ಕೊರೊನಾದಿಂದ ಉಂಟಾದ ಭೀಕರ ಸ್ಥಿತಿ ಹಾಗೂ ಸರ್ಕಾರದ ನಿಷ್ಕಾಳಜಿಯನ್ನು ಇಂಚಿಂಚು ವಿವರಿಸಿದ ನಟ ಭುವನ್ ಪೊನ್ನಣ್ಣ

ನಟಿ ಹರ್ಷಿಕಾ ಪೂಣಚ್ಚ, ಭುವನ್​ ಪೊನ್ನಣ್ಣ ಮೊದಲಾದವರು ಸೇರಿ ಕೊವಿಡ್ ಹೆಲ್ಪ್​ಲೈನ್​ ಒಂದನ್ನು ಆರಂಭಿಸಿದ್ದಾರೆ. ಇದಕ್ಕೆ ಕಳೆದ ಮೂರ್ನಾಲ್ಕು ದಿನಗಳಿಂದ ಸಾಕಷ್ಟು ಕರೆಗಳು ಬರುತ್ತಿವೆಯಂತೆ.

  • TV9 Web Team
  • Published On - 19:00 PM, 1 May 2021
ಕೊರೊನಾದಿಂದ ಉಂಟಾದ ಭೀಕರ ಸ್ಥಿತಿ ಹಾಗೂ ಸರ್ಕಾರದ ನಿಷ್ಕಾಳಜಿಯನ್ನು ಇಂಚಿಂಚು ವಿವರಿಸಿದ ನಟ ಭುವನ್ ಪೊನ್ನಣ್ಣ
ಭುವನ್​ ಪೊನ್ನಣ್ಣ

ಕೊರೊನಾ ವೈರಸ್​ ಹೆಚ್ಚುತ್ತಿರುವ ಮಧ್ಯೆಯೇ ಅನೇಕ ಸೆಲೆಬ್ರಿಟಿಗಳು ಜನ ಸಾಮಾನ್ಯರ ಸೇವೆಗೆ ನಿಂತಿದ್ದಾರೆ. ಕೆಲವರು ಮನೆಯಿಂದ ಹೊರ ಬಂದು ಸೇವೆ ನೀಡುತ್ತಿದ್ದರೆ, ಇನ್ನೂ ಕೆಲವರು ಮನೆಯಲ್ಲಿದ್ದುಕೊಂಡೇ ಆರ್ಥಿಕ ಸಹಾಯ ನೀಡುತ್ತಿದ್ದಾರೆ. ನಟ ಭುವನ್​​ ಪೊನ್ನಣ್ಣ ಕೂಡ ಕೊವಿಡ್​ ರೋಗಿಗಳ ಸಹಾಯಕ್ಕೆ ನಿಂತಿದ್ದಾರೆ. ಕೊರೊನಾ ಭೀಕರ ಸ್ಥಿತಿ ಹಾಗೂ ಸರ್ಕಾರದ ನಿಷ್ಕಾಳಜಿ ಬಗ್ಗೆ ಅವರು ಇಂಚಿಂಚು ವಿವರಿಸಿದ್ದಾರೆ.

ನಟಿ ಹರ್ಷಿಕಾ ಪೂಣಚ್ಚ, ಭುವನ್​ ಪೊನ್ನಣ್ಣ ಮೊದಲಾದವರು ಸೇರಿ ಕೊವಿಡ್ ಹೆಲ್ಪ್​ಲೈನ್​ ಒಂದನ್ನು ಆರಂಭಿಸಿದ್ದಾರೆ. ಇದಕ್ಕೆ ಕಳೆದ ಮೂರ್ನಾಲ್ಕು ದಿನಗಳಿಂದ ಸಾಕಷ್ಟು ಕರೆಗಳು ಬರುತ್ತಿವೆಯಂತೆ. ಈ ಬಗ್ಗೆ ಮಾತನಾಡಿರುವ ಅವರು, ನಾಲ್ಕು ದಿನಗಳಲ್ಲಿ ಸುಮಾರು 9 ಸಾವಿರಕ್ಕೂ ಅಧಿಕ ಜನರು ಸಹಾಯ ಕೇಳಿದ್ದಾರೆ. ಶೇ. 90 ಜನರಿಗೆ ಬೆಂಗಳೂರಲ್ಲಿ ಐಸಿಯು ಬೆಡ್​ ಸಿಗುತ್ತಿಲ್ಲ. ಬೆಡ್​ ಸಿಗುತ್ತಿಲ್ಲ ಅಣ್ಣಾ ಎಂದು ಹೇಳುತ್ತಲೇ ಹುಡುಗನೊಬ್ಬ ಕೊನೆಯುಸಿರೆಳೆದ. ಇದಕ್ಕೆ ಯಾರು ಜವಾಬ್ದಾರಿ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಕೊರೊನಾ ರೋಗಿಗಳಿಗೆ ಸಹಾಯಕ್ಕೆ ಬರಲೆಂದು ಸರ್ಕಾರ ಸಾಕಷ್ಟು ಸಹಾಯವಾಣಿ ಸಂಖ್ಯೆ ಕೊಟ್ಟಿದೆ. ನಮ್ಮ ತಂಡ ಎಲ್ಲಾ ನಂಬರ್​​ಗಳಿಗೆ​ ಕರೆ ಮಾಡಿದೆ. ಆದರೆ, ಯಾರೂ ಕರೆ ಸ್ವೀಕರಿಸುತ್ತಿಲ್ಲ. ಏಕೆ ಹೀಗೆ ಎಂದು ಭುವನ್​ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ಇದರ ಜತೆಗೆ ಅವರು ಸರ್ಕಾರದ ಮುಂದೆ ಒಂದಷ್ಟು ಪ್ರಶ್ನೆಗಳನ್ನು ಇಟ್ಟಿದ್ದಾರೆ.

