ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನ: ಘಟನೆ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತರು
ಚಿತ್ರದುರ್ಗದ ರೇಣುಕಾ ಸ್ವಾಮಿ ಹೆಸರಿನ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಅವರನ್ನು ಬಂಧಿಸಲಾಗಿದೆ. ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ್ ಸುದ್ದಿಗೋಷ್ಠಿ ನಡೆಸಿ ಘಟನೆ ಬಗ್ಗೆ ವಿವರ ನೀಡಿದ್ದಾರೆ.
ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ (Darshan Thugudeepa) ಅವರನ್ನು ಮೈಸೂರಿನ ರ್ಯಾಡಿಸನ್ ಹೋಟೆಲ್ನಲ್ಲಿ ಇಂದು (ಜೂನ್ 11) ಬೆಳಿಗ್ಗೆ ಬಂಧಿಸಲಾಗಿದೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬುವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಹಾಗೂ ಇನ್ನೂ ಹತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ ಸುದ್ದಿಗೋಷ್ಠಿ ನಡೆಸಿದ್ದು, ‘ಜೂನ್ 9 ರಂದು ಭಾನುವಾರದಂದು ಕಾಮಾಕ್ಷಿಪಾಳ್ಯದಲ್ಲಿ ಅಪರಿಚಿತ ಶವವೊಂದು ಸಿಕ್ಕಿತ್ತು. ಆತನ ದೇಹದ ಮೇಲೆ ಇದ್ದ ಗಾಯಗಳನ್ನು ಗಮನಿಸಿ ಕಾಮಾಕ್ಷಿಪಾಳ್ಯದ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದೆವು. ಅದಾದ ಬಳಿಕ ಸಿಸಿಟಿವಿ ಹಾಗೂ ಇತರೆ ತಾಂತ್ರಿಕ ಆಧಾರದ ಮೇಲೆ ವ್ಯಕ್ತಿಯ ಗುರುತು ಪರಿಚಯ ಗೊತ್ತಾಗಿದ್ದು, ಆತ ಚಿತ್ರದುರ್ಗದ ವಾಸಿ ರೇಣುಕಾ ಸ್ವಾಮಿ ಎಂಬ ಗುರುತು ಪತ್ತೆಯಾಯ್ತು’ ಎಂದಿದ್ದಾರೆ.
ಇದನ್ನೂ ಓದಿ:ಕೊಲೆ ಕೇಸ್ನಲ್ಲಿ ನಟ ದರ್ಶನ್ ಅರೆಸ್ಟ್; ಬೆಂಗಳೂರಿನ ಮನೆ ಬಳಿ ಪೊಲೀಸ್ ಭದ್ರತೆ
ಮುಂದಿನ ತನಿಖೆಯಲ್ಲಿ ಕನ್ನಡ ಚಿತ್ರರಂಗದ ನಟ ಹಾಗೂ ಆತನ ಸಹಚರರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ರೇಣುಕಾ ಸ್ವಾಮಿ ದರ್ಶನ್ ಪತ್ನಿಗೆ ಅವಾಚ್ಯ ಸಂದೇಶಗಳನ್ನು ಕಳಿಸಿದ್ದಾನೆ ಎಂಬ ಕಾರಣಕ್ಕೆ ಆತನ ಕೊಲೆ ಮಾಡಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ’ ಎಂದಿದ್ದಾರೆ ಆಯುಕ್ತ ದಯಾನಂದ.
‘ಈ ವರೆಗೆ ಸುಮಾರು 10ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಶ್ನೋತ್ತರ ನಡೆಯುತ್ತಿದೆ. ಮುಂದಿನ ಕಾನೂನು ಕ್ರಮಗಳನ್ನು ನಡೆಸಲಾಗುತ್ತದೆ. ತನಿಖೆಯ ಆರಂಭಿಕ ಹಂತದಲ್ಲಿ ಇರುವ ಕಾರಣ ಪ್ರಕರಣದ ಬಗೆಗೆ ಈಗ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ಆಗುವುದಿಲ್ಲ’ ಎಂದಿದ್ದಾರೆ ಪೊಲೀಸ್ ಆಯುಕ್ತ ದಯಾನಂದ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:24 am, Tue, 11 June 24