಬರ್ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಆತನನ್ನು ಬಂಧಿಸಿರುವ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಕಿಡಿಗೇಡಿಯ ಪೋಸ್ಟ್ ಬಗ್ಗೆ ಟಿವಿ9 ಡಿಜಿಟಲ್ನಲ್ಲಿ ಸೋಮವಾರ (ನ.1) ವರದಿ ಮಾಡಲಾಗಿತ್ತು. ಅದಕ್ಕೆ ‘ಬೆಂಗಳೂರು ಸಿಟಿ ಪೊಲೀಸ್’ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ‘ಆರೋಪಿಯನ್ನು ಬಂಧಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತದೆ’ ಎಂದು ತಿಳಿಸಲಾಗಿದೆ.
ಪುನೀತ್ ನಿಧನದ ಬಳಿಕ ಬೆಂಗಳೂರಿನಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಭಾರತದ ಮಂದಿಗೆ ಇದರಿಂದ ಕಿರಿಕಿರಿ ಆಗಿತ್ತು. ಹಾಗಾಗಿ ಪುನೀತ್ ರಾಜ್ಕುಮಾರ್ಗೆ ಅಗೌರವ ತೋರುವಂತಹ ಪೋಸ್ಟ್ಗಳನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ರಿತ್ವಿಕ್ಸ್ (ritvikks) ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತೀರಾ ಅಶ್ಲೀಲ ಪದಗಳನ್ನು ಬಳಸಿ ಪುನೀತ್ ರಾಜ್ಕುಮಾರ್ ಅವರಿಗೆ ಅವಮಾನ ಮಾಡಲಾಗಿತ್ತು.
ನಿಷೇಧದ ನಡುವೆಯೂ ರಿತ್ವಿಕ್ಸ್ ಎಂಬ ಈ ವ್ಯಕ್ತಿಗೆ ಲಿಕ್ಕರ್ ಸಿಕ್ಕಿತ್ತು. ಬಳಿಕ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಅಶ್ಲೀಲ ಪದಗಳಿಂದ ಪುನೀತ್ ರಾಜ್ಕುಮಾರ್ ಅವರನ್ನು ಅವಮಾನಿಸಿದ್ದ. ಬಿಯರ್ ಬಾಟಲಿಯ ಚಿತ್ರ ಹಂಚಿಕೊಂಡು, ‘ರಾಜ್ಕುಮಾರ್ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಆತನನ್ನು ನೆನಪಿಟ್ಟುಕೊಳ್ಳಿ. ಮರೆಯಬೇಡಿ. ಯಾಕೆಂದರೆ, ಇದನ್ನು ಕುಡಿದ ಬಳಿಕ ಅವನ ಸಮಾಧಿ ಮೇಲೆ ನಾವು ಮೂ** ಮಾಡುತ್ತೇವೆ’ ಎಂದು ಆತ ಬರೆದುಕೊಂಡಿದ್ದ.
ಕಿಡಿಗೇಡಿಯ ಈ ಪೋಸ್ಟ್ಗೆ ಜನರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು. ‘ಕೇವಲ ಆಲ್ಕೋಹಾಲ್ಗಾಗಿ ಪುನೀತ್ ಬಗ್ಗೆ ಇಂಥ ವರ್ತನೆಯೇ? ಜನರಲ್ಲಿ ಮನುಷ್ಯತ್ವ ಉಳಿದಿಲ್ಲವೇ?’ ಎಂದು ಸಾನ್ವಿ ಛೀಮಾರಿ ಹಾಕಿದ್ದರು. ಎಲ್ಲದರ ಫಲವಾಗಿ ಈಗ ಆ ಕಿಡಿಗೇಡಿಯ ಬಂಧನ ಆಗಿದೆ. ಪರ ರಾಜ್ಯದಿಂದ ಬಂದು, ಕನ್ನಡ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಕಿಂಚಿತ್ತೂ ಗೌರವ ಇಲ್ಲದಂತೆ ನಡೆದುಕೊಳ್ಳುತ್ತಿರುವ ಇಂಥ ಜನರಿಗೆ ಈ ಘಟನೆಯಿಂದ ತಕ್ಕ ಪಾಠ ಕಲಿಸಬೇಕಿದೆ.
ಅಪ್ಪು ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿತ್ತು. ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೇ ಇರಲಿ ಎಂಬುದು ಈ ಆದೇಶದ ಹಿಂದಿನ ಉದ್ದೇಶ ಆಗಿತ್ತು. ಕುಡಿದ ಅಮಲಿನಲ್ಲಿ ಅಭಿಮಾನಿಗಳು ಭಾವೋದ್ವೇಗಕ್ಕೆ ಒಳಗಾಗಬಹುದು. ಅದನ್ನು ತಪ್ಪಿಸಲು ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲಾಗಿತ್ತು.
ಇದನ್ನೂ ಓದಿ:
Puneeth Rajkumar: ‘ಪುನೀತ್ ಅತಿಯಾಗಿ ಜಿಮ್ ಮಾಡಿದ್ರು’: ಕರಾಳ ಶುಕ್ರವಾರದ ಘಟನೆ ವಿವರಿಸಿದ ಸೆಕ್ಯೂರಿಟಿ ಸಿಬ್ಬಂದಿ
ಪುನೀತ್ ಅಂತ್ಯಕ್ರಿಯೆ ಮರುದಿನ ಹೇಗಿದೆ ಶಿವಣ್ಣನ ದಿನಚರಿ? ನೋವು ನುಂಗಿಕೊಂಡು ಮುಂದಿನ ಹೆಜ್ಜೆ ಇಟ್ಟ ಶಿವರಾಜ್ಕುಮಾರ್
Published On - 8:11 am, Tue, 2 November 21