*ಜನರು ಸಾಯುತ್ತಾ ಇದ್ದರೂ ಕೂಡ ನಮ್ಮ ಜನ ಪ್ರತಿನಿಧಿಗಳು ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ ಏಕೆ?

*ಕೊರೊನಾ ಮೊದಲನೆ ಅಲೆ ಸಂದರ್ಭದಲ್ಲಿ 6 ಸಾವಿರ ಬೆಡ್​ ಹಾಕಿ ಕೊವಿಡ್​ ಸೆಂಟರ್​ ಸ್ಥಾಪಿಸಿದ್ದರು. ಈಗ ಬಡವರು ಸಾಯುತ್ತಾ ಇದಾರೆ. ಹೀಗಿದ್ದರೂ ಕೊವಿಡ್​ ಸೆಂಟರ್​ ಏಕೆ ತೆರೆದಿಲ್ಲ?

*ಜನರೇ ಪೆದ್ದರಾಗಬೇಡಿ. ಜನಪ್ರತಿನಿಧಿ ಬಳಿ ಸಹಾಯ ಬೇಕು ಎನ್ನಿ. ಸಹಾಯ ಮಾಡಲು ಆಗಲ್ಲ ಎಂದು ಅವರು ಹೇಳಿದರೆ ಮುಂದಿನ ಬಾರಿ ಎಲೆಕ್ಷನ್ ವೇಳೆ​ ಮನೆಗೆ ಬಂದು ವೋಟ್​ ಕೇಳಿದಾಗ ಬಯ್ದು ಕಳುಹಿಸಿ. ಜನರು ಏನನ್ನಾದರೂ ಮರೆಯಬಹುದು. ಆದರೆ, ಕುಟುಂಬದವರು ಮೃತಪಟ್ಟಿದ್ದಾರೆ ಎಂದರೆ ಅದನ್ನು ಮರೆಯಲ್ಲ.

*ರೆಮಿಡಿಸಿವಿರ್ ಇಂಜೆಕ್ಷನ್​ ಬ್ಲ್ಯಾಕ್​ ಮಾರ್ಕೆಟ್​ನಲ್ಲಿ 30 ಸಾವಿರ ರೂಪಾಯಿಗೆ ಮಾರಾಟ ಆಗುತ್ತಿದೆ. ಆಸ್ಪತ್ರೆಯಲ್ಲಿ ಈ ಇಂಜೆಕ್ಷನ್​ ಸಿಗುತ್ತಿಲ್ಲ. ಬಡವರ ಬಳಿ ಇಷ್ಟು ಹಣ ಎಲ್ಲಿಂದ ಬರಬೇಕು? ಇದಕ್ಕೆ ಸರ್ಕಾರ ಉತ್ತರ ನೀಡಬೇಕು.

ಇದನ್ನೂ ಓದಿ: ಖ್ಯಾತ ನಿರ್ದೇಶಕ-ಸಿನಿಮಾಟೋಗ್ರಫರ್ ಕೆ.ವಿ.ಆನಂದ್ ಅವರು ಕೊರೊನಾ ದಿಂದ ನಿಧನರಾಗಿದ್ದಾರೆ