ಸೋನು ನಿಗಂಗೆ ನೊಟೀಸ್ ನೀಡಲಿರುವ ಬೆಂಗಳೂರು ಪೊಲೀಸ್

Sonu Nigam on Kannada: ಗಾಯಕ ಸೋನು ನಿಗಂ ಕನ್ನಡಿಗರ ಬಗ್ಗೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅದರ ಬೆನ್ನಲ್ಲೆ ಸೋನು ನಿಗಂ ಮೇಲೆ ಕೆಲ ಕನ್ನಡಪರ ಸಂಘಟನೆಗಳು ದೂರು ದಾಖಲಿಸಿದ್ದು ಕ್ರಮಕ್ಕೆ ಒತ್ತಾಯಿಸಿವೆ. ಇದೀಗ ಬೆಂಗಳೂರು ಪೊಲೀಸರು ಸಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸೋನು ನಿಗಂಗೆ ನೊಟೀಸ್ ನೀಡಲು ಸಜ್ಜಾಗಿದ್ದಾರೆ.

ಸೋನು ನಿಗಂಗೆ ನೊಟೀಸ್ ನೀಡಲಿರುವ ಬೆಂಗಳೂರು ಪೊಲೀಸ್
Sonu Nigam

Updated on: May 04, 2025 | 10:11 PM

ಗಾಯಕ ಸೋನು ನಿಗಂ (Sonu Nigam), ಕನ್ನಡಿಗರ ಕನ್ನಡಾಭಿಮಾನವನ್ನು ಭಯೋತ್ಪಾದನೆಗೆ ಹೋಲಿಸಿ ನೀಡಿರುವ ಹೇಳಿಕೆ ಕನ್ನಡಿಗರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಲೈವ್ ಶೋ ಮಾಡಿದ್ದ ಸೋನು ನಿಗಂ, ಹಿಂದಿ ಹಾಡುಗಳನ್ನು ಹಾಡುತ್ತಿದ್ದಾಗ ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹಾಡುವಂತೆ ಒತ್ತಾಯಿಸಿದ್ದ. ಇದರಿಂದ ಸಿಟ್ಟಿಗೆದ್ದಿದ್ದ ಸೋನು ನಿಗಂ, ‘ಕನ್ನಡ, ಕನ್ನಡ ಇಂಥಹುದರಿಂದಲೇ ಪಹಲ್ಗಾಮ್ ದಾಳಿ ಆಗಿದ್ದು’ ಎಂದು ಕನ್ನಡಾಭಿಮಾನವನ್ನು ಭಯೋತ್ಪಾದನೆಗೆ ಹೋಲಿಕೆ ಮಾಡಿದ್ದರು.

ಸೋನು ನಿಗಂ ಅವರ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿದ್ದು, ಸೋನು ನಿಗಂ ವಿರುದ್ಧ ದೂರುಗಳು ದಾಖಲಾಗಿವೆ. ಸೋನು ನಿಗಂ ಅನ್ನು ಕನ್ನಡ ಚಿತ್ರರಂಗಿಂದ ಬ್ಯಾನ್ ಮಾಡಬೇಕು ಎಂಬ ಒತ್ತಾಯವೂ ಸಹ ಕೇಳಿಬಂದಿದೆ. ಅದರ ಬೆನ್ನಲ್ಲೆ ಇದೀಗ ಬೆಂಗಳೂರು ಪೊಲೀಸರು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನು ನಿಗಂಗೆ ನೊಟೀಸ್ ನೀಡಿ, ವಿಚಾರಣೆಗೆ ಕರೆಯಲು ಸಜ್ಜಾಗಿದ್ದಾರೆ.

ಪೊಲೀಸ್ ಮೂಲಗಳು ಹೇಳಿರುವಂತೆ ಇ-ಮೇಲ್ ಮೂಲಕ ಸೋನು ನಿಗಂ ಅವರಿಗೆ ನೊಟೀಸ್ ನೀಡಲಿದ್ದಾರೆ ಬೆಂಗಳೂರಿನ ಪೊಲೀಸರು. ನೊಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಿದ್ದಾರೆ. ಬೆಂಗಳೂರು ಪೊಲೀಸರ ನೊಟೀಸ್​ಗೆ ಸೋನು ನಿಗಂ ಹೇಗೆ ಪ್ರತಿಕ್ರಿಯೆ ನೀಡುತ್ತಾರೆಯೇ ಕಾದು ನೋಡಬೇಕಿದೆ. ಸೋನು ನಿಗಂ ವಿರುದ್ಧ ಈಗಾಗಲೇ ದೂರು ನೀಡಲಾಗಿದೆಯಾದರೂ ಎಫ್​ಐಆರ್ ದಾಖಲಾದಂತಿಲ್ಲ. ಮೊದಲಿಗೆ ನೊಟೀಸ್ ನೀಡಿ, ವಿಚಾರಣೆ ನಡೆಸಿ ಅಗತ್ಯವೆನಿಸಿದರೆ ಎಫ್​ಐಆರ್ ದಾಖಲಿಸುವ ಸಾಧ್ಯತೆ ಇದೆ. ಸೋನು ನಿಗಂ ಖುದ್ದಾಗಿ ವಿಚಾರಣೆಗೆ ಹಾಜರಾಗುತ್ತಾರೆಯೇ ಅಥವಾ ಇ-ಮೇಲ್ ಮೂಲಕವೇ ಪೊಲೀಸರ ನೋಟೀಸ್​ಗೆ ಉತ್ತರ ನೀಡುತ್ತಾರೆಯೇ ಕಾದು ನೋಡಬೇಕಿದೆ.

ತಮ್ಮ ಹೇಳಿಕೆಗೆ ಕನ್ನಡಿಗರ ವಿರೋಧ ವ್ಯಕ್ತವಾದ ಬಳಿಕ ವಿಡಿಯೋ ಒಂದನ್ನು ಅಪ್​ಲೋಡ್ ಮಾಡಿರುವ ಸೋನು ನಿಗಂ. ‘ಕನ್ನಡ, ಕನ್ನಡ ಎಂದು ಭಾಷೆಯ ಹೆಸರಲ್ಲಿ ಬೆದರಿಸುವ ಪ್ರಯತ್ನವನ್ನು ಅಂದು ಕೆಲವರು ಮಾಡಿದರು’ ಎಂದಿದ್ದಾರೆ. ‘ಕನ್ನಡ.. ಕನ್ನಡ’ ಎಂದು ಪ್ರೀತಿಯಿಂದ ಕರೆಯುವುದಕ್ಕೂ ‘ಕನ್ನಡ.. ಕನ್ನಡ’ ಎಂದು ಧಮ್ಕಿ ಹಾಕುವುದಕ್ಕೂ ವ್ಯತ್ಯಾಸ ಇದೆ, ಅಂದು ವೇದಿಕೆ ಕೆಳಗೆ ನಾಲ್ಕೈದು ಜನರು ಗುಂಡಾಗಳು ಇದ್ದರು, ಕೂಗಾಡುತ್ತಿದ್ದರು. ಅವರು ತುಂಬಾನೇ ತೊಂದರೆ ಮಾಡುತ್ತಿದ್ದರು. ಪಹಲ್ಗಾಮ್​ನಲ್ಲಿ ಪ್ಯಾಂಟ್ ಕಳಚುವಾಗ ಭಾಷೆ ಕೇಳಿಲ್ಲ ಎಂಬುದನ್ನು ಅವರಿಗೆ ಹೇಳೋದು ಅನಿವಾರ್ಯವಾಗಿತ್ತು’ ಎಂದಿದ್ದಾರೆ ಸೋನು ನಿಗಮ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