ಕೊವಿಡ್ ಹಬ್ಬುತ್ತಿರುವ ವೇಗ ಕಂಡು ಅನೇಕರಿಗೆ ಭಯ ಆರಂಭವಾಗಿದೆ. ಇನ್ನು, ಕೊವಿಡ್ ಎರಡನೇ ಅಲೆಯಿಂದ ಮೃತಪಡುವವರ ಸಂಖ್ಯೆ ಕೂಡ ಅಧಿಕವಾಗುತ್ತಿದ್ದು, ಜನರ ಆತಂಕ ಮತ್ತಷ್ಟು ಹೆಚ್ಚಾಗಿದೆ. ಇನ್ನು, ಕೊವಿಡ್ ಬಂದು ಆಸ್ಪತ್ರೆ ಸೇರಿದರೆ ನರಕಯಾತನೆ ಅನುಭವಿಸಬೇಕಾಗುತ್ತದೆ ಎಂಬುದು ಅನೇಕರ ನಂಬಿಕೆ. ಕೊವಿಡ್ ಪಾಸಿಟಿವ್ ಬಂದು ಆಸ್ಪತ್ರೆ ಸೇರಿದ ನಂತರದಲ್ಲಿ ಅನೇಕರು ಜೀವನದ ಮೇಲೆ ಉತ್ಸಾಹವನ್ನೇ ಕಳೆದುಕೊಂಡು ಬಿಡುತ್ತಾರೆ. ಈಗ ನಟಿ ಹರ್ಷಿಕಾ ಪೂಣಚ್ಚ, ನಟ ಭುವನ್ ಪೊನ್ನಣ್ಣ ಕೊವಿಡ್ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳನ್ನು ರಂಜಿಸಿದ್ದಾರೆ. ಈ ಮೂಲಕ ಮತ್ತೆ ಅವರಲ್ಲಿ ಜೀವನೋತ್ಸಾಹ ತುಂಬಿದ್ದಾರೆ.
ಕೊವಿಡ್ ಬಂದ ನಂತರದಲ್ಲಿ ಅನೇಕರು ಆಸ್ಪತ್ರೆ ಸೇರುತ್ತಾರೆ. ಅಲ್ಲಿಗೆ ತೆರಳಿದ ನಂತರದಲ್ಲಿ ಕೆಲವರು ಭಯಕ್ಕೊಳಗಾಗುತ್ತಾರೆ. ವೈರಸ್ ಅಂಟಿದವರ ಆತ್ಮಸ್ಥೈರ್ಯವನ್ನು ಮತ್ತಷ್ಟು ಕುಗ್ಗಿಸುತ್ತದೆ. ಹೀಗಾಗಬಾರದು ಎನ್ನುವ ಉದ್ದೇಶದಿಂದ ಮಡಿಕೇರಿ ಸರ್ಕಾರಿ ಆಸ್ಪತ್ರೆಯ ಕೊರೊನ ವಾರ್ಡ್ಗಳಿಗೆ ಭೇಟಿ ನೀಡಿದ ಹರ್ಷಿಕ ಪೂಣಚ್ಚ, ನಟ ಭುವನ್ ಪೊನ್ನಣ್ಣ ರೋಗಿಗಳಿಗೆ ಧೈರ್ಯ ತುಂಬಿದ್ದಾರೆ.
ಕನ್ನಡದ ಹಾಡಿಗೆ ಹರ್ಷಿಕಾ ಹಾಗೂ ಭುವನ್ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ರೋಗಿಗಳಿಗೆ ಮನರಂಜನೆ ನೀಡಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಅಲ್ಲದೆ, ಇಬ್ಬರ ಕಾರ್ಯಕ್ಕೆ ಅನೇಕ ಕಡೆಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಕೊರೊನಾ ವೈರಸ್ ಹೆಚ್ಚುತ್ತಿರುವ ಮಧ್ಯೆಯೇ ಅನೇಕ ಸೆಲೆಬ್ರಿಟಿಗಳು ಜನಸಾಮಾನ್ಯರ ಸೇವೆಗೆ ನಿಂತಿದ್ದಾರೆ. ಕೆಲವರು ಮನೆಯಿಂದ ಹೊರ ಬಂದು ಸೇವೆ ನೀಡುತ್ತಿದ್ದರೆ, ಇನ್ನೂ ಕೆಲವರು ಮನೆಯಲ್ಲಿದ್ದುಕೊಂಡೇ ಆರ್ಥಿಕ ಸಹಾಯ ನೀಡುತ್ತಿದ್ದಾರೆ. ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಕೂಡ ಕೊವಿಡ್ ರೋಗಿಗಳ ಸಹಾಯಕ್ಕೆ ನಿಂತಿದ್ದಾರೆ. ಹೆಲ್ಪ್ಲೈನ್ ಆರಂಭಿಸಿ ಎಲ್ಲರಿಗೂ ಸಹಾಯ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಕಷ್ಟದಲ್ಲಿರುವ ಹಿರಿಯ ನಟರಿಗೆ ಭುವನ್ ಸಹಾಯ ಮಾಡಿದ್ದರು.
ಇದನ್ನೂ ಓದಿ: ಭುವನ್ ಪೊನ್ನಣ್ಣ ನಿಜವಾದ ಬಿಗ್ ಬಾಸ್; ಕೊವಿಡ್ ಸಂಕಷ್ಟದಲ್ಲಿ ಮಾಡಿದ ಸಹಾಯ ನೆನೆದು ಭಾವುಕರಾದ ಹಿರಿಯ ನಟ
Published On - 6:58 pm, Mon, 31 May 21