ಮತ್ತೆ ಬಂತು ಬೆಂಗಳೂರು ಚಲನಚಿತ್ರೋತ್ಸವ: ಉದ್ಘಾಟನೆ ಎಂದು?

|

Updated on: Jan 03, 2024 | 3:15 PM

Bengaluru Film Festival: ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತು ಪಡೆದಿರುವ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತೆ ಬಂದಿದೆ. ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭದ ದಿನಾಂಕ ನಿಗದಿಯಾಗಿದೆ.

ಮತ್ತೆ ಬಂತು ಬೆಂಗಳೂರು ಚಲನಚಿತ್ರೋತ್ಸವ: ಉದ್ಘಾಟನೆ ಎಂದು?
Follow us on

ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಪ್ರತಿಷ್ಠೆ, ಗುರುತು ಹೊಂದಿರುವ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ (Bengaluru international film festival) ಮತ್ತೆ ಬಂದಿದೆ. ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ಚಲನಚಿತ್ರೋತ್ಸವವನ್ನು ನಡೆಸಿಕೊಂಡು ಬರಲಾಗಿದೆ. ಈ ಬಾರಿಯದ್ದು 15 ನೇ ಚಲನಚಿತ್ರೋತ್ಸವ ಆಗಿದ್ದು, ಇಂದು (ಡಿಸೆಂಬರ್ 03) ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗೃಹ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆದಿದ್ದು, ಉದ್ಘಾಟನಾ ದಿನಾಂಕ ಘೋಷಣೆ ಮಾಡಲಾಗಿದೆ.

ಸಂಘಟನಾ ಸಮಿತಿಯ ಸಭೆಯನ್ನು ಸಿಎಂ ನಿವಾಸದಲ್ಲಿ ನಡೆಸಲಾಗಿದ್ದು, ಬಳಿಕ ಮಾತನಾಡಿದ ಸಿಎಂ, ‘‘ನನ್ನ ಅಧ್ಯಕ್ಷತೆಯಲ್ಲಿ ಇಂದು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಂಘಟನಾ ಸಮಿತಿ ಸಭೆ ನಡೆದಿದೆ, ಫೆಬ್ರವರಿ 29 ರಿಂದ ಮಾರ್ಚ್ 7ವರೆಗೂ ಚಲನಚಿತ್ರೋತ್ಸವ ನಡೆಸಲು ತೀರ್ಮಾನ ಮಾಡಿದ್ದೇವೆ. ಇದು 15ನೇ ಆವೃತ್ತಿ ಆಗಿದೆ, ನಿಯಮದಂತೆ ಸಿಎಂ ಉದ್ಘಾಟನೆ ಮಾಡಲಿದ್ದಾರೆ, ದೇಶ ವಿದೇಶಗಳಲ್ಲಿ ಈ ಚಲನಚಿತ್ರೋತ್ಸವ ಮನ್ನಣೆ ಪಡೆದಿದೆ, ವಿಧಾನಸೌಧ ಮುಂಭಾಗ ಉದ್ಘಾಟನೆ ಮಾಡಲಾಗುತ್ತೆ, ಮಾರ್ಚ್ 7ನೇ ತಾರೀಖು ಸಮಾರೋಪ ಸಮಾರಂಭ ನಡೆಯುತ್ತೆ, ರಾಜ್ಯಪಾಲರು ಪ್ರಶಸ್ತಿಗಳನ್ನು ನೀಡುತ್ತಾರೆ. ಚಿತ್ರೋತ್ಸವ ಸಂಬಂಧ ಕೋರ್ ಕಮಿಟಿ ಮಾಡಿದ್ದೇವೆ. ವಿದೇಶದಿಂದ ಉತ್ತಮ ಚಿತ್ರಗಳನ್ನ ತರಿಸುತ್ತೇವೆ, ಕೋಮುವಾದ, ಸಮಾನತೆ, ಶಾಂತಿ ಸೌಹಾರ್ದತೆ ಬಗ್ಗೆ ಸಾರುವ ಚಿತ್ರಗಳ ಪ್ರದರ್ಶನ ನಡೆಯುತ್ತೆ’’ ಎಂದು ಮಾಹಿತಿ ನೀಡಿದರು.

