‘ವಿನಾಶ ಕಾಲೆ’ ಸಿನಿಮಾಗೆ ಸಾಥ್ ನೀಡಿದ ಮಲ್ಲಮ್ಮ, ಡಾಗ್ ಸತೀಶ್, ಕರಿಬಸಪ್ಪ

ಬಿಗ್ ಬಾಸ್ ಖ್ಯಾತಿಯ ಮಲ್ಲಮ್ಮ ಅವರು ‘ವಿನಾಶ ಕಾಲೆ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಎಸ್. ಕಿರಣ್‌ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ಮುಹೂರ್ತ ನಡೆದಿದೆ. ಮುಹೂರ್ತ ಸಮಾರಂಭಕ್ಕೆ ಡಾಗ್ ಸತೀಶ್, ಕರಿಬಸಪ್ಪ ಮುಂತಾದವರು ಆಗಮಿಸಿದ್ದರು. ‘ಶಕ್ತಿ ಫಿಲ್ಮ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ.

‘ವಿನಾಶ ಕಾಲೆ’ ಸಿನಿಮಾಗೆ ಸಾಥ್ ನೀಡಿದ ಮಲ್ಲಮ್ಮ, ಡಾಗ್ ಸತೀಶ್, ಕರಿಬಸಪ್ಪ
Vinasha Kale Movie Team

Updated on: Feb 08, 2026 | 11:32 AM

‘ವಿನಾಶ ಕಾಲೆ ವಿಪರೀತ ಬುದ್ದಿ’ ಎಂಬ ಮಾತಿದೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗಲ್ಲ ಎನ್ನುತ್ತಾರೆ. ‘ವಿನಾಶ ಕಾಲೆ’ (Vinasha Kale) ಎಂಬುದನ್ನೇ ಶೀರ್ಷಿಕೆಯಾಗಿ ಇಟ್ಟುಕೊಂಡು ಹೊಸ ಸಿನಿಮಾ ಮೂಡಿಬರುತ್ತಿದೆ. ಇತ್ತೀಚೆಗೆ ಈ ಸಿನಿಮಾಗೆ ಮುಹೂರ್ತ ಮಾಡಲಾಯಿತು. ರಾಜಾಜಿನಗರದ ಕೈಗಾರಿಕಾ ಕೇಂದ್ರದಲ್ಲಿರುವ ಮದ್ದುರಮ್ಮ ದೇವಿ ಹಾಗೂ ಯಲ್ಲಮ್ಮ ದೇವಿ ಸನ್ನಿಧಿಯಲ್ಲಿ ಮುಹೂರ್ತ ಸಮಾರಂಭ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ.ಮ. ಹರೀಶ್ ಅವರು ಈ ಚಿತ್ರದ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಈ ವೇಳೆ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಸ್ಪರ್ಧಿಗಳಾದ ಕರಿಬಸಪ್ಪ, ಡಾಗ್ ಸತೀಶ್, ಮಲ್ಲಮ್ಮ (Mallamma) ಅವರು ಸಾಥ್ ನೀಡಿದರು.