ಚಲನಚಿತ್ರೋತ್ಸವ ಆಯೋಜನೆಗೆ 1.61 ಕೋಟಿ ರೂ. ಲಭ್ಯವಿದ್ದು, ಹೆಚ್ಚುವರಿಯಾಗಿ ಅಗತ್ಯವಿರುವ ಅನುದಾನ ಒದಗಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಗಲಿದ ಕನ್ನಡ ಚಿತ್ರರಂಗದ ಗಣ್ಯರಾದ ಲೀಲಾವತಿ, ಭಗವಾನ್‌ ಮತ್ತು ಸಿ.ವಿ.ಶಿವಶಂಕರ್‌ ಅವರುಗಳಿಗೆ ಗೌರವ ಸಲ್ಲಿಸಲು ಅವರ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಚಲನಚಿತ್ರೋತ್ಸವದಲ್ಲಿ ಸೌಹಾರ್ದತೆ, ಸಹಬಾಳ್ವೆ, ಸಂವಿಧಾನ ಪ್ರಜ್ಞೆಯನ್ನು ಜಾಗೃತಗೊಳಿಸುವ ವಿಚಾರಗಳು, ಎಲ್ಲರ ಒಳಗೊಳ್ಳುವಿಕೆಯ (inclusiveness) ಕುರಿತ ಚಿತ್ರಗಳಿಗೆ ಒತ್ತು ನೀಡಲು, ಮನುಷ್ಯತ್ವದ ಸಂದೇಶ ನೀಡಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ:ಮುಂಬೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಿಷಬ್ ಶೆಟ್ಟಿಯ ಸಿನಿಮಾ, ‘ಕಾಂತಾರ’ ಅಲ್ಲ

ಚಿತ್ರೋತ್ಸವದ ಸಂಘಟನಾ ಸಮಿತಿಯನ್ನು ಹಾಗೂ ಸರ್ಕಾರದ ಕಾರ್ಯದರ್ಶಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಕೋರ್ ಸಮಿತಿಯನ್ನು ಡಿಸೆಂಬರ್ 30 ರಂದು ರಚಿಸಿ ಆದೇಶ ಹೊರಡಿಸಲಾಗಿದೆ.
ಅದರನ್ವಯ ಚಿತ್ರೋತ್ಸವದ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಮೊದಲ ಹಂತದಲ್ಲಿ ದೇಶ-ವಿದೇಶಗಳ ಉತ್ತಮ ಸಿನಿಮಾಗಳನ್ನು ಚಿತ್ರೋತ್ಸವದಲ್ಲಿನ ಪ್ರದರ್ಶನಕ್ಕಾಗಿ ತರಿಸಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ
ಚಿತ್ರೋತ್ಸವದ ಕೆಲಸಗಳಲ್ಲಿ ಪರಿಣಿತಿ ಹೊಂದಿರುವ ವಿದ್ಯಾಶಂಕರ್‌ ಅವರನ್ನು ಕಲಾತ್ಮಕ ನಿರ್ದೇಶಕರಾಗಿ ನೇಮಕಮಾಡಲಾಗಿದೆ.

ಇದರೊಂದಿಗೆ ಸಂಘಟಕರು, ತಾಂತ್ರಿಕ ಸಲಹೆಗಾರರು, ಸ್ವಯಂ ಸೇವಕರುಗಳನ್ನು ತಾತ್ಕಾಲಿಕವಾಗಿ ನೇಮಿಸಿಕೊಂಡು ಸಂಭಾವನೆ ಆಧಾರದಲ್ಲಿ ಇವರ ಸೇವೆಯನ್ನು ಪಡೆಯಲು ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರೂ ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲ ರೀತಿಯ ನೆರವು ನೀಡುವುದಾಗಿ ಅಧ್ಯಕ್ಷರು ತಿಳಿಸಿದ್ದಾರೆ
ಪ್ರತಿ ವರ್ಷದಂತೆ ಒರಿಯಾನ್ ಮಾಲ್ ನಲ್ಲಿರುವ ಪಿವಿಆರ್ ನ 11 ಪರದೆಗಳಲ್ಲಿ ಚಿತ್ರ ಪ್ರದರ್ಶನ ಮಾಡಲಾಗುವುದು. ಫೆಬ್ರವರಿ 29 ರಂದು ಗುರುವಾರ ಸಂಜೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಾರ್ಚ್ 01 ರಿಂದ 07 ರವರೆಗೆ ಚಿತ್ರೋತ್ಸವದ ಚಲನಚಿತ್ರ ಪ್ರದರ್ಶನ ನಡೆಯಲಿದೆ. ಮಾರ್ಚ್ 07 ರಂದು ಗುರುವಾರ ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ರಾಜ್ಯಪಾಲರು ಪ್ರಶಸ್ತಿ ವಿತರಣೆ ಮಾಡಲಿದ್ದಾರೆ. ಉದ್ಘಾಟನಾ ಸಮಾರಂಭವನ್ನು ವಿಧಾನಸೌಧದ ಮುಂಭಾಗದಲ್ಲಿ ಆಯೋಜನೆಗೊಳ್ಳಲಿದೆ. ಸಮಾರೋಪ ಸಮಾರಂಭವನ್ನು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜನೆಗೊಳ್ಳಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