‘ಶಕ್ತಿ ಫಿಲ್ಮ್ಸ್’ ಮೂಲಕ ‘ವಿನಾಶ ಕಾಲೆ’ ಸಿನಿಮಾ ನಿರ್ಮಾಣ ಆಗುತ್ತಿದೆ. ತುಮಕೂರು ಮೂಲದ ಎಸ್. ಕಿರಣ್‌ಕುಮಾರ್ ಅವರು ಕಳೆದ ಐದು ವರ್ಷಗಳಿಂದ ಹಲವು ನಿರ್ದೇಶಕರ ಬಳಿ ಅನುಭವ ಪಡೆದುಕೊಂಡು ಈಗ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಪಾವನಿ ಸಿರಿ, ರಿಷಿಕಾ ಗೌಡ, ವೈಷ್ಣವಿ, ರಚನಾ, ಶ್ರೀನಿಧಿ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಶೋಭ ಅವರು ಮಾಂತ್ರಿಕಳಾಗಿ ಕಾಣಿಸಿಕೊಳ್ಳಲಿದ್ದಾರೆ. ಮಂಡ್ಯಸಿದ್ದು ಅವರು ಅಘೋರಿ ಪಾತ್ರ ಮಾಡುತ್ತಿದ್ದಾರೆ. ಬಿಗ್ ಬಾಸ್ ಮಲ್ಲಮ್ಮ, ಪ್ರವಲಿಕಾ, ದಿಶಾ ಮುಂತಾದವರು ನಟಿಸುತ್ತಿದ್ದಾರೆ. ಪಾತ್ರವರ್ಗಕ್ಕೆ ಐದು ಹುಡುಗಿಯರು ಆಯ್ಕೆಯಾಗಿದ್ದಾರೆ. ಹುಡುಗರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಮಾರ್ಚ್ ತಿಂಗಳಿಂದ ಮೂವತ್ತು ದಿನಗಳ ಕಾಲ ಬೆಂಗಳೂರು, ಚಿಕ್ಕಮಗಳೂರು ಮುಂತಾದೆಡೆ ಶೂಟಿಂಗ್ ನಡೆಯುತ್ತದೆ.

ಮಂಜುಕವಿ ಅವರು ‘ವಿನಾಶ ಕಾಲೆ’ ಸಿನಿಮಾದ ಮೂರು ಹಾಡುಗಳಿಗೆ ಸಂಗೀತ ನೀಡಿ ಸಾಹಿತ್ಯ ಬರೆದಿದ್ದಾರೆ. ವಿನಯ್‌ ಗೌಡ ಛಾಯಾಗ್ರಹಣ ಮಾಡಲಿದ್ದಾರೆ. ಜೀವನ್ ಅವರು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕರು ಈ ಸಿನಿಮಾದ ಕತೆ ಏನೆಂಬುದನ್ನು ವಿವರಿಸಿದರು. ಇದು ಸತ್ಯ ಘಟನೆ ಆಧಾರಿತ ಸಿನಿಮಾ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮುಗಿದು ಇಷ್ಟು ದಿನವಾದ್ರೂ ಕಡಿಮೆ ಆಗಿಲ್ಲ ಗಿಲ್ಲಿ ನಟ ಹವಾ

‘ಕಡಿಮೆ ಸಮಯದಲ್ಲಿ ದುಡ್ಡು ಮಾಡಬೇಕೆಂಬ ದುರಾಸೆಯಿಂದ ದೈವ ಸಂಬಂದಕ್ಕೆ ಕೈ ಹಾಕಿದರೆ ಏನೇನು ಅನಾಹುತಗಳು ನಡೆಯುತ್ತದೆ ಎಂಬುದು ಈ ಸಿನಿಮಾದಲ್ಲಿದೆ. ಮಧ್ಯಮ ವರ್ಗದ ಕುಟುಂಬದ ಹುಡುಗರು ಮತ್ತು ಹುಡುಗಿಯರು ಉದ್ಯೋಗ ಅರಸಿಕೊಂಡು ನಗರಕ್ಕೆ ಬರುತ್ತಾರೆ. ಇದರಿಂದ ಧಿಡೀರ್ ಶ್ರೀಮಂತರಾಗಲು ಕೆಟ್ಟ ಹಾದಿಗೆ ಹೋಗುತ್ತಾರೆ. ಅದರ ಪರಿಣಾಮದಿಂದ ಯಾವ ರೀತಿ ತತ್ತರಿಸಿ ಹೋಗುತ್ತಾರೆ ಎಂಬುದನ್ನು ಹಾರರ್ ಥ್ರಿಲ್ಲರ್ ಮಾದರಿಯಲ್ಲಿ ತೋರಿಸುತ್ತೇವೆ’ ಎಂದು ನಿರ್ದೇಶಕರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us